ನವದೆಹಲಿ, ಜೂನ್ 19: ಇದೇ ಶನಿವಾರ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರಕ್ಕೆ (Online gaming sector) ಬಿಗ್ ರಿಲೀಫ್ ಸಿಗುವಂತಹ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವಂತಹ ಮಾತುಗಳು ಕೇಳಿಬಂದಿವೆ. ಆದರೆ, ಆನ್ಲೈನ್ ಗೇಮಿಂಗ್ ಕ್ಷೇತ್ರಕ್ಕೆ ವಿಧಿಸಲಾಗಿರುವ ಜಿಎಸ್ಟಿ ದರದಲ್ಲಿ ಮತ್ತು ಕ್ರಮದಲ್ಲಿ (GST review) ಬದಲಾವಣೆ ಮಾಡುವ ಸಾಧ್ಯತೆ ಸದ್ಯಕ್ಕೆ ಇಲ್ಲ ಎಂದು ಕೆಲ ವರದಿಗಳು ಹೇಳುತ್ತಿವೆ. ಇದೇ ಜೂನ್ 22ರಂದು ನಡೆಯಲಿರುವ ಜಿಎಸ್ಟಿ ಸಭೆಯಲ್ಲಿ ಈ ಆನ್ಲೈನ್ ಗೇಮಿಂಗ್ ವಲಯದ ಜಿಎಸ್ಟಿ ವಿಚಾರವೇ ಚರ್ಚೆಗೆ ಬರುವುದಿಲ್ಲ ಎನ್ನಲಾಗುತ್ತಿದೆ.
ಆನ್ಲೈನ್ ಗೇಮಿಂಗ್ ಉದ್ಯಮದಲ್ಲಿ ಬೆಟಿಂಗ್ನ ಪೂರ್ಣ ಫೇಸ್ ವ್ಯಾಲ್ಯೂ ಮೇಲೆ ಶೇ. 28ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಆದರೆ, ಈ ಪೂರ್ಣ ಬೆಟ್ಟಿಂಗ್ ಮೊತ್ತಕ್ಕೆ ಜಿಎಸ್ಟಿ ಬೇಡ. ಸಿಜಿಆರ್ ಅಥವಾ ಗ್ರಾಸ್ ಗೇಮಿಂಗ್ ರೆವೆನ್ಯೂ ಮೇಲೆ ಮಾತ್ರ ತೆರಿಗೆ ಹಾಕಿ ಎನ್ನುವುದು ಆನ್ಲೈನ್ ಗೇಮಿಂಗ್ ಸಂಸ್ಥೆಗಳ ಮನವಿ ಆಗಿದೆ.
ಇದನ್ನೂ ಓದಿ: ಇಂಡಸ್ ಟವರ್ಸ್ನ ಶೇ. 20ರಷ್ಟು ಷೇರುಪಾಲು ಮಾರಿದ ವೊಡಾಫೋನ್; 17,065 ಕೋಟಿ ರೂಗೆ ಬಿಕರಿ; ಷೇರುಪಾಲು ಹೆಚ್ಚಿಸಿಕೊಂಡ ಏರ್ಟೆಲ್
ಇಲ್ಲಿ ಫುಲ್ ಫೇಸ್ ವ್ಯಾಲ್ಯೂ ಎಂದರೆ ಆಟಗಾರನೊಬ್ಬ ಬೆಟ್ಟಿಂಗ್ ಇರಿಸುವ ಮೊತ್ತ ಅಥವಾ ಸ್ಪರ್ಧೆಯ ಪ್ರವೇಶ ಮೊತ್ತವಾಗಿದೆ. ಇನ್ನು, ಗ್ರಾಸ್ ಗೇಮಿಂಗ್ ರೆವೆನ್ಯೂ ಎಂಬುದು ಬೆಟ್ಟಿಂಗ್ ಇರಿಸಿದ ಮೊತ್ತ ಮತ್ತು ಗೆಲುವಿನ ಮೊತ್ತದ ನಡುವಿನ ವ್ಯತ್ಯಾಸ ಆಗಿರುತ್ತದೆ. ಸಿಜಿಆರ್ ಮೊತ್ತಕ್ಕೆ ಜಿಎಸ್ಟಿ ಹಾಕಿ ಎಂಬುದು ಉದ್ಯಮದ ಬೇಡಿಕೆ.
ಕಳೆದ ವರ್ಷ ಫುಲ್ ಫೇಸ್ ವ್ಯಾಲ್ಯೂ ಅಥವಾ ಪೂರ್ಣ ಬೆಟ್ಟಿಂಗ್ ಮೊತ್ತಕ್ಕೆ 28 ಪ್ರತಿಶತದಷ್ಟು ಜಿಎಸ್ಟಿ ಹಾಕಲಾಗಿತ್ತು. ಅಕ್ಟೋಬರ್ 1ರಿಂದ ಆರು ತಿಂಗಳವರೆಗೆ ಈ ತೆರಿಗೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು, ಆ ಬಳಿಕ ಮರುಪರಿಶೀಲಿಸಲಾಗುವುದು ಎಂದು ಹೇಳಲಾಗಿತ್ತು. ಈಗ ಆರು ತಿಂಗಳು ದಾಟಿರುವುದರಿಂದ ಜಿಎಸ್ಟಿ ಕ್ರಮವನ್ನು ಬದಲಿಸಲಾಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ಈ ರೀತಿಯ ವರದಿಗಳು ಬರುತ್ತಲೇ ಗೇಮಿಂಗ್ ಕಂಪನಿಗಳ ಷೇರುಬೆಲೆ ಇಂದು ಏರಿಕೆ ಆಗಿತ್ತು.
ಇದನ್ನೂ ಓದಿ: ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ
ಬೆಟ್ಟಿಂಗ್ನ ಫುಲ್ ಫೇಸ್ ವ್ಯಾಲ್ಯೂ ಮೇಲೆ 28 ಪ್ರತಿಶತದಷ್ಟು ಜಿಎಸ್ಟಿ ಹಾಕುವ ನಿರ್ಧಾರ ಮಾಡಿದಾಗ ಉದ್ಯಮ ಶಾಕ್ ಆಗಿದ್ದು ಹೌದು. ಆಟಗಾರ ಪ್ರತೀ ಬಾರಿ ಬೆಟ್ಟಿಂಗ್ ಇಟ್ಟಾಗಲೂ ಶೇ. 28ರಷ್ಟು ತೆರಿಗೆ ಕಟ್ಟಬೇಕಾದೀತು ಎಂದು ಹೇಳಲಾಗಿತ್ತು. ಆದರೆ, ಜಿಎಸ್ಟಿ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬೆಟ್ಟಿಂಗ್ ಇರಿಸುವ ಅಟಗಾರ ತಾನು ಗೆದ್ದ ಹಣವನ್ನು ಹಿಂಪಡೆದುಕೊಳ್ಳದೇ ಮತ್ತೆ ಬೆಟ್ಟಿಂಗ್ ಇಟ್ಟರೆ ಆ ಹಣಕ್ಕೆ ಜಿಎಸ್ಟಿ ವಿಧಿಸಲಾಗುವುದಿಲ್ಲ ಎಂದು ಹೇಳಿತ್ತು. ಆದರೂ ಕೂಡ ಪೂರ್ಣ ಬೆಟ್ಟಿಂಗ್ ಮೊತ್ತದ ಬದಲು ಜಿಜಿಆರ್ಗೆ ಮಾತ್ರವೇ ಜಿಎಸ್ಟಿ ಹಾಕಿ ಎಂಬುದು ಉದ್ಯಮದ ಮನವಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ