ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ 5 ವರ್ಷದಲ್ಲಿ 8 ಲಕ್ಷ ಕೋಟಿ ರೂ ಹೂಡಿಕೆ: ಪ್ರಹ್ಲಾದ್ ಜೋಷಿ

Pralhad Joshi launches green hydrogen certification scheme: 2030ರ ವೇಳೆಗೆ ಹಸಿರು ಹೈಡ್ರೋಜನ್ ಉತ್ಪಾದನಾ ಕ್ಷೇತ್ರದಲ್ಲಿ 8 ಲಕ್ಷ ಕೋಟಿ ರೂ ಹೂಡಿಕೆ ಮಾಡುವ ಗುರಿ ಇದೆ. ಈ ಹೂಡಿಕೆಯಿಂದ ದೇಶಾದ್ಯಂತ 6 ಲಕ್ಷಕ್ಕೂ ಅಧಿಕ ಉದ್ಯೋಗಸೃಷ್ಟಿ ಆಗಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಇದೇ ವೇಳೆ, ಹಸಿರು ಹೈಡ್ರೋಜನ್ ಸರ್ಟಿಫಿಕೇಶನ್ ಸ್ಕೀಮ್​​ಗೆ ಸಚಿವರು ಚಾಲನೆ ನೀಡಿದ್ದಾರೆ.

ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ 5 ವರ್ಷದಲ್ಲಿ 8 ಲಕ್ಷ ಕೋಟಿ ರೂ ಹೂಡಿಕೆ: ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಶಿ

Updated on: Apr 30, 2025 | 12:09 PM

ನವದೆಹಲಿ, ಏಪ್ರಿಲ್ 30: ಹಸಿರು ಹೈಡ್ರೋಜನ್ ಈ ವಿಶ್ವದ ಭವಿಷ್ಯದ ಇಂಧನ ಎಂದು ಬಣ್ಣಿಸಿರುವ ಕೇಂದ್ರ ಹೊಸ ಮತ್ತು ಮರುಬಳಕೆ ಇಂಧನ ಸಚಿವ ಪ್ರಹ್ಲಾದ್ ಜೋಷಿ (Union New and Renewable energy minister Pralhad Joshi) ಅವರು, ಈ ಗ್ರೀನ್ ಹೈಡ್ರೋಜನ್​​ನ ತಯಾರಿಕೆಗೆ (green hydrogen production) ಅಗತ್ಯವಾಗಿರುವ ತಂತ್ರಜ್ಞಾನ ಅಭಿವೃದ್ಧಿಗೊಳಿಸಲು ಕೈಜೋಡಿಸುವಂತೆ ಎಂಎಸ್​​ಎಂಇಗಳಿಗೆ ಕರೆ ನೀಡಿದ್ದಾರೆ. 2030ರ ವೇಳೆಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌ ದೇಶದಲ್ಲಿ 8 ಲಕ್ಷ ಕೋಟಿ ರೂಗೂ ಹೆಚ್ಚು ಹೂಡಿಕೆ ಮತ್ತು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ನವದೆಹಲಿಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ “ಹಸಿರು ಹೈಡ್ರೋಜನ್ ಸರಬರಾಜು ಸರಪಳಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಅವಕಾಶಗಳು” ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

2030ರ ವೇಳೆಗೆ ದೇಶದಲ್ಲಿ ಸುಮಾರು 125 GW ನವೀಕರಿಸಬಹುದಾದ ಇಂಧನದೊಂದಿಗೆ ವಾರ್ಷಿಕ ಕನಿಷ್ಠ 5 MMT ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ ಗುರಿ ಹೊಂದಿದೆ. ಇದಕ್ಕಾಗಿ ಒಟ್ಟು 8 ಲಕ್ಷ ಕೋಟಿ ರೂಗೂ ಹೆಚ್ಚು ಹೂಡಿಕೆಯಾಗಲಿದೆ. ಅಲ್ಲದೇ, 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಪಳೆಯುಳಿಕೆ ಇಂಧನ ಆಮದು ಕಡಿಮೆ ಆಗುವುದರಿಂದ 1 ಲಕ್ಷ ಕೋಟಿ ರೂ ಉಳಿತಾಯವಾಗಲಿದೆ. ಸುಮಾರು 50 MMT ವಾರ್ಷಿಕ ಹಸಿರುಮನೆ ಅನಿಲ (ಗ್ರೀನ್​ಹೌಸ್ ಗ್ಯಾಸ್ ಎಮಿಶನ್) ಹೊರಸೂಸುವಿಕೆ ತಗ್ಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ
ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್
ಸಂಶೋಧನೆಗೆ ಟ್ಯಾಕ್ಸ್, ಮನರಂಜನೆಗೆ ವಿನಾಯಿತಿ: ಪ್ರೊಫೆಸರ್ ವಿಷಾದ
ಭಾರತದಲ್ಲಿ ವಾಹನೋದ್ಯಮ ಪ್ರಬಲ ಹೇಗೆ?
ಹೊಸ ಆಧಾರ್ ಕಾನೂನು ತಯಾರಿಕೆಗೆ ಸರ್ಕಾರ ಮುಂದು

ಇದನ್ನೂ ಓದಿ: ಇಂಡಸ್​​ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್​​ಬಿಐ ಅನುಮತಿ

ಸಿಂಗಾಪುರ, ಜಪಾನ್‌ ಜತೆ ಭಾರತ ಒಪ್ಪಂದ

ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮುಂಚೂಣಿಯಲ್ಲಿದ್ದು, ಸಿಂಗಾಪುರ ಮತ್ತು ಜಪಾನ್‌ ಸೇರಿದಂತೆ ವಿವಿಧ ದೇಶಗಳಿಗೆ ಗ್ರೀನ್‌ ಹೈಡ್ರೋಜನ್‌ ಪೂರೈಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಸದ್ಯ, 4.12 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಪೂರೈಕೆಗೆ ಒಪ್ಪಂದಗಳಾಗಿವೆ. 2030ರ ವೇಳೆಗೆ 5 ಲಕ್ಷ ಮೆಟ್ರಿಕ್‌ ಟನ್‌ ಗ್ರೀನ್ ಹೈಡ್ರೋಜನ್ ಉತ್ಪಾದನೆ ಗುರಿ ಸಾಧಿಸಲು ಬದ್ಧವಿದ್ದೇವೆ ಎಂದು ಕೇಂದ್ರ ರಿನಿವಬಲ್ ಎನರ್ಜಿ ಸಚಿವರಾದ ಪ್ರಹ್ಲಾದ್ ಜೋಷಿ ತಿಳಿಸಿದರು.

ಹಸಿರು ಹೈಡ್ರೋಜನ್‌ ಸರ್ಟಿಫಿಕೇಶನ್ ಸ್ಕೀಮ್​​​ಗೆ ಚಾಲನೆ

ಇದೇ ವೇಳೆ ಸಚಿವ ಪ್ರಹ್ಲಾದ್ ಜೋಶಿ ಅವರು, ಗ್ರೀನ್ ಹೈಡ್ರೋಜನ್ ಸರ್ಟಿಫಿಕೇಶನ್ ಸ್ಕೀಮ್​​ಗೆ (GHCI) ಚಾಲನೆ ನೀಡಿದರು. ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಪ್ರಮಾಣೀಕರಿಸಲು ಮತ್ತು ಪಾರದರ್ಶಕತೆ, ಮಾರುಕಟ್ಟೆ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವತ್ತ ಈ ಯೋಜನೆ ಒಂದು ಪ್ರಮುಖ ಆರಂಭಿಕ ಹೆಜ್ಜೆಯಾಗಿದೆ ಎಂದರು.

ಇದನ್ನೂ ಓದಿ: 2024-25ರಲ್ಲಿ ದಾಖಲೆಯ 2,707 ಕೋಟಿ ಆಧಾರ್ ದೃಢೀಕರಣ; ಯುಐಡಿಎಐಗೆ ಪ್ರಧಾನಿ ಪ್ರಶಸ್ತಿ

ಖಾಸಗಿ ಹೂಡಿಕೆಗೆ ಉತ್ತೇಜಿಸುವ ಸಂಬಂಧ ಚರ್ಚೆ

MSMEಗಳು, ನೀತಿ ನಿರೂಪಕರು, ತಂತ್ರಜ್ಞಾನ ಪೂರೈಕೆದಾರರು, ಉದ್ಯಮ ಸಂಘಗಳು ಮತ್ತು ಅಂತರಾಷ್ಟ್ರೀಯ ಪಾಲುದಾರರು ಸೇರಿದಂತೆ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ, ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಮುಖ ಚರ್ಚೆ ನಡೆಸಲಾಯಿತು. ಅಲ್ಲದೇ, ಹಸಿರು ಹೈಡ್ರೋಜನ್ ಇಕೋಸಿಸ್ಟಂನಲ್ಲಿ ತ್ವರಿತ ಹೂಡಿಕೆ ಹಾಗೂ ವಿಶ್ವ ಬ್ಯಾಂಕ್, ಐಆರ್‌ಇಡಿಎ, ಕೆಎಫ್‌ಡಬ್ಲ್ಯೂ ಮತ್ತು ಐಐಎಫ್‌ಸಿಎಲ್ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಎಂಎಸ್‌ಎಂಇಗಳಿಗೆ ಗ್ರೀನ್ ಕ್ರೆಡಿಟ್ ಮಾರ್ಗಗಳನ್ನು ವಿನ್ಯಾಸಗೊಳಿಸುವ ಬಗ್ಗೆ ಅಗತ್ಯ ಚರ್ಚೆ ನಡೆಸಲಾಯಿತು.

MNRE ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಮತ್ತಿತರ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ