AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಕಡಿತ ಆದೇಶ ಹಿಂಪಡೆದ ಸರ್ಕಾರ: ‘ಪ್ರಮಾದವಾಗಿದೆ’ ಎಂದ ನಿರ್ಮಲಾ ಸೀತಾರಾಮನ್

Interest rates of small savings schemes: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡುವ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ಆದೇಶ ಕಣ್ತಪ್ಪಿನಿಂದ ಹೊರಡಿಸಲಾಗಿತ್ತು ಎಂದಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಕಡಿತ ಆದೇಶ ಹಿಂಪಡೆದ ಸರ್ಕಾರ: 'ಪ್ರಮಾದವಾಗಿದೆ' ಎಂದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ರಶ್ಮಿ ಕಲ್ಲಕಟ್ಟ
|

Updated on:Apr 01, 2021 | 11:39 AM

Share

ದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟಿಸಿದ್ದಾರೆ. ಗುರುವಾರ ಬೆಳಿಗ್ಗೆ 7.54ಕ್ಕೆ ಟ್ವೀಟ್‌ ಮಾಡಿರುವ ನಿರ್ಮಲಾ ಸೀತಾರಾಮನ್‌, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡುವ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂದಿದ್ದಾರೆ. ಅದೇ ವೇಳೆ ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2020-21ರ ಕೊನೆಯ ತ್ರೈಮಾಸಿಕದಲ್ಲಿ, ಅಂದರೆ 2021ರ ಮಾರ್ಚ್‌ ವರೆಗೆ ಇದ್ದ ದರಗಳು  ಯಥಾ ಪ್ರಕಾರ ಮುಂದುವರಿಯಲಿವೆ. ಕಣ್ತಪ್ಪಿನಿಂದ ಹೊರಡಿಸಲಾದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಅವರು ಟ್ವೀಟಿನಲ್ಲಿ ಹೇಳಿದ್ದಾರೆ.

ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 40-110 ಬೇಸಿಸ್‌ ಪಾಯಿಂಟ್‌ಗಳಿಂದ  ಕಡಿತಗೊಳಿಸಿ, ಪರಿಷ್ಕೃತ ದರಗಳು ಏಪ್ರಿಲ್ 1 ರಿಂದ ಜಾರಿಯಾಗಲಿದ್ದು ಜೂನ್ 30 ರವರೆಗೆ ಇದು ಅನ್ವಯಿಸುತ್ತದೆ ಎಂದು ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು. 2021-22ರ ಮೊದಲ ತ್ರೈಮಾಸಿಕದಲ್ಲಿ ಉಳಿತಾಯ ಠೇವಣಿಗಳ ಬಡ್ಡಿದರವನ್ನು ಶೇ 4 ರಿಂದ ಶೇ 3.5 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು.

ಇದರ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಲಾಗಿತ್ತು. ಈ ಹಿಂದೆ ಪಿಪಿಎಫ್ ಬಡ್ಡಿದರ ಶೇಕಡಾ 7.1 ಇದ್ದದ್ದು 6.4 ಆಗಿ ಇಳಿಕೆ ಮಾಡಲಾಗಿತ್ತು. ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)ದ ಬಡ್ಡಿದರ ಶೇಕಡಾ 6.8 ರಿಂದ ಶೇ 5.9, ಹೆಣ್ಮಕ್ಕಳ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಶೇಕಡಾ 7.6ರಿಂದ ಶೇಕಡಾ 6.9ಕ್ಕೆ ಇಳಿಕೆ ಮಾಡಲಾಗಿತ್ತು.

ಒಂದು ವರ್ಷ ಅವಧಿಯ ಠೇವಣಿ ದರದಲ್ಲಿ 110 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಿದ್ದು ಶೇಕಡಾ 5.5ರಿಂದ ಶೇ 4.4 ಕ್ಕೆ ಇಳಿಸಿದೆ. ಎರಡು, ಮೂರು ಮತ್ತು ಐದು ವರ್ಷಗಳ ಅವಧಿಯ ಠೇವಣಿಗಳ ದರವನ್ನು ಸಹ 40-90 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡಲಾಗಿದೆ.

ಇದನ್ನೂ ಓದಿ:  ಎನ್​ಎಸ್​ಸಿ, ಕೆವಿಪಿ, ಪೋಸ್ಟ್​​ ಆಫೀಸ್​ ಎಫ್​ಡಿ ಬಡ್ಡಿದರಗಳ ಕಡಿತ: 46 ವರ್ಷಗಳ ಕನಿಷ್ಠ ಮಟ್ಟಕ್ಕೆ ಪಿಪಿಎಫ್ ಬಡ್ಡಿ

(Government decision on small savings interest rate cuts withdrawn orders issued by oversight tweeted Nirmala Sitharaman)

Published On - 11:28 am, Thu, 1 April 21