ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ಕರ್ನಾಟಕ ಸಮೀಪಿಸಿದ ಗುಜರಾತ್
GST collections in 2024 May: ಭಾರತದಲ್ಲಿ 2024ರ ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.73 ಲಕ್ಷ ಕೋಟಿ ರೂ ಆಗಿದೆ. ರೀಫಂಡ್ ಅನ್ನು ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಸಂಗ್ರಹ 1.44 ಲಕ್ಷ ಕೋಟಿ ರೂ ಆಗಿದೆ. ಈ ಪೈಕಿ ಕೇಂದ್ರಕ್ಕೆ 70,928 ಕೋಟಿ ರೂ ಪಾಲಾದರೆ, ರಾಜ್ಯಗಳಿಗೆ 72,999 ಕೋಟಿ ರೂ ಪಾಲು ಸಿಕ್ಕಿದೆ. ಅತಿ ಹೆಚ್ಚು ಜಿಎಸ್ಟಿ ಸಂಗ್ರಹವಾಗುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಕರ್ನಾಟಕ, ಗುಜರಾತ್ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಉತ್ತರಪ್ರದೇಶ ರಾಜ್ಯ ತಮಿಳುನಾಡು ಮತ್ತು ಹರ್ಯಾಣಕ್ಕಿಂತ ತುಸು ಮಾತ್ರವೇ ಕಡಿಮೆ ಕಲೆಕ್ಷನ್ ಹೊಂದಿದ್ದು ಆರನೇ ಸ್ಥಾನ ಪಡೆದಿದೆ.
ನವದೆಹಲಿ, ಜೂನ್ 2: ಭಾರತದಲ್ಲಿ ನೇರ ತೆರಿಗೆ (Direct taxes) ಮತ್ತು ಪರೋಕ್ಷ ತೆರಿಗೆ (Indirect taxes) ಎರಡೂ ಕೂಡ ಸಖತ್ತಾಗಿ ಏರಿಕೆ ಆಗುತ್ತಿದೆ. ದೇಶದಲ್ಲಿ ವಾಣಿಜ್ಯ ವಹಿವಾಟು ಮತ್ತು ಆದಾಯ ಸೃಷ್ಟಿ ಉತ್ತಮವಾಗಿ ಆಗುತ್ತಿರುವುದರ ಸಂಕೇತವಾಗಿದೆ. ದಾಖಲೆಯ ನೇರ ತೆರಿಗೆ ಸಂಗ್ರಹವಾದ ಬೆನ್ನಲ್ಲೇ ಈಗ ಇನ್ಡೈರೆಕ್ಟ್ ಟ್ಯಾಕ್ಸ್ ಆದ ಜಿಎಸ್ಟಿ ಅಂಕಿ ಅಂಶ ಹೊರಬಂದಿದೆ. ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2024ರ ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ರೂ ಗ್ರಾಸ್ ಜಿಎಸ್ಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್ಟಿ ಸಂಗ್ರಹ ಮೇ ತಿಂಗಳಲ್ಲಿ 1.44 ಲಕ್ಷ ಕೋಟಿ ರೂ ಆಗಿದೆ.
ಜಿಎಸ್ಟಿ ಸಂಗ್ರಹ 2024ರ ಮೇ ತಿಂಗಳಲ್ಲಿ
- ಸೆಂಟ್ರಲ್ ಜಿಎಸ್ಟಿ: 32,409 ಕೋಟಿ ರೂ
- ರಾಜ್ಯ ಜಿಎಸ್ಟಿ: 40,265 ಕೋಟಿ ರೂ
- ಐಜಿಎಸ್ಟಿ: 87,781 ಕೋಟಿ ರೂ
- ಸೆಸ್: 12,284 ಕೋಟಿ ರೂ
ಇದನ್ನೂ ಓದಿ: LPG Price Update: ವಾಣಿಜ್ಯ LPG ಸಿಲಿಂಡರ್ ಬೆಲೆ 69.50 ರೂ. ಕಡಿತ, ಪರಿಷ್ಕೃತ ದರ ಇಲ್ಲಿದೆ
ಐಜಿಎಸ್ಟಿ ಎಂಬುದು ಅಂತರರಾಜ್ಯಗಳ ಮಧ್ಯೆ ನಡೆಯುವ ವಹಿವಾಟಿಗೆ ವಿಧಿಸಲಾಗುವ ತೆರಿಗೆಯಾಗಿದೆ. ಈ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗುತ್ತದೆ.
87,781 ಕೋಟಿ ರೂ ಐಜಿಎಸ್ಟಿ ಪೈಕಿ 38,519 ಕೋಟಿ ರೂ ಕೇಂದ್ರದ ಪಾಲಾಗಿದೆ. 32,733 ಕೋಟಿ ರೂ ಹಣ ರಾಜ್ಯಗಳ ಪಾಲಾಗಿದೆ.
ಮೇ ತಿಂಗಳ ಜಿಎಸ್ಟಿಯಲ್ಲಿ ಕೇಂದ್ರಕ್ಕೆಷ್ಟು, ರಾಜ್ಯಗಳಿಗೆಷ್ಟು?
- ಸಿಜಿಎಸ್ಟಿ: 70,928 ಕೋಟಿ ರೂ
- ಎಸ್ಜಿಎಸ್ಟಿ: 72,999 ಕೋಟಿ ರೂ
ಉತ್ತರಪ್ರದೇಶ ಗಮನಾರ್ಹ ಪ್ರಗತಿ
ತೆರಿಗೆ ಸಂಗ್ರಹ ಹೆಚ್ಚಳದಲ್ಲಿ ಪಂಜಾಬ್, ದೆಹಲಿ ಮೊದಲಾದ ರಾಜ್ಯಗಳು ಮುಂಚೂಣಿಯಲ್ಲಿವೆ. ಉತ್ತರಪ್ರದೇಶ ಕೂಡ ಸಾಕಷ್ಟು ಹೆಚ್ಚಳ ಕಂಡಿದೆ. ದೇಶದ ಅತಿದೊಡ್ಡ ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ 9,000 ಕೋಟಿ ರೂ ಗಡಿ ದಾಟಿದೆ. ಕಳೆದ ವರ್ಷದಕ್ಕಿಂತ ಶೇ. 22ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗಿದೆ.
ಮಹಾರಾಷ್ಟ್ರ ಯಥಾಪ್ರಕಾರವಾಗಿ ಟಾಪ್ ರಾಜ್ಯವಾಗಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಗುಜರಾತ್ ಮತ್ತು ಕರ್ನಾಟಕದ ಮಧ್ಯೆ ಅಷ್ಟೇನೂ ವ್ಯತ್ಯಾಸ ಆಗಿಲ್ಲ. ತೆರಿಗೆ ಸಂಗ್ರಹದಲ್ಲಿ ತಮಿಳುನಾಡನ್ನು ಮೀರಿಸುವ ಮಟ್ಟದ ಸಮೀಪಕ್ಕೆ ಉತ್ತರಪ್ರದೇಶ ಬಂದಿದೆ.
ಇದನ್ನೂ ಓದಿ: ಕೊನೆಯ ಕ್ವಾರ್ಟರ್ನಲ್ಲೂ ನಿರೀಕ್ಷೆಮೀರಿ ಜಿಡಿಪಿ ವೃದ್ಧಿ; 2023-24ರಲ್ಲಿ ಶೇ. 8.2ರಷ್ಟು ಬೆಳೆದ ಭಾರತದ ಆರ್ಥಿಕತೆ
2024ರ ಮೇ ತಿಂಗಳಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹಗೊಂಡ ರಾಜ್ಯಗಳು
- ಮಹಾರಾಷ್ಟ್ರ: 26,854 ಕೋಟಿ ರೂ
- ಕರ್ನಾಟಕ: 11,889 ಕೋಟಿ ರೂ
- ಗುಜರಾತ್: 11,325 ಕೋಟಿ ರೂ
- ತಮಿಳುನಾಡು: 9,768 ಕೋಟಿ ರೂ
- ಹರ್ಯಾಣ: 9,289 ಕೋಟಿ ರೂ
- ಉತ್ತರಪ್ರದೇಶ: 9,091 ಕೋಟಿ ರೂ
- ದೆಹಲಿ: 7,512 ಕೋಟಿ ರೂ
- ಪಶ್ಚಿಮ ಬಂಗಾಳ: 5,377 ಕೋಟಿ ರೂ
- ಒಡಿಶಾ: 5,027 ಕೋಟಿ ರೂ
- ತೆಲಂಗಾಣ: 4,986 ಕೋಟಿ ರೂ
- ರಾಜಸ್ಥಾನ: 4,414 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ