Solar: 3 ಕಿ.ವ್ಯಾ. ಮೇಲ್ಛಾವಣಿ ಸೌರ ವಿದ್ಯುತ್ ಸಿಸ್ಟಂ ಬೆಲೆ ಬೆಲೆ 10,000 ರೂ ಇಳಿಕೆ ಸಾಧ್ಯತೆ
GST rationalization effect on PM Surya Ghar scheme: ಸೌರ ಉಪಕರಣಗಳ ಮೇಲಿನ ಜಿಎಸ್ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ನವೀಕರಣ ವಿದ್ಯುತ್ ದರ ಕಡಿಮೆಗೊಳ್ಳಲಿದೆ. ಒಂದು ಅಂದಾಜು ಪ್ರಕಾರ ಮೂರು ಕಿಲೋವ್ಯಾಟ್ ರೂಫ್ಟಾಪ್ ಸೋಲಾರ್ ಸಿಸ್ಟಂನ ಬೆಲೆಯಲ್ಲಿ 9,000 ರೂನಿಂದ 10,500 ರೂನಷ್ಟು ತಗ್ಗಬಹುದು.

ನವದೆಹಲಿ, ಸೆಪ್ಟೆಂಬರ್ 17: ಜಿಎಸ್ಟಿ ಇಳಿಕೆ (GST rationalization) ಪರಿಣಾಮ ನವೀಕರಣ ಇಂಧನದ ಇಡೀ ವ್ಯವಸ್ಥೆಯಾದ್ಯಂತ ದರಗಳ ಇಳಿಕೆ ಆಗಲಿದೆ. ಇದರಿಂದಾಗಿ ಮನೆಗಳ ಮೇಲ್ಛಾವಣಿ ಮೇಲೆ ಅಳವಡಿಸುವ ಸೌರ ವಿದ್ಯುತ್ ಸಿಸ್ಟಂಗಳ ಬೆಲೆಯಲ್ಲೂ ಇಳಿಕೆ ಆಗುವ ನಿರೀಕ್ಷೆ ಇದೆ. ಒಂದು ಅಂದಾಜು ಪ್ರಕಾರ, ಸಾಧಾರಣ ಮನೆಗೆ ಸಾಕಾಗುವ 3 ಕಿ.ವ್ಯಾ. ಸೋಲಾರ್ ಸಿಸ್ಟಂನ ಬೆಲೆಯಲ್ಲಿ ಸುಮಾರು 9,000 ರೂನಿಂದ 10,500 ರೂವರೆಗೆ ಕಡಿಮೆ ಆಗಬಹುದು. ಜಿಎಸ್ಟಿ ದರ ಇಳಿಕೆಯಿಂದ ಜನಸಾಮಾನ್ಯರು ಸೌರ ವಿದ್ಯುತ್ ಅಳವಡಿಕೆಯತ್ತ ಆಸಕ್ತಿ ತೋರುವುದು ಹೆಚ್ಚಾಗಲಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವಾಲಯ ಕೂಡ ನಿರೀಕ್ಷಿಸುತ್ತಿದೆ.
ಸೌರ ಉಪಕರಣಗಳ ಮೇಲೆ ಶೇ. 12ರಷ್ಟಿದ್ದ ಜಿಎಸ್ಟಿಯನ್ನು ಶೇ. 5ಕ್ಕೆ ಇಳಿಸಲಾಗುತ್ತಿದೆ. ಇದರಿಂದ ನವೀಕರಣ ಇಂಧನ ಯೋಜನೆಗಳ ವೆಚ್ಚ ಕಡಿಮೆಗೊಳ್ಳುತ್ತದೆ. ವಿದ್ಯುತ್ ತಯಾರಿಕೆಯ ವೆಚ್ಚ ಕಡಿಮೆ ಆಗುತ್ತದೆ. ವಿದ್ಯುತ್ ಬೆಲೆ ಕಡಿಮೆಗೊಳ್ಳುತ್ತದೆ. ಜನಸಾಮಾನ್ಯರು, ರೈತರು, ಕೈಗಾರಿಕೆಗಳು ಮೊದಲಾದವರಿಗೆ ಕಡಿಮೆ ಬೆಲೆಗೆ ವಿದ್ಯುತ್ ಲಭ್ಯವಾಗಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ದೇವರೇ ಅವತರಿಸಿದ್ದಾನೆ: ನರೇಂದ್ರ ಮೋದಿ ಬಗ್ಗೆ ವಿವಿಧ ಉದ್ಯಮಿಗಳು ಹೇಳಿದ್ದು…
ಒಂದು ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪ್ರಾಜೆಕ್ಟ್ಗೆ ಸುಮಾರು 4 ಕೋಟಿ ರೂ ಆಗಬಹುದು. ಜಿಎಸ್ಟಿ ಇಳಿಕೆಯಿಂದ ಸುಮಾರು 25 ಲಕ್ಷ ರೂ ಉಳಿಸಲು ಸಾಧ್ಯ. ಹಾಗೆಯೇ, 500 ಮೆ.ವ್ಯಾ. ಸೋಲಾರ್ ಪಾರ್ಕ್ನ ಯೋಜನಾ ವೆಚ್ಚದಲ್ಲೂ 100 ಕೋಟಿ ರೂ ಮಿಗುತ್ತದೆ ಎಂದು ನವೀಕರಣ ಇಂಧನ ಸಚಿವಾಲಯ ಅಭಿಪ್ರಾಯಪಟ್ಟಿದೆ.
ಡಿಸ್ಕಾಂ ಕಂಪನಿಗಳಿಗೆ 2,000-3,000 ಕೋಟಿ ರೂ ಉಳಿತಾಯ?
ಜಿಎಸ್ಟಿಯನ್ನು ಇಳಿಕೆ ಮಾಡಿರುವುದರಿಂದ ನವೀಕರಣ ವಿದ್ಯುತ್ಛಕ್ತಿಯ ದರಗಳೂ ಕಡಿಮೆಗೊಳ್ಳುತ್ತದೆ. ಡಿಸ್ಕಾಂ ಕಂಪನಿಗಳ ವಿದ್ಯುತ್ ಖರೀದಿ ವೆಚ್ಚ ಕಡಿಮೆ ಆಗುತ್ತದೆ. ಸುಮಾರು 2,000 ಕೋಟಿ ರೂನಿಂದ 3,000 ಕೋಟಿ ರೂವರೆಗೆ ವೆಚ್ಚದಲ್ಲಿ ಉಳಿತಾಯ ಆಗಹುದು.
ಕೃಷಿ ಸೋಲಾರ್ ಪಂಪ್ಸೆಟ್ಗಳ ಬೆಲೆ ಕಡಿಮೆ
ಕೃಷಿ ಬಳಕೆಯ ಸೋಲಾರ್ ಪಂಪ್ಸೆಟ್ ಒದಗಿಸುವ ಪಿಎಂ ಕುಸುಮ್ ಸ್ಕೀಮ್ ಬಳಸುವ ರೈತರಿಗೂ ಜಿಎಸ್ಟಿ ಇಳಿಕೆಯು ವರದಾನವಾಗಲಿದೆ. ಐದು ಎಚ್ಪಿ ಸೋಲಾರ್ ಪಂಪ್ನ ವೆಚ್ಚ ಸುಮಾರು ಎರಡೂವರೆ ಲಕ್ಷ ರೂ ಇದೆ. ಜಿಎಸ್ಟಿ ಇಳಿಕೆ ಬಳಿಕ ಇದರ ಬೆಲೆ 17,500 ರೂಗಳಷ್ಟು ಕಡಿಮೆ ಆಗಲಿದೆ.
ಇದನ್ನೂ ಓದಿ: ಜಿಎಸ್ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ
2030ಕ್ಕೆ ಭಾರತದಲ್ಲಿ ಸೋಲಾರ್ ಎನರ್ಜಿ ತಯಾರಿಕೆ ಸಾಮರ್ಥ್ಯ 100 ಗೀಗಾ ವ್ಯಾಟ್ ಆಗಿರಬೇಕು ಎನ್ನುವ ಗುರಿ ಇಡಲಾಗಿದೆ. ಜಿಎಸ್ಟಿ ಇಳಿಕೆಯು ಈ ನಿಟ್ಟಿನಲ್ಲಿ ಸಹಕಾರಿ ಎನಿಸಲಿದೆ. ಅಷ್ಟೇ ಅಲ್ಲ, ಒಂದು ಗಿಗಾವ್ಯಾಟ್ ಸೋಲಾರ್ ತಯಾರಿಕೆಯಲ್ಲಿ 5,000 ಉದ್ಯೋಗಗಳು ಸೃಷ್ಟಿಯಾಗುತ್ತವೆ. 100 ಗಿ.ವ್ಯಾ. ಮಟ್ಟದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




