ನವದೆಹಲಿ, ಅಕ್ಟೋಬರ್ 20: ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಸಮಿತಿ ವಿವಿಧ ಜಿಎಸ್ಟಿ ದರಗಳಲ್ಲಿ ಬದಲಾವಣೆ ಮಾಡಲು ಶಿಫಾರಸು ಮಾಡಿದೆ. ಕೆಲ ವಸ್ತುಗಳಿಗೆ ಶೇ. 28ರಷ್ಟು ಅಧಿಕ ಜಿಎಸ್ಟಿ ವಿಧಿಸುವ ಪ್ರಸ್ತಾಪ ಮಾಡಿದೆ. ಹಾಗೆಯೇ ಕೆಲ ಇನ್ಷೂರೆನ್ಸ್ ಪ್ರೀಮಿಯಮ್ಗಳಿಗೆ ತೆರಿಗೆ ವಿನಾಯಿತಿ ಕೊಡುವ ನಿರ್ಧಾರಕ್ಕೂ ಸಮಿತಿ ಸಭೆಯಲ್ಲಿ ಬರಲಾಗಿದೆ. ಒಟ್ಟಾರೆ ಸಚಿವರ ಸಮಿತಿಯ ಶಿಫಾರಸು ಜಾರಿಗೆ ಬಂದರೆ ಸರ್ಕಾರಕ್ಕೆ ಬರೋಬ್ಬರಿ 20,000 ಕೋಟಿ ರೂಗೂ ಅಧಿಕ ಮೊತ್ತದ ಹೆಚ್ಚುವರಿ ಆದಾಯ ಸಿಗುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ಗುಜರಾತ್, ಗೋವಾ, ತೆಲಂಗಾಣ ಮೊದಲಾದ ವಿವಿಧ ರಾಜ್ಯಗಳ ಸಚಿವರುಗಳು ಈ ಜಿಒಎಂ ಸಮಿತಿಯಲ್ಲಿ ಇದ್ದಾರೆ. ಈ ತಿಂಗಳ ಅಂತ್ಯದೊಳಗೆ ಸಚಿವರ ಸಮಿತಿಯು ಜಿಎಸ್ಟಿ ಮಂಡಳಿಗೆ ತನ್ನ ವರದಿ ಸಲ್ಲಿಸಬೇಕಾಗಿದೆ.
ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಮೇಲೆ ಜಿಎಸ್ಟಿ ತೆರಿಗೆಯಿಂದ ವಿನಾಯಿತಿ ನೀಡಬೇಕಾ ಬೇಡವಾ ಎಂದು ನಿರ್ಧರಿಸಲೆಂದೇ ನಿನ್ನೆ ಶನಿವಾರ ಸಚಿವರ ಸಮಿತಿ ಸಭೆ ನಡೆಸಲಾಗಿತ್ತು. ಸದ್ಯ ಇನ್ಷೂರೆನ್ಸ್ ಪ್ರೀಮಿಯಮ್ಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಕೆಲ ಮಿತಿಗಳ ನಡುವೆ ಈಗ ವಿನಾಯಿತಿ ನೀಡಬಹುದು ಎಂದು ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.
ಇದನ್ನೂ ಓದಿ: ಓಲಾ, ಸ್ವಿಗ್ಗಿ ಇತ್ಯಾದಿಯಲ್ಲಿ ಪ್ರತಿ ವಹಿವಾಟಿಗೆ ಶುಲ್ಕ ವಸೂಲಿ ಮಾಡಲು ಕರ್ನಾಟಕ ಸರ್ಕಾರ ಯೋಜನೆ
ಅಂದರೆ, ಟರ್ಮ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ಗೆ ಪೂರ್ಣ ಜಿಎಸ್ಟಿ ವಿನಾಯಿತಿ ಕೊಡುವ ಪ್ರಸ್ತಾಪ ಮಾಡಲಾಗಿದೆ. ಹಿರಿಯ ನಾಗರಿಕರ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ಗೂ ವಿನಾಯಿತಿ ಕೊಡಬಹುದು. ಹಿರಿಯ ನಾಗರಿಕರಲ್ಲದ ಇತರ ಸಾಮಾನ್ಯ ವ್ಯಕ್ತಿಗಳ 5 ಲಕ್ಷ ರೂವರೆಗಿನ ಕವರೇಜ್ ಇರುವ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಹಣಕ್ಕೂ ತೆರಿಗೆ ವಿನಾಯಿತಿ ಕೊಡಬಹುದು ಎಂದು ಜಿಒಎಂ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹದಿನೈದು ಸಾವಿರ ರೂಗೂ ಹೆಚ್ಚು ಬೆಲೆ ಇರುವ ಶೂಗಳ ಮೇಲೆ ಶೇ. 18ರಷ್ಟಿರುವ ಜಿಎಸ್ಟಿಯನ್ನು ಶೇ. 28ಕ್ಕೆ ಏರಿಸಬೇಕೆಂದು ಸಚಿವರ ಸಮಿತಿ ಪ್ರಸ್ತಾಪಿಸಿದೆ. ಹಾಗೆಯೇ, 25,000 ರೂಗೂ ಹೆಚ್ಚು ಮೌಲ್ಯದ ವಾಚುಗಳಿಗೂ ಜಿಎಸ್ಟಿಯನ್ನು ಶೇ. 28ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಲಿದೆ.
20 ಲೀಟರ್ನ ಕುಡಿಯುವ ನೀರಿನ ಡಬ್ಬಕ್ಕೆ ಜಿಎಸ್ಟಿ ಶೇ. 5ರಿಂದ ಶೇ. 18ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ: ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ 21 ದಿನದೊಳಗೆ ಪರಿಹಾರ: ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದ ಸರ್ಕಾರ
10,000 ರೂಗಿಂತ ಕಡಿಮೆ ಮೌಲ್ಯದ ಬೈಸಿಕಲ್ ಮೇಲೆ ಶೇ. 12ರಷ್ಟಿರುವ ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಬಹುದು; ಎಕ್ಸೈಸ್ ನೋಟ್ಬುಕ್ಗಳ ಮೇಲಿನ ಜಿಎಸ್ಟಿಯನ್ನೂ ಶೇ. 5ಕ್ಕೆ ಇಳಿಸಬಹುದು ಎಂದು ಸಚಿವರ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಅಕ್ಟೋಬರ್ ಅಂತ್ಯದೊಳಗೆ ಸಚಿವರ ಸಮಿತಿ ತನ್ನ ವರದಿಯನ್ನು ಜಿಎಸ್ಟಿ ಮಂಡಳಿಗೆ ಸಲ್ಲಿಸಬೇಕಿದೆ. ನವೆಂಬರ್ ತಿಂಗಳಲ್ಲಿ ಮುಂದಿನ ಜಿಎಸ್ಟಿ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಸಚಿವರ ಸಮಿತಿ ಮಾಡಿರುವ ಶಿಫಾರಸುಗಳನ್ನು ಪರಿಗಣಿಸಿ ಒಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ