ಮುಂದಿನ 7 ವರ್ಷದಲ್ಲಿ ಭಾರತದ ತಲಾದಾಯ ಶೇ. 70ರಷ್ಟು ಏರಿಕೆ ಸಾಧ್ಯತೆ; ಕರ್ನಾಟಕದ ಪಾತ್ರ ಎಷ್ಟು?
Per Capita Income: ಭಾರತದಲ್ಲಿ 2,450 ಡಾಲರ್ ಇರುವ ತಲಾದಾಯ 2030ರಲ್ಲಿ 4,000 ಡಾಲರ್ ಮಟ್ಟ ಮುಟ್ಟುವ ನಿರೀಕ್ಷೆ ಇದೆ ಎಂದು ಸ್ಟಾಂಡರ್ಡ್ ಚಾರ್ಟರ್ಡ್ ಸಂಸ್ಥೆ ಅಂದಾಜು ಮಾಡಿದೆ. ಕರ್ನಾಟಕದ ತಲಾದಾಯ 6,000 ಡಾಲರ್ ಮಟ್ಟ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ, ಆಗಸ್ಟ್ 1: ಭಾರತ ಒಟ್ಟಾರೆ ಜಿಡಿಪಿಯಲ್ಲಿ ವಿಶ್ವದ ಅಗ್ರಮಾನ್ಯ ದೇಶ ಎನಿಸಿದರೂ ವ್ಯಕ್ತಿಗತ ಆದಾಯ ಗಳಿಕೆಯಲ್ಲಿ (Annual Income Earning) ತೀರಾ ಹಿಂದುಳಿದಿರುವುದು ಹೌದು. ತಲಾದಾಯ ಗಳಿಕೆಯಲ್ಲಿ (Per Capita Income) ಭಾರತ 139ನೇ ಸ್ಥಾನದಲ್ಲಿದೆ. ಶ್ರೀಲಂಕಾ, ನಮೀಬಿಯಾ, ಇಂಡೋನೇಷ್ಯಾ, ಸುರಿನಾಮ್ ಮೊದಲಾದ ಹಲವು ದೇಶಗಳು ಭಾರತಕ್ಕಿಂತ ಮೇಲಿವೆ. ಭಾರತದ ತಲಾದಾಯ 2,450 ಡಾಲರ್ ಇದೆ. ಅಂದರೆ ಭಾರತೀಯರ ವೈಯಕ್ತಿಕ ಆದಾಯ ಗಳಿಕೆ ಸರಾಸರಿಯಾಗಿ ಸುಮಾರು 2 ಲಕ್ಷ ರುಪಾಯಿ ಆಗುತ್ತದೆ. 13,440 ಡಾಲರ್ ಇರುವ ವಿಶ್ವದ ಸರಾಸರಿ ತಲಾದಾಯಕ್ಕೆ ಹೋಲಿಸಿದರೆ ಬಹಳ ಕಡಿಮೆ. ಆಶಾದಾಯಕ ಸುದ್ದಿ ಎಂದರೆ ಭಾರತದ ತಲಾದಾಯ ಮುಂದಿನ 7 ವರ್ಷದಲ್ಲಿ ಶೇ. 70ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈಗ 2,450 ಡಾಲರ್ ಇರುವ ಭಾರತದ ತಲಾದಾಯ 2030ರಲ್ಲಿ 4,000 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ವರದಿ ಹೇಳಿದೆ.
ತಲಾದಾಯದಲ್ಲಿ ಭಾರತ ಸಾಧಿಸಲಿರುವ ಪ್ರಗತಿಯು ಜಿಡಿಪಿಗೆ ಇನ್ನಷ್ಟು ಪುಷ್ಟಿ ಕೊಡಲಿದೆ. 2030ರಲ್ಲಿ ಭಾರತದ್ದು 6 ಟ್ರಿಲಿಯನ್ ಜಿಡಿಪಿಯದ್ದಾಗಲಿದೆ. 2023ರಲ್ಲಿ ಭಾರತದ ಜಿಡಿಪಿ 2.1 ಟ್ರಿಲಿಯನ್ ಡಾಲರ್ ಇದೆ. ಏಳು ವರ್ಷದಲ್ಲಿ ಎರಡು ಪಟ್ಟಿಗೂ ಹೆಚ್ಚು ಮಟ್ಟದಲ್ಲಿ ಆರ್ಥಿಕತೆ ವೃದ್ಧಿಸಲಿದೆ. ತಲಾದಾಯ ಹೆಚ್ಚಳದಿಂದಾಗಿ ವೈಯಕ್ತಿಕ ಮಟ್ಟದಲ್ಲಿ ವೆಚ್ಚಗಳು ಅಥವಾ ಆಂತರಿಕ ಅನುಭೋಗ ಹೆಚ್ಚಾಗಲಿದ್ದು, ಅದರಿಂದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ಹಾಗೆಯೇ, ಜಿಡಿಪಿ ಬೆಳವಣಿಗೆಗೆ ಈ ಆಂತರಿಕ ಅನುಭೋಗಕ್ಕಿಂತ ಬಾಹ್ಯ ವ್ಯಾಪಾರ (ಎಕ್ಸ್ಟರ್ನಲ್ ಟ್ರೇಡ್) ಹೆಚ್ಚು ಪ್ರಭಾವ ಬೀರುತ್ತದೆ.
ಇದನ್ನೂ ಓದಿ: ಆಗಸ್ಟ್ನಲ್ಲಿನ ಬದಲಾವಣೆಗಳು; ನಿಯಮ, ಜಿಎಸ್ಟಿ, ಗಡುವು, ಬೆಲೆ ವ್ಯತ್ಯಯಗಳ್ಯಾವುವು? ಇಲ್ಲಿದೆ ಪಟ್ಟಿ
ಭಾರತದ ತಲಾದಾಯ ಮತ್ತು ಜಿಡಿಪಿಯಲ್ಲಿ ಕರ್ನಾಟಕದ ಪಾತ್ರ
2011ರಲ್ಲಿ ಭಾರತದ ತಲಾದಾಯ 1,413 ಡಾಲರ್ ಇತ್ತು. 2021ರಲ್ಲಿ ಅದು 2,150 ಡಾಲರ್ಗೆ ಏರಿತು. ಇದೀಗ ಅದು 2,450 ಡಾಲರ್ ತಲುಪಿದೆ. ದೇಶದ ಜಿಡಿಪಿಗೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ಕೊಡುಗೆ ಗಣನೀಯವಾಗಿದೆ. ದೆಹಲಿ, ಹರ್ಯಾಣ, ತೆಲಂಗಾಣ, ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ದೇಶದ ಶೇ. 20ರಷ್ಟು ಜಿಡಿಪಿ ಹೊಂದಿವೆ. ಈ ಆರು ರಾಜ್ಯಗಳು 2030ರಲ್ಲಿ 6,000 ಡಾಲರ್ ತಲಾದಾಯ ರಾಜ್ಯಗಳ ಗುಂಪಿಗೆ ಸೇರುವ ನಿರೀಕ್ಷೆ ಇದೆ.
ಸದ್ಯ ಅತಿ ಹೆಚ್ಚು ತಲಾದಾಯ ಇರುವ ರಾಜ್ಯ ಎಂದರೆ ತೆಲಂಗಾಣ. ನಂತರದ ಸ್ಥಾನ ಕರ್ನಾಟಕದ್ದು. ಇವೆರಡು ರಾಜ್ಯಗಳಲ್ಲಿ ಕ್ರಮವಾಗಿ 2.75 ಲಕ್ಷ ಹಾಗೂ 2.65 ಲಕ್ಷ ರೂ ತಲಾದಾಯ ಇದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳು ನಂತರದ ಸ್ಥಾನದಲ್ಲಿವೆ.
ಇದನ್ನೂ ಓದಿ: ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್ನಿಂದ ಹೊರಬೀಳಲು ಇಟಲಿ ಅಣಿ; ಹಿಂದಿನ ಸರ್ಕಾರದ ಕ್ರಮವನ್ನು ದುರುಳತನ ಎಂದು ಟೀಕಿಸಿದ ಸಚಿವ
ಸೋಜಿಗ ಎಂದರೆ, 2030ರಲ್ಲಿ ಈ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಆಗುವ ನಿರೀಕ್ಷೆ ಇದೆ. ಟಾಪ್ 2 ರಾಜ್ಯಗಳಲ್ಲಿ ತೆಲಂಗಾಣ, ಕರ್ನಾಟಕದ ಬದಲು ಗುಜರಾತ್ ಮತ್ತು ಮಹಾರಾಷ್ಟ್ರ ಸೇರಲಿವೆ. ಕರ್ನಾಟಕ 2ರಿಂದ 4ನೇ ಸ್ಥಾನಕ್ಕೆ ಇಳಿಯಬಹುದು.
ದೊಡ್ಡ ರಾಜ್ಯಗಳಾದ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ತಲಾದಾಯವು ರಾಷ್ಟ್ರೀಯ ಸರಾಸರಿಗಿಂತ ಕೆಳಗಿರುವ ಸಾಧ್ಯತೆ ಇದೆಯಾದರೂ ಈಗಿರುವ ತಲಾದಾಯಕ್ಕಿಂತ ಬಹಳ ಹೆಚ್ಚಿನ ಮಟ್ಟಕ್ಕೆ ಇವು ಪ್ರಗತಿ ಕಾಣುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ