AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಗೇಮಿಂಗ್ ಕಾಯ್ದೆ: ಉದ್ಯಮ ಪ್ರತಿನಿಧಿಗಳೊಂದಿಗೆ ಸರ್ಕಾರದ ಸಭೆ; ಇಸ್ಪೋರ್ಟ್, ಸೋಷಿಯಲ್ ಗೇಮ್​ಗಳ ಉತ್ತೇಜನಕ್ಕೆ ಮುಂದು

Ashwini Vaishnaw meets online gaming industry representatives: ಇತ್ತೀಚೆಗೆ ಹೊಸ ಗೇಮಿಂಗ್ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೆ ತಂದಿರುವ ಸರ್ಕಾರ ಈಗ ಉದ್ಯಮ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸಿದೆ. ಹೊಸ ಕಾನೂನಿಂದ ಬಾಧಿತವಾದ ಕಂಪನಿಗಳು ಹೇಗೆ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿವೆ ಎಂಬುದನ್ನು ಅವಲೋಕಿಸಲಾಗಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಇಸ್ಪೋರ್ಟ್ಸ್, ಆನ್ಲೈನ್ ಸೋಷಿಯಲ್ ಗೇಮ್​ಗಳ ಉತ್ತೇಜನಕ್ಕೆ ಕ್ರಮ ಅವಲೋಕಿಸಲಾಗಿದೆ.

ಹೊಸ ಗೇಮಿಂಗ್ ಕಾಯ್ದೆ: ಉದ್ಯಮ ಪ್ರತಿನಿಧಿಗಳೊಂದಿಗೆ ಸರ್ಕಾರದ ಸಭೆ; ಇಸ್ಪೋರ್ಟ್, ಸೋಷಿಯಲ್ ಗೇಮ್​ಗಳ ಉತ್ತೇಜನಕ್ಕೆ ಮುಂದು
ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2025 | 4:32 PM

Share

ನವದೆಹಲಿ, ಸೆಪ್ಟೆಂಬರ್ 1: ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ (Ashwini Vaishnaw) ಇಂದು ಸೋಮವಾರ ಭಾರತೀಯ ಆನ್​ಲೈನ್ ಗೇಮಿಂಗ್ ಉದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಇತ್ತೀಚೆಗಷ್ಟೇ ಸರ್ಕಾರವು ಪ್ರವೇಶ ಶುಲ್ಕ ಇತ್ಯಾದಿ ನೈಜ ಹಣ ಬಳಕೆಯಾಗುವ ಆನ್​ಲೈನ್ ಗೇಮ್​ಗಳನ್ನು ನಿಷೇಧಿಸುವಂತಹ ಕಾನೂನನ್ನು ರೂಪಿಸಿತ್ತು. ಇದರ ಬೆನ್ನಲ್ಲೇ ಹೊಸ ಕಾನೂನು ಹಾಗು ಅದರ ಪರಿಣಾಮಗಳನ್ನು ತಿಳಿಯಲು, ಮತ್ತು ಹೊಸ ಗೇಮಿಂಗ್ ಅವಕಾಶಗಳನ್ನು ಅವಲೋಕಿಸಲು ಸಚಿವ ಎ ವೈಷ್ಣವ್ ಇಂದು ಗೇಮಿಂಗ್ ಉದ್ಯಮದವರನ್ನು (gaming industry) ಕರೆಸಿ ಸಭೆ ಮಾಡಿದರು ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಸರ್ಕಾರದ ಆನ್ಲೈನ್ ಗೇಮಿಂಗ್ ಕಾಯ್ದೆಯಲ್ಲಿ ನೈಜ ಹಣದ ಗೇಮ್​ಗಳನ್ನು ಮಾತ್ರ ನಿಷಧಿಸಲಾಗಿದೆ. ಡ್ರೀಮ್11, ಮೈ11 ಸರ್ಕಲ್, ರಮ್ಮಿ ಸರ್ಕಲ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳು ಇದಕ್ಕೆ ಉದಾಹರಣೆ. ಹಣದ ಬಳಕೆ ಇಲ್ಲದ ಇ-ಸ್ಪೋರ್ಟ್ಸ್ ಮತ್ತು ಆನ್​ಲೈನ್ ಸೋಷಿಯಲ್ ಗೇಮ್​ಗಳಿಗೆ ಉತ್ತೇಜನ ಕೊಡುವುದು ಸರ್ಕಾರದ ಇರಾದೆಯಾಗಿದೆ. ಇವತ್ತು ಸಚಿವ ಎ ವೈಷ್ಣವ್ ನಡೆಸಿದ ಸಭೆಯಲ್ಲಿ ಇದೇ ವಿಚಾರವನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಗೇಮಿಂಗ್ ಉದ್ಯಮದವರು ಇಸ್ಪೋರ್ಟ್ಸ್ ಮತ್ತು ಸೋಷಿಯಲ್ ಗೇಮ್​ಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಚರ್ಚಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ 7,000 ಕಿಮೀ ಬುಲೆಟ್ ರೈಲು ನೆಟ್ವರ್ಕ್​ನ ಗುರಿ; ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ

ಹಾಗೆಯೇ, ಸರ್ಕಾರದ ಹೊಸ ಕಾನೂನಿನಿಂದ ಪರಿಮಾನ ಹೊಂದಿರುವ ಸಂಸ್ಥೆಗಳು ಕಾನೂನುಬದ್ಧವಾಗುವ ರೀತಿಯಲ್ಲಿ ಹೇಗೆ ಕಾರ್ಯಾಚರಣೆ ಪರಿವರ್ತಿಸುವುದು, ಬಳಕೆದಾರರ ಹಣದ ಸುರಕ್ಷತೆಗೆ ಯಾವ ಕ್ರಮ ವಹಿಸುವುದು ಇತ್ಯಾದಿ ವಿಚಾರಗಳೂ ಕೂಡ ಚರ್ಚಿತವಾದವು.

ಸರ್ಕಾರವು ಆನ್​ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ 2025 ಅನ್ನು ರೂಪಿಸಿದ್ದು, ಸಂಸತ್​ನಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿದೆ. ರಾಷ್ಟ್ರಪತಿಗಳಿಂದಲೂ ಹಸಿರು ನಿಶಾನೆ ದೊರಕಿದ್ದು, ಬಹಳ ಕ್ಷಿಪ್ರವಾಗಿ ಈ ಮಸೂದೆಯು ಜಾನೂನಾಗಿ ಮಾರ್ಪಟ್ಟಿದೆ.

ಈ ಮೊದಲು ಇ-ಸ್ಪೋರ್ಟ್ಸ್​ಗಳಿಗೆ ಕಾನೂನು ಮಾನ್ಯತೆ ಇರಲಿಲ್ಲ. ಈಗ ಹೊಸ ಕಾಯ್ದೆಯಿಂದ ಇ-ಸ್ಪೋರ್ಟ್ಸ್​ಗಳಿಗೆ ಉತ್ತೇಜನ ಸಿಗಲಿದೆ. ಆನ್​ಲೈನ್ ಸೋಷಿಯಲ್ ಗೇಮ್​ಗಳಿಗೂ ಸರ್ಕಾರ ಉತ್ತೇಜನ ಕೊಡಲಿದೆ.

ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ 51.50 ರೂ. ಇಳಿಕೆ

‘ಆನ್ಲೈನ್ ಗೇಮ್​ಗಳಲ್ಲಿರುವ ಒಳ್ಳೆಯ ಅಂಶಗಳಿಗೆ ಉತ್ತೇಜನ ನೀಡುವುದು, ಮತ್ತು ಭಾರತವನ್ನು ಗೇಮ್ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವುದು ಉದ್ದೇಶವಾಗಿದೆ. ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಅನ್ನು ಸ್ಥಾಪಿಸಿದ್ದೇವೆ. ಅದರಲ್ಲಿ ಗೇಮಿಂಗ್ ಶಿಕ್ಷಣವೂ ಒಂದು ಭಾಗವಾಗಿದೆ. ಸಮಾಜಕ್ಕೆ ಹಾನಿ ಮಾಡದಂತಹ ಒಳ್ಳೆಯ ಅಂಶಗಳತ್ತ ಗಮನ ಹರಿಸುತ್ತಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ನೈಜ ಹಣದ ಬಳಕೆಯಾಗುವ ಆನ್​ಲೈನ್ ಗೇಮ್​ಗಳನ್ನು ನಿಷೇಧಿಸಲಾಗಿದೆ. ಡ್ರೀಮ್11 ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಆಟವಾಡಬೇಕಾದರೆ ಪ್ರವೇಶ ಶುಲ್ಕವಾಗಿ ಹಣ ತೆರಬೇಕು. ಇವು ವ್ಯಸನವಾಗಿ ಮಾರ್ಪಟ್ಟು ಜನರು ಹಣ ಕಳೆದುಕೊಳ್ಳುವ ಭೀತಿ ಇರುತ್ತದೆ. ಹೀಗಾಗಿ, ಸರ್ಕಾರವು ಕಾನೂನು ಮೂಲಕ ಒಂದು ನಿರ್ಬಂಧವನ್ನು ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ