ಏಪ್ರಿಲ್​ನಲ್ಲಿ ದಾಖಲೆ ಜಿಎಸ್​ಟಿ ಸಂಗ್ರಹ; ತಮಿಳುನಾಡನ್ನು ಮೀರಿಸಿದ ಉತ್ತರಪ್ರದೇಶ; ಕರ್ನಾಟಕದಲ್ಲಿ ಸಂಗ್ರಹವಾದ ತೆರಿಗೆ ಇಷ್ಟು

|

Updated on: May 01, 2024 | 2:56 PM

GST collection in April: 2024ರ ಎಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂ ನಷ್ಟು ಜಿಎಸ್​ಟಿ ತೆರಿಗೆ ಸಂಗ್ರಹ ಆಗಿದೆ. ಹಣಕಾಸು ಸಚಿವಾಲಯ ಮೇ 1ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾಸಿಕ ಜಿಎಸ್​ಟಿ ಸಂಗ್ರಹ 2 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು. ಕರ್ನಾಟಕದಲ್ಲಿ ತೆರಿಗೆ ಸಂಗ್ರಹ 15,000 ಕೋಟಿ ರೂ ಗಡಿ ದಾಟಿ ಹೋಗಿದೆ. ಉತ್ತರಪ್ರದೇಶದಲ್ಲಿ ತಮಿಳುನಾಡಿಗಿಂತಲೂ ಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ. ಆರು ರಾಜ್ಯಗಳು ಈ ಬಾರಿ 12,000 ಕೋಟಿ ರೂಗಿಂತ ಹೆಚ್ಚು ತೆರಿಗೆ ಸಂಗ್ರಹಿಸಿರುವುದು ವಿಶೇಷ.

ಏಪ್ರಿಲ್​ನಲ್ಲಿ ದಾಖಲೆ ಜಿಎಸ್​ಟಿ ಸಂಗ್ರಹ; ತಮಿಳುನಾಡನ್ನು ಮೀರಿಸಿದ ಉತ್ತರಪ್ರದೇಶ; ಕರ್ನಾಟಕದಲ್ಲಿ ಸಂಗ್ರಹವಾದ ತೆರಿಗೆ ಇಷ್ಟು
ಜಿಎಸ್​​ಟಿ
Follow us on

ನವದೆಹಲಿ, ಮೇ 1: ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆ ಸಂಗ್ರಹವಾಗಿದೆ (GST collection) ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಬುಧವಾರ ಮಾಹಿತಿ ಬಿಡುಗಡೆ ಮಾಡಿದೆ. ಜಿಎಸ್​ಟಿ ಸಂಗ್ರಹ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಆರ್ಥಿಕ ಬೆಳವಣಿಗೆ ಮತ್ತು ಆಡಳಿತ ಕ್ಷಮತೆ ಹೆಚ್ಚಾಗಿರುವುದಕ್ಕೆ ಇಷ್ಟೊಂದು ತೆರಿಗೆ ಸಂಗ್ರಹ ಏರಿಕೆಯು ಕನ್ನಡಿ ಹಿಡಿದಿದೆ. ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳು ಮೊದಲ ಬಾರಿಗೆ ಒಂದು ತಿಂಗಳ ತೆರಿಗೆ ಸಂಗ್ರಹ 12,000 ಕೋಟಿ ರೂ ಮೈಲಿಗಲ್ಲು ಮುಟ್ಟಿವೆ. ಕರ್ನಾಟಕದ ತೆರಿಗೆ ಸಂಗ್ರಹ 15,000 ಕೋಟಿ ರೂ ಗಡಿ ದಾಟಿ ಹೋಗಿದೆ. ಆರು ರಾಜ್ಯಗಳು ತಲಾ 12,000 ಕೋಟಿ ರೂ ತೆರಿಗೆ ಸಂಗ್ರಹ ಮಾಡಿರುವುದು ಇದೇ ಮೊದಲಾಗಿದೆ. ಉತ್ತರಪ್ರದೇಶದ ಜಿಎಸ್​ಟಿ ಸಂಗ್ರಹ ತಮಿಳುನಾಡಿಗಿಂತಲೂ ಹೆಚ್ಚಿದೆ.

2024ರ ಏಪ್ರಿಲ್ ತಿಂಗಳ ಜಿಎಸ್​ಟಿ ಸಂಗ್ರಹ ವಿವರ

ಒಟ್ಟು ಜಿಎಸ್​ಟಿ ಸಂಗ್ರಹ: 2.10 ಲಕ್ಷ ಕೋಟಿ ರೂ

  • ಸಿಜಿಎಸ್​ಟಿ: 43,846 ಕೋಟಿ ರೂ
  • ಎಸ್​ಜಿಎಸ್​ಟಿ: 53,538 ಕೋಟಿ ರೂ
  • ಐಜಿಎಸ್​ಟಿ: 99,623 ಕೋಟಿ ರೂ
  • ಸೆಸ್: 13,260 ಕೋಟಿ ರೂ

ಸಿಜಿಎಸ್​ಟಿ ಎಂಬುದು ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಪಾಲು. ಎಸ್​ಜಿಎಸ್​​ಟಿ ಎಂಬುದು ರಾಜ್ಯ ಸರ್ಕಾರಗಳಿಗೆ ಹೋಗುವಂಥದ್ದು. ಐಜಿಎಸ್​ಟಿ ಎಂಬುದು ಒಂದು ರಾಜ್ಯದಲ್ಲಿರುವ ಸಂಸ್ಥೆ ಬೇರೆ ರಾಜ್ಯದ ಇನ್ನೊಂದು ಸಂಸ್ಥೆ ಜೊತೆ ವ್ಯವಹರಿಸುವಾಗ ನೀಡುವ ತೆರಿಗೆ ಆಗಿರುತ್ತದೆ. ಈ ಐಜಿಎಸ್​ಟಿಯ ಹಣದಲ್ಲಿ ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳು ಪಾಲು ಪಡೆಯುತ್ತವೆ.

ಇದನ್ನೂ ಓದಿ: ಕಾರ್ಮಿಕರ ದಿನದಂದು ಷೇರುಪೇಟೆಗೆ ರಜೆಯಾ? ಮೇ ತಿಂಗಳಲ್ಲಿ ಯಾವ್ಯಾವ ದಿನ ಇದೆ ರಜೆ? ಇಲ್ಲಿದೆ ಪಟ್ಟಿ

ಎಪ್ರಿಲ್ ತಿಂಗಳಲ್ಲಿ ಐಜಿಎಸ್​ಟಿ ಸಂಗ್ರಹವಾಗಿರುವುದು 99,623 ಕೋಟಿ ರೂ. ಇದರಲ್ಲಿ ಸಿಜಿಎಸ್​ಟಿ ಖಾತೆಗೆ 50,307 ಕೋಟಿ ರೂ ಅನ್ನು ಹಂಚಲಾಗಿದೆ. ಎಸ್​ಜಿಎಸ್​ಟಿ ಖಾತೆಗೆ 41,600 ಕೋಟಿ ರೂ ಕೊಡಲಾಗಿದೆ. ಅಂತಿಮವಾಗಿ ಸಿಜಿಎಸ್​ಟಿ ಮೊತ್ತ 94,153 ಕೋಟಿ ರೂ ಅದರೆ, ಎಸ್​ಜಿಎಸ್​ಟಿ ಮೊತ್ತ 95,138 ಕೋಟಿ ರೂ ಅಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಕ್ಸ್ ಪೋಸ್ಟ್

ಏಪ್ರಿಲ್ ತಿಂಗಳಲ್ಲಿ ಹೆಚ್ಚು ಜಿಎಸ್​ಟಿ ಸಂಗ್ರಹ ಕಂಡಿರುವ ರಾಜ್ಯಗಳಿವು

  1. ಮಹಾರಾಷ್ಟ್ರ: 37,671 ಕೋಟಿ ರೂ
  2. ಕರ್ನಾಟಕ: 15,978 ಕೋಟಿ ರೂ
  3. ಗುಜರಾತ್: 13,301 ಕೋಟಿ ರೂ
  4. ಉತ್ತರಪ್ರದೇಶ: 12,290 ಕೋಟಿ ರೂ
  5. ತಮಿಳುನಾಡು: 12,210 ಕೋಟಿ ರೂ
  6. ಹರ್ಯಾಣ: 12,168 ಕೋಟಿ ರೂ
  7. ಪಶ್ಚಿಮ ಬಂಗಾಳ: 7,293 ಕೋಟಿ ರೂ
  8. ತೆಲಂಗಾಣ: 6,236 ಕೋಟಿ ರೂ
  9. ಒಡಿಶಾ: 5,902 ಕೋಟಿ ರೂ
  10. ರಾಜಸ್ಥಾನ: 5,558 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ