
ನವದೆಹಲಿ, ಜುಲೈ 2: ಸಿಗರೇಟ್ ಹಾಗೂ ಇತರ ಕೆಲ ವಸ್ತುಗಳ ಮೇಲೆ ತೆರಿಗೆಗಳನ್ನು ಮತ್ತಷ್ಟು ಏರಿಸಲು ಸರ್ಕಾರ ಹೊರಟಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಸಿಗರೇಟು, ಕಾರ್ಬೊನೇಟೆಡ್ ಡ್ರಿಂಕ್ಗಳು (Carbonated drinks), ದುಬಾರಿ ಹೈ ಎಂಡ್ ಕಾರುಗಳು ಹಾಗೂ ಇತರ ಕೆಲ ಐಷಾರಾಮಿ ವಸ್ತುಗಳ ಮೇಲೆ ಜಿಎಸ್ಟಿ ದರಗಳನ್ನು (GST rates) ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಎನ್ಡಿಟಿವಿ ಪ್ರಾಫಿಟ್ ವಾಹಿನಿಯಲ್ಲಿ ವರದಿಯಾಗಿದೆ.
ಈ ಸಿಗರೇಟು ಮತ್ತಿತರ ಉತ್ಪನ್ನಗಳ ಮೇಲೆ ಗರಿಷ್ಠ ಶೇ. 28 ಜಿಎಸ್ಟಿ ದರ ಇದೆ. ಜೊತೆಗೆ ಕಾಂಪೆನ್ಸೇಶನ್ ಸೆಸ್ (compensation cess) ವಿಧಿಸಲಾಗುತ್ತದೆ. ಈ ಕಾಂಪೆನ್ಸೇಶನ್ ಸೆಸ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೇಂದ್ರ ಸರ್ಕಾರವು ಈ ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಹೆಲ್ತ್ ಅಂಡ್ ಗ್ರೀನ್ ಸೆಸ್ (Health and Green Cess) ಅನ್ನು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಸಿಗರೇಟು ಮತ್ತಿತರ ವಸ್ತುಗಳಿಗೆ ಈ ಹೆಲ್ತ್ ಸೆಸ್ ಹೆಚ್ಚಿನ ಮಟ್ಟದಲ್ಲಿ ವಿಧಿಸಬಹುದು.
ಇದನ್ನೂ ಓದಿ: Cost Inflation Index: ಬೆಲೆ ಉಬ್ಬರ ಸೂಚಿಯಲ್ಲಿ ಏರಿಕೆ; ತಗ್ಗಲಿದೆ ಟ್ಯಾಕ್ಸ್ ಹೊರೆ
ದೇಶದಲ್ಲಿ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದಾಗ ರಾಜ್ಯಗಳಿಗೆ ಬರುತ್ತಿದ್ದ ತೆರಿಗೆ ಆದಾಯ ಕಡಿಮೆಗೊಳ್ಳುತ್ತಿತ್ತು. ಅದಕ್ಕೆ ಪರಿಹಾರವಾಗಿ ಕಾಂಪೆನ್ಸೇಶನ್ ಸೆಸ್ ಕ್ರಮವನ್ನು 2017ರಲ್ಲಿ ಜಾರಿಗೆ ತರಲಾಯಿತು. ದೇಹಕ್ಕೆ ಮತ್ತು ಪರಿಸರಕ್ಕೆ ಹಾನಿ ತರುವ ವಸ್ತುಗಳ ಮೇಲೆ ಗರಿಷ್ಠ ಜಿಎಸ್ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ 2026ರ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ. ಅದರ ಬದಲಾಗಿ ಹೊಸ ಸೆಸ್ ಜಾರಿಗೆ ತರಲು ಸರ್ಕಾರ ಹೊರಟಿದೆ.
ಸರ್ಕಾರವು ಜಿಎಸ್ಟಿ ಸ್ವರೂಪದಲ್ಲಿ ಒಂದಷ್ಟು ಮಾರ್ಪಾಡು ತರಲು ಯೋಜಿಸಿರುವುದು ತಿಳಿದುಬಂದಿದೆ. ಪ್ರಸಕ್ತ ಜಿಎಸ್ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳಿವೆ. ಶೇ. 5, ಶೇ. 12, ಶೇ. 18 ಹಾಗೂ ಶೇ. 28 ಟ್ಯಾಕ್ಸ್ ದರ ಇದೆ. ಇದರಲ್ಲಿ ಶೇ. 12 ದರದ ಸ್ಲಾಬ್ ಅನ್ನು ತೆಗೆದುಹಾಕಬಹುದು. ಅಂದರೆ, ಶೇ. 5, ಶೇ. 18 ಮತ್ತು ಶೇ. 28ರ ಜಿಎಸ್ಟಿ ದರ ಮಾತ್ರವೇ ಉಳಿಯುತ್ತದೆ.
ಇದನ್ನೂ ಓದಿ: SBI special: 175 ದೇಶಗಳ ಜಿಡಿಪಿಗಿಂತ ಎಸ್ಬಿಐ ದೊಡ್ಡದು; ಖಾತೆದಾರರ ಸಂಖ್ಯೆ 190 ದೇಶಗಳ ಜನಸಂಖ್ಯೆಗಿಂತ ಹೆಚ್ಚು
ಈಗ ಹೆಚ್ಚಿನ ಸರಕುಗಳಿಗೆ ಇರುವ ತೆರಿಗೆಯು ಶೇ. 5ರ ಸ್ಲಾಬ್ನಲ್ಲೇ ಇದೆ. ಶೇ. 12ರ ಸ್ಲಾಬ್ನಲ್ಲಿರುವ ಸರಕುಗಳಲ್ಲಿ ಹೆಚ್ಚಿನವನ್ನು ಶೇ. 5ರ ಸ್ಲಾಬ್ಗೆ ವರ್ಗಾಯಿಸಬಹುದು. ಇನ್ನುಳಿದವನ್ನು ಶೇ 18ರ ಸ್ಲಾಬ್ಗೆ ಹಾಕಬಹುದು. ಜಿಎಸ್ಟಿ ಕೌನ್ಸಿಲ್ನ ಮುಂಬರುವ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ