ಐಪಿಎಲ್ಗೆ ಟ್ಯಾಕ್ಸ್ ಹಾಕಿದ್ರೆ 10 ಹೊಸ ಐಐಟಿ: ಹೀಗೊಂದು ಸಲಹೆ ನೀಡಿದ ಬೆಂಗಳೂರಿನ ಪ್ರೊಫೆಸರ್
IISc professor Mayank Srivastava laments wrong priority in India: ಐಪಿಎಲ್ ಟೂರ್ನಿಯಿಂದ ವರ್ಷಕ್ಕೆ 10,000 ಕೋಟಿ ರೂ ಆದಾಯವನ್ನು ಬಿಸಿಸಿಐ ಪಡೆಯುತ್ತದೆ. ಮೂರು ವರ್ಷ ಐಪಿಎಲ್ ಆದಾಯಕ್ಕೆ ಶೇ. 40 ತೆರಿಗೆ ಹಾಕಿದ್ರೆ ಆ ಹಣದಲ್ಲಿ 10 ಹೊಸ ಐಐಟಿ ನಿರ್ಮಿಸಬಹುದು ಎಂದು ಬೆಂಗಳೂರಿನ ಐಐಎಸ್ಸಿ ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಏಪ್ರಿಲ್ 29: ವಿಶ್ವದಲ್ಲೇ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ಬಿಸಿಸಿಐಗೆ ಅತಿದೊಡ್ಡ ಲಾಭದ ಕುದುರೆ ಐಪಿಎಲ್ (IPL). ವರ್ಷಕ್ಕೆ ಸಾವಿರಾರು ಕೋಟಿ ರೂ ಆದಾಯ ಕೊಡುತ್ತಿದೆ ಈ ಟೂರ್ನಿ. ಸರ್ಕಾರ ಬಿಸಿಸಿಐಗಾಗಲೀ, ಐಪಿಎಲ್ಗಾಗಲೀ ಆದಾಯ ತೆರಿಗೆ ವಿಧಿಸುವುದಿಲ್ಲ. ಐಟಿ ಸ್ಲ್ಯಾಬ್ ದರದ ಪ್ರಕಾರ ಟ್ಯಾಕ್ಸ್ ಹಾಕಿದರೆ ಸರ್ಕಾರಕ್ಕೂ ಭರ್ಜರಿ ಕಲೆಕ್ಷನ್ ಸಿಗುತ್ತದೆ. ಬೆಂಗಳೂರಿನ ಐಐಎಸ್ಸಿ ಪ್ರೊಫೆಸರ್ವೊಬ್ಬರು (IISc prof Mayank Srivastava) ಇದೇ ವಿಚಾರ ಉಲ್ಲೇಖಿಸಿ, ಐಪಿಎಲ್ಗೆ ಟ್ಯಾಕ್ಸ್ ಹಾಕಿ ಎಷ್ಟೆಲ್ಲಾ ಹೊಸ ಐಐಟಿ ಕಟ್ಟಬಹುದು ಎಂದು ಹೇಳಿದ್ದಾರೆ.
ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಅವರು ಲಿಂಕ್ಡ್ ಇನ್ನಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ. ಐಪಿಎಲ್ 2023ರಲ್ಲಿ ಬಿಸಿಸಿಐ 11,770 ಕೋಟಿ ರೂ ಆದಾಯ ಗಳಿಸಿತು. 2024 ಮತ್ತು 2025ರಲ್ಲಿ 12,000-13,500 ಕೋಟಿ ರೂ ಆದಾಯ ಪಡೆಯುವ ಸಾಧ್ಯತೆ ಇದೆ. ಈ ಆದಾಯಕ್ಕೆ ಶೇ. 40 ತೆರಿಗೆ ವಿಧಿಸಿದರೆ ಮೂರು ವರ್ಷದಲ್ಲಿ ಸರ್ಕಾರಕ್ಕೆ 15,000 ಕೋಟಿ ರೂ ಆದಾಯ ಬರುತ್ತದೆ ಎಂದು ಮಯಂಕ್ ಶ್ರೀವಾಸ್ತವ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ದ್ವಿಚಕ್ರ ವಾಹನ ಉದ್ಯಮ ಪ್ರಬಲಗೊಳ್ಳಲು ಮೂರು ಕಾರಣ ಬಿಚ್ಚಿಟ್ಟ ರಾಜೀವ್ ಬಜಾಜ್
‘ಇಷ್ಟು ಹಣವು 10 ಹೊಸ ಐಐಟಿಗಳ ಸ್ಥಾಪನೆಗೆ ಉಪಯೋಗಿಸಬಹುದು. ಅಥವಾ ಒಂದು ನ್ಯಾಷನಲ್ ಡೀಪ್-ಟೆಕ್ ಇನ್ನೋವೇಶನ್ ಕಾರ್ಪಸ್ ರಚನೆಗೆ ಬಳಸಬಹುದು…’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಹಣದ ಕೊರತೆ ಇಲ್ಲ, ಆದ್ಯತೆಯ ಸಮಸ್ಯೆ ಇದೆ…
ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಅವರು ಭಾರತದ ವ್ಯವಸ್ಥೆಯಲ್ಲಿನ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅಮೆರಿಕ, ಚೀನಾ, ಜರ್ಮನಿಯಂಥ ದೇಶಗಳು ವಿಜ್ಞಾನಕ್ಕೆ ಮೊದಲು ಫಂಡಿಂಗ್ ಮಾಡಿ ಸಂಪತ್ತು ಸೃಷ್ಟಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ವಿಜ್ಞಾನಕ್ಕೆ ತಳಹದಿ ನಿರ್ಮಿಸದೆಯೇ ಸಂಪತ್ತು ಅಪೇಕ್ಷಿಸಲಾಗುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
‘ನಾವು ಐಪಿಎಲ್ ಸಂಭ್ರಮಿಸುತ್ತೇವೆ, ಸೆಮಿಕಂಡಕ್ಟರ್ ಆಮದು ಮಾಡುತ್ತೇವೆ. ನಾವು ಬಾಲಿವುಡ್ ನೋಡಿ ರಂಜಿಸುತ್ತೇವೆ, ಆದರೆ, ಆರೋಗ್ಯದಲ್ಲಿ ನಾವೀನ್ಯತೆ ಕೈಬಿಡುತ್ತೇವೆ. ನಾವು ತ್ವರಿತ ಐಪಿಒ ಸಂಭ್ರಮಿಸುತ್ತೇವೆ, ಆದರೆ ಆರ್ ಅಂಡ್ ಡಿಗೆ ಫಂಡಿಂಗ್ ಮರೆಯುತ್ತೇವೆ’ ಎಂದು ಐಐಎಸ್ಸಿ ಪ್ರೊಫೆಸರ್ ವಿಷಾದಿಸಿದ್ದಾರೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ
ಭಾರತದಲ್ಲಿ ಸಂಶೋಧನೆಗೆ ತೆರಿಗೆ ಹಾಕಲಾಗುತ್ತದೆ. ಮನರಂಜನೆಗೆ ತೆರಿಗೆ ವಿನಾಯಿತಿ ಸಿಗುತ್ತದೆ ಎಂದೂ ಅವರು ಕುಟುಕಿದ್ದಾರೆ.
ಭಾರತಕ್ಕೆ ಹಣದ ಕೊರತೆ ಇಲ್ಲ. ಭಾರತೀಯರಿಗೆ ಹಣದ ಕೊರತೆ ಇಲ್ಲ. ಆದರೆ, ಭವಿಷ್ಯಕ್ಕೆ ಹೂಡಿಕೆ ಮಾಡುವ ದೃಷ್ಟಿಯ ಕೊರತೆ ಇದೆ. ಸುಲಭ ಲಾಭಕ್ಕೆ ಯತ್ನಿಸುವ ಬ್ಯುಸಿನೆಸ್ಮ್ಯಾನ್ಗಳು ಗೆಲ್ಲುತ್ತಾರೆ. ಸಂಯಮದಿಂದ ಇಕೋಸಿಸ್ಟಂ ನಿರ್ಮಿಸಲು ಮುಂದಾಗುವ ಆಂಟ್ರಪ್ರನ್ಯೂರ್ಗಳು ಅಪರೂಪವಾಗಿದ್ದಾರೆ ಎಂದು ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಮರುಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Tue, 29 April 25








