GST: ಜುಲೈ ತಿಂಗಳಲ್ಲಿ ಜಿಎಸ್ಟಿ ಶೇ. 11ರಷ್ಟು ಹೆಚ್ಚು ಸಂಗ್ರಹ; ಕರ್ನಾಟಕದಲ್ಲಿ ಎಷ್ಟಿದೆ ಕಲೆಕ್ಷನ್?
2023 July, GST Collections: ಭಾರತದಲ್ಲಿ ಐದನೇ ಬಾರಿ ಒಂದು ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.6 ಲಕ್ಷ ಗಡಿ ದಾಟಿದೆ. ಜುಲೈ ತಿಂಗಳಲ್ಲಿ ಒಟ್ಟು 1.65 ಲಕ್ಷ ಜಿಎಸ್ಟಿ ತೆರಿಗೆ ಸಿಕ್ಕಿದೆ. ಇದರಲ್ಲಿ ಕೇಂದ್ರಕ್ಕೆ 69,558 ಕೋಟಿ ರೂ ಸಿಕ್ಕರೆ ರಾಜ್ಯಗಳಿಗೆ 70,811 ಕೋಟಿ ರೂ ಹಂಚಿಕೆಯಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಮುಂದುವರಿದಿದೆ.
ನವದೆಹಲಿ, ಆಗಸ್ಟ್ 1: ಭಾರತದಲ್ಲಿ ತಿಂಗಳಿಗೆ 1.6 ಲಕ್ಷ ಜಿಎಸ್ಟಿ ಸಂಗ್ರಹ (GST Collection) ಈಗ ಹೊಸ ಕನಿಷ್ಠ ಮಟ್ಟವಾದಂತಿದೆ. ಜುಲೈ ತಿಂಗಳಲ್ಲಿ ದೇಶದೆಲ್ಲೆಡೆ ಸಂಗ್ರಹವಾದ ಜಿಎಸ್ಟಿ ಮೊತ್ತ 1,65,105 ಕೋಟಿ ರೂ ಎಂದು ಸರಕಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶದಲ್ಲಿ ಹೇಳಲಾಗಿದೆ. 2022ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ಜುಲೈನಲ್ಲಿ ಜಿಎಸ್ಟಿ ಸಂಗ್ರಹ ಶೇ. 11ರಷ್ಟು ಹೆಚ್ಚಾಗಿದೆ. ಜಿಎಸ್ಟಿ ಜಾರಿಗೆ ಬಂದ ಬಳಿಕ ಐದನೇ ಬಾರಿ ಜಿಎಸ್ಟಿ ಸಂಗ್ರಹ 1.6 ಲಕ್ಷ ಕೋಟಿ ಮಟ್ಟಕ್ಕಿಂತ ಮೇಲೆ ಹೋಗಿರುವುದು.
2023ರ ಜುಲೈನಲ್ಲಿ ಜಿಎಸ್ಟಿ ಸಂಗ್ರಹ ವಿವರ
- ಒಟ್ಟು ಜಿಎಸ್ಟಿ: 1,65,105 ಕೋಟಿ ರೂ
- ಸಿಜಿಎಸ್ಟಿ: 29,773 ಕೋಟಿ ರೂ
- ಎಸ್ಜಿಎಸ್ಟಿ: 37,623 ಕೋಟಿ ರೂ
- ಐಜಿಎಸ್ಟಿ: 85,930 ಕೋಟಿ ರೂ
ಇದನ್ನೂ ಓದಿ: ITR: ಆದಾಯ ತೆರಿಗೆ ರಿಟರ್ನ್ ಇನ್ನೂ ಎಷ್ಟು ಮಂದಿ ಫೈಲ್ ಮಾಡಿಲ್ಲ? ತಡವಾಗಿ ಸಲ್ಲಿಸಿದವರು ದಂಡ ಎಷ್ಟು ಕಟ್ಟಬೇಕು?
ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಐಜಿಎಸ್ಟಿ ಸೇರಿ ಒಟ್ಟು ಜಿಎಸ್ಟಿ ಸಂಗ್ರಹ ಆಗುತ್ತದೆ. ಇಲ್ಲಿ ಸಿಜಿಎಸ್ಟಿ ಎಂದರೆ ಕೇಂದ್ರಕ್ಕೆ ಸಂದಾಯವಾಗುವ ತೆರಿಗೆಯಾಗಿದೆ. ಎಸ್ಜಿಎಸ್ಟಿ ಎಂಬುದು ರಾಜ್ಯಗಳ ಪಾಲಾಗುವ ತೆರಿಗೆ. ಇನ್ನು, ಐಜಿಎಸ್ಟಿ ಹಣವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಆಗುತ್ತದೆ.
ಐಜಿಎಸ್ಟಿ ಎಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ಜನರು ಅಥವಾ ಸಂಸ್ಥೆಗಳ ಮಧ್ಯೆ ನಡೆಯುವ ವ್ಯಾಪಾರಕ್ಕೆ ವಿಧಿಸುವ ತೆರಿಗೆಯಾಗಿದೆ. ಜುಲೈ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಐಜಿಎಸ್ಟಿಯಲ್ಲಿ 39,785 ಕೋಟಿ ರೂ ಹಣವು ಕೇಂದ್ರಕ್ಕೆ ಹೋದರೆ, 33,188 ಕೋಟಿ ರೂ ತೆರಿಗೆ ಹಣ ರಾಜ್ಯಗಳಿಗೆ ಹೋಗಿದೆ.
ಒಟ್ಟು ತೆರಿಗೆಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?
- ಜಿಎಸ್ಟಿಯಲ್ಲಿ ಕೇಂದ್ರಕ್ಕೆ ಸಿಕ್ಕ ಹಣ: 69,558 ಕೋಟಿ ರೂ
- ರಾಜ್ಯಗಳಿಗೆ ಸಿಕ್ಕ ಹಣ: 70,811 ಕೋಟಿ ರೂ
ಯಾವ್ಯಾವ ತಿಂಗಳು 1.6 ಲಕ್ಷ ಜಿಎಸ್ಟಿ ಸಂಗ್ರಹವಾಗಿದ್ದು?
- 2022ರ ಮಾರ್ಚ್
- 2022ರ ಏಪ್ರಿಲ್
- 2023ರ ಏಪ್ರಿಲ್
- 2023ರ ಜೂನ್
- 2023ರ ಜುಲೈ
ಇದನ್ನೂ ಓದಿ: ಮುಂದಿನ 7 ವರ್ಷದಲ್ಲಿ ಭಾರತದ ತಲಾದಾಯ ಶೇ. 70ರಷ್ಟು ಏರಿಕೆ ಸಾಧ್ಯತೆ; ಕರ್ನಾಟಕದ ಪಾತ್ರ ಎಷ್ಟು?
ಅತ್ಯಧಿಕ ಜಿಎಸ್ಟಿ ಸಂಗ್ರಹವಾದ ಟಾಪ್ 10 ರಾಜ್ಯಗಳು
- ಮಹಾರಾಷ್ಟ್ರ: 26,064 ಕೋಟಿ ರೂ
- ಕರ್ನಾಟಕ: 11,505 ಕೋಟಿ ರೂ
- ತಮಿಳುನಾಡು: 10,022 ಕೋಟಿ ರೂ
- ಗುಜರಾತ್: 9183 ಕೋಟಿ ರೂ
- ಉತ್ತರಪ್ರದೇಶ: 8,802 ಕೋಟಿ ರೂ
- ಹರ್ಯಾಣ: 7,953 ಕೋಟಿ ರೂ
- ದೆಹಲಿ: 5,405 ಕೋಟಿ ರೂ
- ಪಶ್ಚಿಮ ಬಂಗಾಳ: 5,128 ಕೋಟಿ ರೂ
- ತೆಲಂಗಾಣ: 4,849 ಕೋಟಿ ರೂ
- ಒಡಿಶಾ: 4,245 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ