ಸತತ 8ನೇ ತಿಂಗಳು ಜಿಎಸ್ಟಿ ಸಂಗ್ರಹ 1.80 ಲಕ್ಷ ಕೋಟಿ ರೂಗಿಂತಲೂ ಅಧಿಕ
GST collections rise by 6.5pc to Rs 1.86 trillion in August: 2025ರ ಆಗಸ್ಟ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.86 ಲಕ್ಷ ಕೋಟಿ ರೂ ಇದೆ ಎಂದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಶೇ. 6.5ರಷ್ಟು ಏರಿದೆ. ಆದರೆ, ಜುಲೈ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಇಳಿಕೆಯಾಗಿದೆ.

ನವದೆಹಲಿ, ಸೆಪ್ಟೆಂಬರ್ 1: ಜುಲೈ ತಿಂಗಳಲ್ಲಿ ಶೇ. 7.6ರಷ್ಟು ಹೆಚ್ಚಳ ಕಂಡಿದ್ದ ಜಿಎಸ್ಟಿ ಸಂಗ್ರಹ (GST collections), ಆಗಸ್ಟ್ನಲ್ಲಿ ಶೇ. 6.5ರಷ್ಟು ಹೆಚ್ಚಾಗಿದೆ. ಸರ್ಕಾರ ಇಂದು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ 1.86 ಲಕ್ಷ ಕೋಟಿ ರೂಗಳಷ್ಟು ಜಿಎಸ್ಟಿ ತೆರಿಗೆ ಬಂದಿದೆ. ಜುಲೈನಲ್ಲಿ 1.96 ಲಕ್ಷ ಕೋಟಿ ರೂನಷ್ಟು ತೆರಿಗೆ ಸಿಕ್ಕಿತ್ತು. ಅದಕ್ಕೆ ಹೋಲಿಸಿದರೆ ಜಿಎಸ್ಟಿ ಕಲೆಕ್ಷನ್ ಕಡಿಮೆ ಆಗಿದೆಯಾದರೂ ಸತತ ಎಂಟನೇ ತಿಂಗಳು ಟ್ಯಾಕ್ಸ್ ಸಂಗ್ರಹ 1.80 ಲಕ್ಷ ಕೋಟಿ ರೂ ಮೇಲ್ಪಟ್ಟಿದೆ.
ಜುಲೈಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕಡಿಮೆ ಆಗಿದೆಯಾದರೂ, ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ. 6.5ರಷ್ಟು ಹೆಚ್ಚಳವಾಗಿದೆ. 2024ರ ಆಗಸ್ಟ್ನಲ್ಲಿ 1.74 ಲಕ್ಷ ಕೋಟಿ ರೂ ನಷ್ಟು ಜಿಎಸ್ಟಿ ಆದಾಯ ಸರ್ಕಾರಕ್ಕೆ ಹರಿದುಬಂದಿತ್ತು.
ಕಳೆದ ಕೆಲ ವರ್ಷಗಳಿದ ಜಿಎಸ್ಟಿ ಸಂಗ್ರಹ ಸತತವಾಗಿ ಏರಿಕೆ ಆಗುತ್ತಲೇ ಬಂದಿದೆ. 2020-21ರಲ್ಲಿ ಆ ಹಣಕಾಸು ವರ್ಷದಲ್ಲಿ ಸಿಕ್ಕ ಜಿಎಸ್ಟಿ ಆದಾಯ 11.37 ಲಕ್ಷ ಕೋಟಿ ರೂ ಮಾತ್ರವೇ. 2023-24ರಲ್ಲಿ ಇದು 20.18 ಲಕ್ಷ ಕೋಟಿ ರೂಗೆ ಏರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಜಿಎಸ್ಟಿ ದರ ಇಳಿಕೆಯಿಂದ ರಾಜ್ಯಗಳಿಗೆ ಭಾರೀ ನಷ್ಟ; ಕೇಂದ್ರವೇ ಭರಿಸಲಿ: 8 ರಾಜ್ಯಗಳಿಂದ ಒತ್ತಾಯಕ್ಕೆ ನಿರ್ಧಾರ
2025-26ರ ಹಣಕಾಸು ವರ್ಷದ ಮೊಲದ ಕ್ವಾರ್ಟರ್ನಲ್ಲಿ ಜಿಎಸ್ಟಿ ಸಂಗ್ರಹ ಶೇ. 10.7ರಷ್ಟು ಹೆಚ್ಚಾಗಿ 8.18 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಸಂಗ್ರಹವಾದ ಜಿಎಸ್ಟಿ 7.38 ಲಕ್ಷ ಕೋಟಿ ರೂ. ಈ ಏಪ್ರಿಲ್ನಿಂದ ಜೂನ್ ಕ್ವಾರ್ಟರ್ನಲ್ಲಿ ಜಿಎಸ್ಟಿ ಡಬಲ್ ಅಂಕಿಯ ಪ್ರತಿಶತದಲ್ಲಿ ಹೆಚ್ಚಳ ಕಂಡಿದ್ದು ವಿಶೇಷ. ನಂತರದ ತಿಂಗಳುಗಳಲ್ಲಿ ಏರಿಕೆ ಪ್ರಮಾಣ ಕಡಿಮೆ ಆಗಿದೆಯಾದರೂ ಮಾಸಿಕವಾಗಿ 1.80 ಲಕ್ಷ ಕೋಟಿ ರೂ ಮಟ್ಟಕ್ಕಿಂತ ಕೆಳಗೆ ಇಳಿದೇ ಇಲ್ಲ.
2017ರಲ್ಲಿ ಜಾರಿಗೆ ಬಂದ ಜಿಎಸ್ಟಿ
2017ರ ಜುಲೈನಲ್ಲಿ ಜಿಎಸ್ಟಿಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು. ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾದ ಟ್ಯಾಕ್ಸ್ಗಳು ಸೇರಿ ಈ ಮೊದಲು ಟ್ಯಾಕ್ಸ್ ಸಿಸ್ಟಂ ಸಂಕೀರ್ಣವಾಗಿತ್ತು. ಸರ್ಕಾರ ಎಲ್ಲವನ್ನೂ ಬದಿಗೆ ಸರಿಸಿ ಏಕರೂಪದ ಜಿಎಸ್ಟಿ ಸಿಸ್ಟಂ ಅನ್ನು ತಂದಿತು. ಶೇ. 5, ಶೇ. 12, ಶೇ. 18 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್ ರಚಿಸಿತು. ಇವುಗಳಲ್ಲದೇ ಸಿಗರೇಟು, ಮದ್ಯದಂತಹವುಗಳಿಗೆ ಸಿನ್ ಟ್ಯಾಕ್ಸ್ ಆಗಿ ಶೇ. 40ರವರೆಗೂ ತೆರಿಗೆ ವಿಧಿಸುವ ಅವಕಾಶ ನೀಡಿದೆ.
ಇದನ್ನೂ ಓದಿ: ಹೊಸ ಗೇಮಿಂಗ್ ಕಾಯ್ದೆ: ಉದ್ಯಮ ಪ್ರತಿನಿಧಿಗಳೊಂದಿಗೆ ಸರ್ಕಾರದ ಸಭೆ; ಇಸ್ಪೋರ್ಟ್, ಸೋಷಿಯಲ್ ಗೇಮ್ಗಳ ಉತ್ತೇಜನಕ್ಕೆ ಮುಂದು
ಇದೀಗ ಜಿಎಸ್ಟಿ ಸಿಸ್ಟಂನಲ್ಲಿ ಸರ್ಕಾರ ಸುಧಾರಣೆ (GST reforms) ತರಲು ಹೊರಟಿದೆ. ಶೇ. 12 ಮತ್ತು ಶೇ. 28ರ ಟ್ಯಾಕ್ಸ್ ಸ್ಲಾಬ್ಗಳನ್ನು ಹಿಂಪಡೆಯುವ ಪ್ರಸ್ತಾಪ ಇದೆ. ಇದೇನಾದರೂ ಜಾರಿಗೆ ಬಂದರೆ ಬಹಳ ವಸ್ತುಗಳ ಮೇಲಿನ ತೆರಿಗೆ ದರ ಕಡಿಮೆ ಆಗಲಿದೆ. ಅವುಗಳ ಮಾರಾಟ ಬೆಲೆಯೂ ಕಡಿಮೆ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




