ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ

|

Updated on: Sep 10, 2024 | 12:47 PM

54th GST council recommendations: ದೆಹಲಿಯಲ್ಲಿ ಸೆಪ್ಟೆಂಬರ್ 9ರಂದು 54ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಿತು. ವಿವಿಧ ವಸ್ತು ಮತ್ತು ಸೇವೆಗಳಿಗೆ ಜಿಎಸ್​ಟಿ ದರದಲ್ಲಿ ಬದಲಾವಣೆ ಮಾಡಲು ಸಭೆಯಲ್ಲಿ ಶಿಫಾರಸು ಮಾಡಲಾಗಿದೆ. ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್​ಗಳಿಗೆ ಜಿಎಸ್​ಟಿ ದರ ಪರಿಷ್ಕರಣೆ ಸಂಬಂಧ ನಿರ್ಧಾರಕ್ಕಾಗಿ ಗ್ರೂಪ್ ಆಫ್ ಮಿನಿಸ್ಟರ್ಸ್ ರಚಿಸಿ ಜವಾಬ್ದಾರಿ ಕೊಡಲಾಗಿದೆ.

ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ
ಜಿಎಸ್​ಟಿ
Follow us on

ನವದೆಹಲಿ, ಸೆಪ್ಟೆಂಬರ್ 10: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ 54ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಿತು. ಜಿಎಸ್​ಟಿ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲು ಸಭೆ ಒಂದಷ್ಟು ಶಿಫಾರಸು ಮಾಡಿದೆ. ಕ್ಯಾನ್ಸರ್​ನ ಕೆಲ ಔಷಧಗಳು ಸೇರಿದಂತೆ ಕೆಲ ವಸ್ತುಗಳಿಗೆ ತೆರಿಗೆ ಇಳಿಕೆ ಮಾಡಲಾಗಿದೆ. ಕೆಲವಕ್ಕೆ ಜಿಎಸ್​​ಟಿಯಿಂದ ವಿನಾಯಿತಿ ನೀಡಲಾಗಿದೆ. ಇನ್ನೂ ಕೆಲವಕ್ಕೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಇನ್ಷೂರೆನ್ಸ್​ಗೆ ಜಿಎಸ್​ಟಿ ಹೇಗಿರಬೇಕು ಎಂದು ಶಿಫಾರಸು ಮಾಡಲು ಗ್ರೂಪ್ ಆಫ್ ಮಿನಿಸ್ಟರ್ಸ್​ಗೆ ಜವಾಬ್ದಾರಿ ಕೊಡಲಾಗಿದೆ. ಸೋಮವಾರ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು, ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು.

54ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಶಿಫಾರಸು ಮಾಡಲಾದ ತೆರಿಗೆ ಬದಲಾವಣೆ

  • ಪ್ಯಾಕೇಜ್ಡ್ ತಿಂಡಿ ಪದಾರ್ಥಗಳು: ಜಿಎಸ್​ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ
  • ಫ್ರೈ ಮಾಡದ, ಬೇಯಿಸದ ತಿಂಡಿಗಳು: ಶೇ. 5 ಜಿಎಸ್​ಟಿ
  • ಕ್ಯಾನ್ಸರ್ ಔಷಧಗಳಾದ Trastuzumab Deruxtecan, Osimertinib ಮತ್ತು Durvalumab: ಜಿಎಸ್​ಟಿ ಶೇ. 12ರಿಂದ ಶೇ. 5ಕ್ಕೆ ಇಳಿಕೆ
  • ಮೆಟಲ್ ಸ್ಕ್ರಾಪ್: ಜಿಎಸ್​ಟಿ ನೊಂದಾಯಿತವಾಗದ ವ್ಯಕ್ತಿಯಿಂದ ನೊಂದಾಯಿತ ವ್ಯಕ್ತಿಗೆ ಮೆಟಲ್ ಸ್ಕ್ರಾಪ್ ಸರಬರಾಜು ಆದಲ್ಲಿ, ನೊಂದಾಯಿತ ವ್ಯಕ್ತಿಯೇ ರಿವರ್ಸ್ ಚಾರ್ಜ್ ಮೆಕ್ಯಾನಿಂ (ಎಂಸಿಎಂ) ಅನುಸಾರ ತೆರಿಗೆ ಪಾವತಿಸಬೇಕಾಗುತ್ತದೆ.
  • ಇನ್ನು, ನೊಂದಾಯಿತ ವ್ಯಕ್ತಿ ಮೆಟಲ್ ಸ್ಕ್ರಾಪ್ ಸರಬರಾಜು ಮಾಡಿದಲ್ಲಿ ಶೇ. 2ರಷ್ಟು ಟಿಡಿಎಸ್ ತೆರಬೇಕಾಗುತ್ತದೆ.
  • ರೈಲ್ವೆ ಆರ್​ಎಂಪಿಯು ಎಸಿ ಮೆಷೀನ್​ಗಳಿಗೆ ಶೇ. 28ರಷ್ಟು ಜಿಎಸ್​ಟಿ ಇರುತ್ತದೆ.
  • ಕಾರಿನ ಸೀಟುಗಳಿಗೆ ಜಿಎಸ್​ಟಿ ದರ ಶೇ. 28ಕ್ಕೆ ಹೆಚ್ಚಳ
  • ಹೆಲಿಕಾಪ್ಟರ್ ಚಾರ್ಟರ್​ಗೆ ಶೇ. 18ರಷ್ಟು ಜಿಎಸ್​ಟಿ
  • ಡಿಜಿಸಿಎ ಅನುಮೋದಿತ ಫ್ಲೈಯಿಂಗ್ ತರಬೇತಿ ಸಂಸ್ಥೆಗಳಿಂದ ನಡೆಸಲಾಗುವ ತರಬೇತಿಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.
  • ಸರ್ಕಾರಿ ಸಂಸ್ಥೆ, ಸಂಶೋಧನಾ ಸಂಸ್ಥೆ, ಯೂನಿವರ್ಸಿಟಿ, ಕಾಲೇಜು ಇತ್ಯಾದಿಗಳಿಂದ ನೀಡಲಾಗುವ ಆರ್ ಅಂಡ್ ಡಿ ಸೇವೆಗಳಿಗೆ ಜಿಎಸ್​ಟಿಯಿಂದ ವಿನಾಯಿತಿ.
  • ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಪಾವತಿಸಲಾಗುವ ಆದ್ಯತಾ ಸ್ಥಳ ಶುಲ್ಕ ಅಥವಾ ಪ್ರಿಫರೆನ್ಷಿಯಲ್ ಲೊಕೇಶನ್ ಚಾರ್ಜ್​ಗೆ (ಪಿಎಲ್​ಸಿ) ಜಿಎಸ್​ಟಿ ವಿಧಿಸಲಾಗುವುದು.
  • ಸರ್ಕಾರದ ಶಿಕ್ಷಣ ಮಂಡಳಿ, ಎಜುಕೇಶನಲ್ ಕೌನ್ಸಿಲ್ ಮೊದಲಾದ ಸಂಸ್ಥೆಗಳ ಅಫಿಲಿಯೇಶನ್ ಸರ್ವಿಸ್​ಗೆ ಜಿಎಸ್​ಟಿ ಇರುವುದಿಲ್ಲ. ಆದರೆ, ಸಿಬಿಎಸ್​ಇ ಇತ್ಯಾದಿ ಎಜುಕೇಶನ್ ಬೋರ್ಡ್​ಗಳು ನೀಡುವ ಅಫಿಲಿಯೇಶನ್ ಸರ್ವಿಸ್​ಗಳಿಗೆ ಜಿಎಸ್​ಟಿ ಇರುತ್ತದೆ.

ಇದನ್ನೂ ಓದಿ: ಸೆ. 11ರಿಂದ 13ರವರೆಗೆ ದೆಹಲಿ ಬಳಿ ಸೆಮಿಕಾನ್ ಇಂಡಿಯಾ 2024 ಸಮಾವೇಶ; ಪ್ರಧಾನಿಯಿಂದ ಉದ್ಘಾಟನೆ

  • ಯೂನಿವರ್ಸಿಟಿಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ನೀಡುವ ಅಫಿಲಿಯೇಶನ್ ಸರ್ವಿಸ್​ಗಳಿಗೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ.
  • ವಿದೇಶೀ ಏರ್ಲೈನ್ಸ್ ಕಂಪನಿಯಿಂದ ಸ್ಥಾಪಿತವಾದ ಸಂಸ್ಥೆಯು ವಿದೇಶಗಳಲ್ಲಿರುವ ತನ್ನ ಅಂಗ ಸಂಸ್ಥೆ ಅಥವಾ ಸಂಬಂಧಿತ ವ್ಯಕ್ತಿಯಿಂದ ಸೇವೆಯನ್ನು ಆಮದು ಮಾಡಿಕೊಂಡರೆ ಅದಕ್ಕೆ ಜಿಎಸ್​ಟಿ ಇರಲ್ಲ.
  • ನೊಂದಾಯಿತ ವ್ಯಕ್ತಿಯಿಂದ ಕಮರ್ಷಿಯಲ್ ಪ್ರಾಪರ್ಟಿಯನ್ನು ನೊಂದಾಯಿತ ವ್ಯಕ್ತಿಗೆ ಬಾಡಿಗೆಗೆ ಕೊಟ್ಟಾಗ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಪ್ರಕಾರ ನೊಂದಾಯಿತ ವ್ಯಕ್ತಿಯೇ ತೆರಿಗೆ ಪಾವತಿಸಬೇಕು.
  • ಎಲೆಕ್ಟ್ರಿಸಿಟಿ ಕನೆಕ್ಷನ್ ಪಡೆಯಲು ನೀಡುವ ಅರ್ಜಿ ಶುಲ್ಕ, ವಿದ್ಯುತ್ ಮೀಟರ್​ನ ಬಾಡಿಗೆ ಶುಲ್ಕ, ಮೀಟರ್ಸ್, ಟ್ರಾನ್ಸ್​ಫಾರ್ಮರ್ಸ್, ಕೆಪಾಸಿಟರ್ಸ್​ಗಳ ಟೆಸ್ಟಿಂಗ್ ಫೀಸ್, ಮೀಟರ್ ಅಥವಾ ಸರ್ವಿಸ್ ಲೈನ್​ಗಳನ್ನು ಶಿಫ್ಟ್ ಮಾಡಲು ಗ್ರಾಹಕರು ನೀಡುವ ಶುಲ್ಕ ಇತ್ಯಾದಿ ಸೇವೆಗಳಿಗೆ ಜಿಎಸ್​ಟಿ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ