ಸೂಪರ್​ಸ್ಟಾರ್ ಆಗಿದ್ದ ಎಚ್​ಎಎಲ್​ನ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

|

Updated on: Aug 02, 2024 | 3:40 PM

HAL share price updates: ಜೆಟ್ ವಿಮಾನಗಳನ್ನು ತಯಾರಿಸುವ ಎಚ್​ಎಎಲ್ ಸಂಸ್ಥೆಯ ಷೇರುಬೆಲೆ ಕಳೆದ ನಾಲ್ಕು ವಾರಗಳಿಂದ ಇಳಿಮುಖವಾಗುತ್ತಿದೆ. 5,674 ರೂನಲ್ಲಿದ್ದ ಅದರ ಷೇರು ಬೆಲೆ ಈಗ 4,693 ರೂಗೆ ಇಳಿದಿದೆ. ಒಂದು ತಿಂಗಳ ಅಂತರದಲ್ಲಿ ಶೇ. 18ರಷ್ಟು ಕುಸಿತ ಕಂಡಿದೆ. ಭಾರತೀಯ ಸೇನೆಗೆ ತೇಜಸ್ ಎಲ್​ಸಿಎ ಯುದ್ಧವಿಮಾನಗಳನ್ನು ತಯಾರಿಸುವ ಗುತ್ತಿಗೆ ಪಡೆದಿರುವ ಎಚ್​ಎಎಲ್, ಸಕಾಲಕ್ಕೆ ಡೆಲಿವರಿ ಕೊಡಲಾಗುತ್ತಿಲ್ಲದಿರುವುದು ಷೇರು ಹಿನ್ನಡೆಗೆ ಕಾರಣ ಇರಬಹುದು.

ಸೂಪರ್​ಸ್ಟಾರ್ ಆಗಿದ್ದ ಎಚ್​ಎಎಲ್​ನ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ
ಎಚ್​ಎ​ಎಲ್
Follow us on

ಬೆಂಗಳೂರು, ಆಗಸ್ಟ್ 2: ಕಳೆದ ಒಂದು ವರ್ಷದ ಅವಧಿಯಲ್ಲಿ ಬಹಳ ಅದ್ಬುತವಾಗಿ ಓಡಿದ ಷೇರುಗಳಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯದ್ದೂ ಒಂದು. ಜುಲೈ 5ರ ಬಳಿಕ ಎಚ್​ಎಎಲ್ ಕುಸಿತದ ಹಾದಿಯಲ್ಲಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಇಳಿಮುಖವಾಗುತ್ತಿದೆ. ಜುಲೈ ಮೊದಲ ವಾರದಲ್ಲಿ 5,674 ರೂ ಗರಿಷ್ಠ ಮಟ್ಟಕ್ಕೆ ಏರಿದ್ದ ಅದರ ಷೇರು ಬೆಲೆ ನಾಲ್ಕು ವಾರದಲ್ಲಿ 4,693 ರೂಗೆ ಕುಸಿದಿದೆ. ಶೇ. 18ರಷ್ಟು ಕುಸಿತ ಆಗಿದೆ. ಭಾರತದ ಸೇನಾಪಡೆಗೆ ಯುದ್ಧಾಸ್ತ್ರಗಳನ್ನು ತಯಾರಿಸಿಕೊಡುವ ಎಚ್​ಎಎಲ್ ಸಾಕಷ್ಟು ಯೋಜನೆಗಳನ್ನು ಹೊಂದಿರುವ ಸಂಸ್ಥೆ. ಇಂಥ ಸಂಸ್ಥೆ ಮೇಲೆ ಹೂಡಿಕೆದಾರರು ಈ ಪರಿ ವಿಶ್ವಾಸ ಕಳೆದುಕೊಳ್ಳಲು ಏನು ಕಾರಣ?

ಗಡುವಿನೊಳಗೆ ಫ್ಲೈಟ್ ಡೆಲಿವರಿ ಕೊಡದ ಎಚ್​ಎಎಲ್

ಭಾರತೀಯ ಸೇನೆಗಾಇಗಿ ಹೊಸ ತೇಜಸ್ ಎಲ್​ಸಿಎ ಯುದ್ಧವಿಮಾನಗಳನ್ನು (ಎಲ್​ಸಿಎ ಎಂಕೆ-1ಎ) ಎಚ್​ಎಎಲ್ ತಯಾರಿಸುತ್ತಿದೆ. ಇದರ ಮೊದಲ ವಿಮಾನದ ಡೆಲಿವರಿ ಮಾರ್ಚ್ 31ರೊಳಗೆ ನೀಡಬೇಕಿತ್ತು. ಇದು ಇನ್ನೂ ಆಗಿಲ್ಲ. ಜುಲೈನಲ್ಲಿ ಸರಬರಾಜು ಮಾಡಲಾಗುತ್ತದೆ ಎನ್ನಲಾಯಿತು. ಅದೂ ಆಗಿಲ್ಲ. ಆಗಸ್ಟ್​ಗೆ ಅದು ಮುಂದೂಡಿಕೆ ಆಯಿತು. ಈ ತಿಂಗಳೂ ಕೂಡ ತೇಜಸ್ ಯುದ್ಧವಿಮಾನವನ್ನು ಸೇನೆಗೆ ಒಪ್ಪಿಸುವ ಕುರುಹು ಇಲ್ಲ. ಈಗ ನವೆಂಬರ್​ಗೆ ಯುದ್ಧವಿಮಾನ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಎಚ್​ಎಎಲ್ ವಿರುದ್ಧ ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳಲು ಕಾರಣ ಇರಬಹುದು.

ಎಚ್​ಎಎಲ್​ಗೆ ಕೈಕೊಟ್ಟ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನಿ

ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್​ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಜಿಇ ಕಂಪನಿಯ ಎಫ್404 ಐಎನ್20 ಎಂಜಿನ್​ಗಳನ್ನು ಎಲ್​ಸಿಎ ತೇಜಸ್ ಯುದ್ಧವಿಮಾನಗಳಿಗೆ ಹಾಕಲಾಗುತ್ತಿದೆ. ಒಟ್ಟು 16 ಎಂಜಿನ್​ಗಳನ್ನು ಎಚ್​ಎಎಲ್​ಗೆ ಜಿಇ ಕೊಡಬೇಕಿತ್ತು. ಆದರೆ, ಎರಡನ್ನು ಮಾತ್ರ ನೀಡುತ್ತಿದೆ. ಅದೂ ಸೆಪ್ಟಂಬರ್​ನಲ್ಲಿ ಈ ಎಂಜಿನ್​ಗಳು ಎಚ್​ಎ​ಎಲ್ ಘಟಕಕ್ಕೆ ಬರಲಿವೆ. ಹೀಗಾಗಿ, ತೇಜಸ್ ಯುದ್ಧವಿಮಾನವನ್ನು ಸಕಾಲಕ್ಕೆ ತಯಾರಿಸಲು ಎಚ್​ಎಎಲ್​ಗೆ ಆಗದೇ ಹೋಗುತ್ತಿರಬಹುದು.

ಇದನ್ನೂ ಓದಿ: ಸನ್​ಸೇರ ಎಂಜಿನಿಯರಿಂಗ್​ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ

ಇದು ಎಚ್​ಎಎಲ್ ಷೇರಿಗೆ ಹಿನ್ನಡೆ ತರುತ್ತಿರಬಹುದು. ಎಚ್​ಎಎಲ್ ಮಾತ್ರವಲ್ಲ, ಒಟ್ಟಾರೆ ರಕ್ಷಣಾ ವಲಯದ ಷೇರುಗಳ ವಿಚಾರದಲ್ಲಿ ಬ್ರೋಕರೇಜ್ ಸಂಸ್ಥೆಗಳು ಎಚ್ಚರಿಕೆಯ ಧ್ವನಿ ಕೊಟ್ಟಿದ್ದಾರೆ. ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು, ಸರ್ಕಾರಗಳ ಬದಲಾವಣೆ ಇತ್ಯಾದಿ ವಿಚಾರಗಳು ಈ ವಲಯದ ಮೇಲೆ ಪರಿಣಾಮ ಬೀರಬಹುದು. ಕೇವಲ ಗುತ್ತಿಗೆ ಸಿಕ್ಕಿರುವ ಆಧಾರದ ಮೇಲೆ ಕಂಪನಿಯ ಹಣಕಾಸು ಸ್ಥಿತಿ ಮತ್ತು ಕ್ಷಮತೆಯನ್ನು ಅಳೆಯಲು ಆಗುವುದಿಲ್ಲ ಎಂಬುದು ವಿಶ್ಲೇಷಕರ ಅನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ