ಭಾರತದಲ್ಲಿ ದ್ವಿಚಕ್ರ ವಾಹನ ಉದ್ಯಮ ಪ್ರಬಲಗೊಳ್ಳಲು ಮೂರು ಕಾರಣ ಬಿಚ್ಚಿಟ್ಟ ರಾಜೀವ್ ಬಜಾಜ್
Automobile industry in India: ಭಾರತವು ವಾಹನಗಳಿಗೆ ಬಹಳ ದೊಡ್ಡ ಮಾರುಕಟ್ಟೆ. ಭಾರತೀಯ ಆಟೊಮೊಬೈಲ್ ಕಂಪನಿಗಳ ವಾಹನಗಳು ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಿಗೆ ರಫ್ತಾಗುತ್ತವೆ. ಭಾರತದ ವಾಹನೋದ್ಯಮ ಪ್ರಬಲವಾಗಲು ಮತ್ತು ಜಾಗತಿಕ ಮಟ್ಟದ ಕಂಪನಿಗಳ ನಿರ್ಮಾಣವಾಗಲು ಏನು ಕಾರಣ ಎಂಬುದನ್ನು ರಾಜೀವ್ ಬಜಾಜ್ ತಿಳಿಸುತ್ತಾರೆ.

ಭಾರತದಲ್ಲಿ ಇತ್ತೀಚೆಗೆ ಅತಿ ಪ್ರಬಲವಾಗಿ ಬೆಳೆಯುತ್ತಿರುವ ಉದ್ಯಮ ಎಂದರೆ ಅದು ವಾಹನದ್ದು. ಅದರಲ್ಲೂ ದ್ವಿಚಕ್ರ ವಾಹನಗಳ ಮಾರಾಟ ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ನ ಮುಖ್ಯಸ್ಥ ರಾಜೀವ್ ಬಜಾಜ್ (Rajiv Bajaj) ಮಾಧ್ಯಮ ಸಂದರ್ಶನವೊಂದರಲ್ಲಿ ಹಲವು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಭಾರತದಲ್ಲಿ ದ್ವಿಚಕ್ರ ವಾಹನ ಉದ್ಯಮ ಅದ್ಭುತ ಯಶಸ್ಸು ಹೊಂದಲು ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ. ಹಾಗೆಯೇ, ಒಂದು ಕಾಲದಲ್ಲಿ ಹಿಂದುಳಿದ ರಾಜ್ಯವಾಗಿದ್ದ ಉತ್ತರಪ್ರದೇಶದಲ್ಲಿ ಇವತ್ತು ದ್ವಿಚಕ್ರ ವಾಹನಗಳ ಮಾರಾಟ ಗಣನೀಯವಾಗಿ ಹೆಚ್ಚುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಿಎನ್ಬಿಸಿಟಿವಿ18ಗೆ ನೀಡಿದ ಸಂದರ್ಶನದಲ್ಲಿ ರಾಜೀವ್ ಬಜಾಜ್ ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಉತ್ತಮಗೊಂಡ ರಸ್ತೆ ಮತ್ತು ಭದ್ರತೆ ಉ.ಪ್ರ.ದಲ್ಲಿ ವಾಹನ ಮಾರಾಟ ಹೆಚ್ಚಲು ಕಾರಣವಾ?
ಕಳೆದ 12 ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಅಚ್ಚರಿ ರೀತಿಯಲ್ಲಿ ಹೆಚ್ಚಾಗಿದೆಯಂತೆ. ಅದಕ್ಕೆ ಕಾರಣ ಅಲ್ಲಿನ ಉತ್ತಮ ರಸ್ತೆ, ಭದ್ರತೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜೀವ್ ಬಜಾಜ್ ಹೇಳಿದ್ದಿದು:
‘ಉತ್ತರಪ್ರದೇಶದಲ್ಲಿ ಅದ್ಭುತವಾದ ರಸ್ತೆಗಳ ಬಗ್ಗೆ ಮಾತನಾಡುವುದನ್ನು ಕೇಳಿದ್ದೇನೆ. ಅಲ್ಲಿ ಭದ್ರತೆ ಉತ್ತಮವಾಗಿದೆ ಎನ್ನುತ್ತಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಚಲಾಯಿಸುತ್ತಾರೆ ಎಂದು ಹೇಳುವವರಿದ್ದಾರೆ. ನಾನೆಂದೂ ಉತ್ತರಪ್ರದೇಶ ರಾಜ್ಯಕ್ಕೆ ಹೋಗಿಲ್ಲ. ಹೀಗಾಗಿ ನನಗೆ ಪ್ರತ್ಯಕ್ಷ ಜ್ಞಾನ ಇಲ್ಲ. ಈ ವಿಚಾರಗಳೆಲ್ಲವೂ ಮಾರುಕಟ್ಟೆಗಳಿಂದ ಬರುತ್ತವೆ’.
ಇದನ್ನೂ ಓದಿ: ನೌಕಾಪಡೆಗೆ ಬರಲಿವೆ 64,000 ಕೋಟಿ ರೂ ಮೊತ್ತದ 26 ರಫೇಲ್ ಯುದ್ಧವಿಮಾನಗಳು; ಭಾರತ-ಫ್ರಾನ್ಸ್ ಒಪ್ಪಂದ
ಉತ್ತರಪ್ರದೇಶ ರಾಜ್ಯವು ಹಲವು ವರ್ಷಗಳಿಂದಲೂ ದ್ವಿಚಕ್ರ ವಾಹನ ಮಾರಾಟದಲ್ಲಿ ನಂಬರ್ ಒನ್ ಎನಿಸಿದೆ. ದೇಶದ ಶೇ 15ರಷ್ಟು ಬೈಕುಗಳು ಉತ್ತರಪ್ರದೇಶ ರಾಜ್ಯವೊಂದರಲ್ಲೇ ಮಾರಾಟವಾಗುತ್ತವೆ. ಆದರೆ, ಕಾರುಗಳ ಮಾರಾಟದಲ್ಲಿ ಉ.ಪ್ರ. ಸ್ವಲ್ಪ ಹಿಂದಿದೆ. ಶೇ. 11ರಷ್ಟು ಕಾರುಗಳು ಉ.ಪ್ರದಲ್ಲಿ ಸೇಲ್ ಆಗುತ್ತವೆ.
ಭಾರತದಲ್ಲಿ ದ್ವಿಚಕ್ರ ವಾಹನ ಉದ್ಯಮ ಪ್ರಬಲವಾಗಿರಲು ಕಾರಣಗಳೇನು?
ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಗಳಲ್ಲಿ ಭಾರತವೂ ಇದೆ. ಬಜಾಜ್ ಸಂಸ್ಥೆ ಭಾರತದ ಮೂರು ಪ್ರಮುಖ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದು. ಜಾಗತಿಕ ಮಟ್ಟದಲ್ಲೂ ಈ ಮೂರು ಕಂಪನಿಗಳು ಟಾಪ್-10 ಪಟ್ಟಿಯಲ್ಲಿ ಬರುತ್ತವೆ. ಭಾರತದ ಕಂಪನಿಗಳು ವಿಶ್ವದರ್ಜೆ ಮಟ್ಟಕ್ಕೆ ಹೋಗಲು ರಾಜೀವ್ ಬಜಾಜ್ ಮೂರು ಕಾರಣ ನೀಡಿದ್ದಾರೆ.
ಮೊದಲನೆಯದು, ಭಾರತದ ಆರ್ಥಿಕ ಗಾತ್ರ ಮತ್ತು ಬೃಹತ್ ಜನಸಂಖ್ಯೆಯು ದ್ವಿಚಕ್ರ ವಾಹನಗಳಿಗೆ ಬಹುದೊಡ್ಡ ಮಾರುಕಟ್ಟೆ ಸೃಷ್ಟಿಸಿದೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ವಮ್ ಸಂಸ್ಥೆ ಆಯ್ಕೆ
ಎರಡನೆಯದು, ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಮತ್ತು ಸುರಕ್ಷತೆ ಹೆಚ್ಚಿಸಲು ಸರ್ಕಾರ ಬಿಗಿನಿಯಮ ಮಾಡಿದೆ. ಇದರಿಂದ ವಾಹನ ಕಂಪನಿಗಳು ಮಾರುಕಟ್ಟೆಯಲ್ಲಿ ಉಳಿಯಬೇಕೆಂದರೆ ತಮ್ಮ ಗುಣಮಟ್ಟ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಇದು ಉದ್ಯಮದ ಬೆಳವಣಿಗೆ ಒಂದು ಕಾರಣ.
ಮೂರನೆಯ ಕಾರಣ ಎಂದರೆ, ಗ್ರಾಹಕರ ಆದ್ಯತೆಯ ಉತ್ಪನ್ನಗಳನ್ನು ನೀಡುತ್ತಿರುವುದು. ಭಾರತದ ದ್ವಿಚಕ್ರ ವಾಹನ ಬಳಕೆದಾರರು ಅಗ್ಗದ ಬೆಲೆಗಿಂದ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಾರೆ ಎಂಬುದು ರಾಜೀವ್ ಬಜಾಜ್ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








