GST Council: ಇಂದಿನಿಂದ ಜಿಎಸ್ಟಿ ಮಂಡಳಿ ಸಭೆ: ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಚರ್ಚೆ ಸಾಧ್ಯತೆ
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಿದರೆ ಪೆಟ್ರೋಲ್ ದರವು ಲೀಟರ್ಗೆ 33 ರೂಪಾಯಿ ಕಡಿಮೆಯಾಗಬಹುದು.
ಚಂಡೀಗಡ: ಸರಕು ಸೇವಾ ತೆರಿಗೆ (Goods and Service Tax – GST) ಮಂಡಿಯ ಬಹುನಿರೀಕ್ಷಿತ ಸಭೆ ಇಂದಿನಿಂದ ಎರಡು ದಿನಗಳ ಕಾಲ ಚಂಡೀಗಡದಲ್ಲಿ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೇರಿದಂತೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಜಿಎಸ್ಟಿ ಸ್ಲ್ಯಾಬ್ಗಳಲ್ಲಿ ಅಗತ್ಯ ಬದಲಾವಣೆ ತರುವುದು, ಹೊಸ ಸರಕು ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಜಿಎಸ್ಟಿ ಪರಿಹಾರ ನೀಡಿಕೆಯನ್ನು 5 ವರ್ಷದ ನಂತರವೂ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಗಳು ಆಗ್ರಹಿಸಲಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಬೇಕೆ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಿದರೆ ಪೆಟ್ರೋಲ್ ದರವು ಲೀಟರ್ಗೆ 33 ರೂಪಾಯಿ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳಿಗೆ ಪೆಟ್ರೊಲ್, ಡೀಸೆಲ್ ಮೇಲೆ ವ್ಯಾಟ್ ವಿಧಿಸಲು ಅವಕಾಶ ಸಿಗುವುದಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳ ಆದಾಯಕ್ಕೆ ಧಕ್ಕೆಯೊದಗುವ ಅಪಾಯವಿದೆ. ಪರ್ಯಾಯ ಆದಾಯ ಮೂಲಗಳನ್ನು ತೋರಿಸಿಕೊಡದಿದ್ದರೆ ರಾಜ್ಯ ಸರ್ಕಾರಗಳು ಈ ಪ್ರಸ್ತಾವ ವಿರೋಧಿಸುವ ಸಾಧ್ಯತೆಯಿದೆ.
ಜಿಎಸ್ಟಿ ಜಾರಿಯಾದ ನಂತರ ರಾಜ್ಯ ಸರ್ಕಾರಗಳು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಲವು ರೀತಿಯ ತೆರಿಗೆಗಳ ಆದಾಯ ಮೂಲಗಳನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರವು ಹಲವಾರು ಈ ವಿಚಾರದಲ್ಲಿ ತಾರತಮ್ಯ ಮಾಡಿದೆ, ಸಕಾಲಕ್ಕೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆ ಒಪ್ಪಿಕೊಂಡು, ವ್ಯಾಟ್ ಆದಾಯ ಕಳೆದುಕೊಳ್ಳಲು ರಾಜ್ಯ ಸರ್ಕಾರಗಳು ಸಹಮತ ಸೂಚಿಸುತ್ತಿಲ್ಲ.
The 47th meeting of the GST Council, headed by Union Finance Minister @nsitharaman and comprising representatives of all states and UTs, is scheduled to be held in Chandigarh on 28th and 29th June 2022.@nsitharamanoffc @FinMinIndia pic.twitter.com/OQ0sMwVO2v
— DD News (@DDNewslive) June 28, 2022
Published On - 9:46 am, Tue, 28 June 22