ದಾಖಲೆ ಬರೆದ ಮಾರ್ಚ್​ ತಿಂಗಳ ಜಿಎಸ್​ಟಿ ಸಂಗ್ರಹ; ಒಂದೇ ತಿಂಗಳಲ್ಲಿ ಸಂಗ್ರಹವಾದ ಮೊತ್ತ ₹ 1.24 ಲಕ್ಷ

|

Updated on: Apr 01, 2021 | 6:07 PM

GST Goods Service Tax Revenue collection: ಜಿಎಸ್​ಟಿ ಜಾರಿಗೆ ಬಂದ ನಂತರ ಅತ್ಯಧಿಕ ಮೊತ್ತದ ಜಿಎಸ್​ಟಿ ಸಂಗ್ರಹ ಮಾರ್ಚ್ 2021ರಲ್ಲಿ ಆಗಿದೆ. ಕಳೆದ 5 ತಿಂಗಳಿನಿಂದೀಚೆಗೆ ಜಿಎಸ್​ಟಿ ಸಂಗ್ರಹ ಪ್ರಮಾಣವೂ ನಿಯಮಿತವಾಗಿ ಹೆಚ್ಚಾಗುತ್ತಿದೆ.

ದಾಖಲೆ ಬರೆದ ಮಾರ್ಚ್​ ತಿಂಗಳ ಜಿಎಸ್​ಟಿ ಸಂಗ್ರಹ; ಒಂದೇ ತಿಂಗಳಲ್ಲಿ ಸಂಗ್ರಹವಾದ ಮೊತ್ತ ₹ 1.24 ಲಕ್ಷ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಮಾರ್ಚ್​ 2021ರಲ್ಲಿ ಸಂಗ್ರಹವಾದ ಸರಕು ಸೇವಾ ಸುಂಕದ (Goods and Service Tax -GST) ಮೊತ್ತವು ಹೊಸ ದಾಖಲೆ ಬರೆದಿದೆ. ಮಾರ್ಚ್​ ತಿಂಗಳಲ್ಲಿ ಒಟ್ಟು ₹ 1,23,902 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ. ಈ ಪೈಕಿ ಸಿಜಿಎಸ್​ಟಿ ₹ 22,973 ಕೋಟಿ, ಎಸ್​ಜಿಎಸ್​ಟಿ ₹ 29,329 ಮತ್ತು ₹ 62,842 ಕೋಟಿ ಐಜಿಎಸ್​ಟಿ ಮತ್ತು ₹ 8757 ಕೋಟಿ ಸೆಸ್ ಸಂಗ್ರಹಿಸಲಾಗಿದೆ. ಐಜಿಎಸ್​ಟಿ ಮೊತ್ತದಲ್ಲಿ ಸರಕುಗಳ ಆಮದು ಮೇಲೆ ಸಂಗ್ರಹಿಸಿದ ಸುಂಕ ₹ 31,097 ಕೋಟಿ ಸಹ ಸೇರಿದೆ.

ಐಜಿಎಸ್​ಟಿಯಿಂದ ಸಂಗ್ರಹಿಸಿದ ಜಿಎಸ್​ಟಿ ಮೊತ್ತದ ಪೈಕಿ ₹ 21,879 ಕೋಟಿಯನ್ನು ಕೇಂದ್ರದ ಪಾಲಿಗೆ ಮತ್ತು ₹ 17,230 ಕೋಟಿಯನ್ನು ರಾಜ್ಯದ ಪಾಲಿಗೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರವು ₹ 28,000 ಕೋಟಿ ಮೊತ್ತವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾತ್ಪೂರ್ತಿಕ ಹಂಚಿಕೆ ಮಾಡಿದೆ. ರಾಜ್ಯಗಳಿಗೆ ₹ 30,000 ಕೋಟಿ ಪರಿಹಾರವನ್ನೂ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಜಿಎಸ್​ಟಿ ಜಾರಿಗೆ ಬಂದ ನಂತರ ಅತ್ಯಧಿಕ ಮೊತ್ತದ ಜಿಎಸ್​ಟಿ ಸಂಗ್ರಹ ಮಾರ್ಚ್ 2021ರಲ್ಲಿ ಆಗಿದೆ. ಕಳೆದ 5 ತಿಂಗಳಿನಿಂದೀಚೆಗೆ ಜಿಎಸ್​ಟಿ ಸಂಗ್ರಹ ಪ್ರಮಾಣವೂ ನಿಯಮಿತವಾಗಿ ಹೆಚ್ಚಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಶೇ 27ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ ಸಂಗತಿ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣವೂ ಹೆಚ್ಚಾಗಿರುವುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ. ಸರಕುಗಳ ಆಮದು ಮೇಲೆ ವಿಧಿಸುವ ಸುಂಕದಿಂದ ಬಂದಿರುವ ಆದಾಯವು ಶೇ 70 ಮತ್ತು ಆಂತರಿಕ ಬಳಕೆಯ ಉತ್ಪಾದನೆಯ ಮೇಲೆ ಸಂಗ್ರಹಿಸಿರುವ ಸುಂಕವು ಶೇ 17ರಷ್ಟು ಹೆಚ್ಚಾಗಿದೆ. ಜಿಎಸ್​ಟಿ ಆದಾಯವು 2020-21ರ ಮೊದಲ ತ್ರೈಮಾಸಿಕದಲ್ಲಿ ಶೇ -41, 2ನೇ ತ್ರೈಮಾಸಿಕದಲ್ಲಿ ಶೇ -8, 3ನೇ ತ್ರೈಮಾಸಿಕದಲ್ಲಿ ಶೇ 8 ಮತ್ತು 3ನೇ ತ್ರೈಮಾಸಿಕದಲ್ಲಿ ಶೇ 14ರಷ್ಟು ಹೆಚ್ಚಾಗಿತ್ತು. ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಜಿಎಸ್​ಟಿ ಸಂಗ್ರಹದಲ್ಲಿನ ಹೆಚ್ಚಳವು ಸೂಚಿಸುತ್ತದೆ.

ಈ ವರ್ಷದ ಒಟ್ಟು ಜಿಎಸ್​ಟಿ ಸಂಗ್ರಹದ ವಿವರ

ಕಳೆದ 6 ತಿಂಗಳಿಂದೀಚೆಗೆ ಜಿಎಸ್​ಟಿ ಸಂಗ್ರಹದ ಪ್ರಮಾಣವು ₹ 1 ಲಕ್ಷ ಕೋಟಿಯನ್ನು ಮೀರಿದೆ. ಕೊರೊನಾ ಪಿಡುಗಿನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಬಿಲ್ಲಿಂಗ್ ವೇಳೆ ನಡೆಯುವ ಕಳ್ಳಾಟಗಳಿಗೆ ಕಡಿವಾಣ ಹಾಕುವುದು, ದತ್ತಾಂಶಗಳ ಸೂಕ್ಷ್ಮ ವಿಶ್ಲೇಷಣೆ, ಜಿಎಸ್​ಟಿ, ಆದಾಯ ತೆರಿಗೆ, ಅಬಕಾರಿ ಸುಂಕ ಮತ್ತು ತೆರಿಗೆ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿ ಮಾಡಿದ್ದರಿಂದ ತೆರಿಗೆ ಸಂಗ್ರಹವು ಹೆಚ್ಚಾಗಿದೆ ಎಂದು ವಾಣಿಜ್ಯ ಸುದ್ದಿಗಳನ್ನು ನಿಯಮಿತವಾಗಿ ವರದಿ ಮಾಡುವ ಜಾಲತಾಣಗಳು ವಿಶ್ಲೇಷಿಸಿವೆ.

ಮಾರ್ಚ್ 2021ರ ರಾಜ್ಯವಾರು ಜಿಎಸ್​ಟಿ ಸಂಗ್ರಹ ವಿವರ

ಇದನ್ನೂ ಓದಿ: ಜಿಎಸ್​ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ

GST Goods Service Tax Revenue collection for March 21 sets new record

Published On - 6:06 pm, Thu, 1 April 21