ಸನ್ಸೇರ ಎಂಜಿನಿಯರಿಂಗ್ನ ರಾಮನಗರ ಫ್ಯಾಕ್ಟರಿ ವಿಸ್ತರಣೆಗೆ 2,100 ರೂ ಹೂಡಿಕೆ; 3,500 ಉದ್ಯೋಗಸೃಷ್ಟಿ ಸಾಧ್ಯತೆ
Sansera Engeering signs MoU with Karnataka government: ರಾಮನಗರದ ಹಾರೋಹಳ್ಳಿಯಲ್ಲಿರುವ ತನ್ನ ಫ್ಯಾಕ್ಟರಿಯ ಸಾಮರ್ಥ್ಯ ಹೆಚ್ಚಿಸಲು ಸನ್ಸೇರ ಎಂಜಿನಿಯರಿಂಗ್ ಸಂಸ್ಥೆ 2,100 ಕೋಟಿ ರೂ ವ್ಯಯಿಸಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಜೊತೆ ಸನ್ಸೇರ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ದ್ವಿಚಕ್ರ ವಾಹನ, ಕಮರ್ಷಿಯಲ್ ವಾಹನಗಳ ಎಂಜಿನ್ ಮೊದಲಾದ ಪ್ರಮುಖ ಭಾಗಗಳ ತಯಾರಿಕೆಗೆ ಬೇಕಾದ ಪ್ರಿಸಿಶನ್ ಮೆಟೀರಿಯಲ್ಗಳನ್ನು ಸನ್ಸೇರ ಫ್ಯಾಕ್ಟರಿ ತಯಾರಿಸಿಕೊಡುತ್ತದೆ.
ರಾಮನಗರ, ಆಗಸ್ಟ್ 1: ಬೆಂಗಳೂರು ಮೂಲದ ಆಟೊಮೊಬೈಲ್ ಸಾಧನಗಳ ತಯಾರಕ ಸಂಸ್ಥೆಯಾದ ಸನ್ಸೇರ ಎಂಜಿನಿಯರಿಂಗ್ ರಾಮನಗರದಲ್ಲಿರುವ ತನ್ನ ಫ್ಯಾಕ್ಟರಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 2,100 ಕೋಟಿ ರೂ ಹೂಡಿಕೆ ಮಾಡಲಿದೆ. ಕರ್ನಾಟಕ ಸರ್ಕಾರದೊಂದಿಗೆ ಅದು ಜುಲೈ 31ರಂದು ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದೆ. ರಾಮನಗರದ ಹಾರೋಹಳ್ಳಿಯಲ್ಲಿ 55 ಎಕರೆ ಜಾಗದಲ್ಲಿ ಅದರ ಫ್ಯಾಕ್ಟರಿ ಇದ್ದು, ಅದರಲ್ಲಿ ವಿವಿಧ ಯಂತ್ರೋಪಕರಣಗಳನ್ನು ತಯಾರಿಸುತ್ತದೆ.
ಸನ್ಸೇರ ಎಂಜಿನಿಯರಿಂಗ್ನ ಫ್ಯಾಕ್ಟರಿ ವಿಸ್ತರಣೆಯಾದರೆ ಅಲ್ಲಿ ಉತ್ಪಾದನಾ ಸಾಮರ್ಥ್ಯ 3,000 ಕೋಟಿ ರೂ ಮೌಲ್ಯದಷ್ಟು ಹೆಚ್ಚಾಗಲಿದೆ. ವಿದೇಶಗಳಿಗೆ ರಫ್ತು ಹೆಚ್ಚಾಗಲಿದೆ. 3,500 ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ. ರಾಮನಗರದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಲಿದೆ.
ಸನ್ಸೇರ ತನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗಾಗಿ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ಯೋಜಿಸಿದೆ. ಸುಧಾರಿತ ತಂತ್ರಜ್ಞಾನ ಮತ್ತು ಅತ್ಯುತ್ತಮ ಕ್ರಮಾವಳಿಗಳನ್ನು ಈ ಫ್ಯಾಕ್ಟರಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬರೋಬ್ಬರಿ 15,000 ಉದ್ಯೋಗಿಗಳನ್ನು ಲೇ ಆಫ್ ಮಾಡಲಿದೆ ಇಂಟೆಲ್ ಸಂಸ್ಥೆ
ಸನ್ಸೇರ ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ?
1981ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಸನ್ಸೇರ ಎಂಜಿನಿಯರಿಂಗ್ ಸಂಸ್ಥೆ ಪ್ರಿಸಿಶನ್ ಮೆಷಿನರಿ ಉತ್ಪನ್ನಗಳನ್ನು ತಯಾರಿಸುತ್ತದೆ. ವಾಹನ ಮತ್ತು ವಾಹನೇತರ ಕ್ಷೇತ್ರಗಳಲ್ಲಿ ಇದರ ಎಂಜಿನಿಯರಿಂಗ್ ವಸ್ತುಗಳು ಬಳಕೆ ಆಗುತ್ತವೆ.
ವಾಹನಗಳ ಎಂಜಿನ್, ಟ್ರಾನ್ಸ್ಮಿಶನ್, ಸಸ್ಪೆನ್ಷನ್, ಬ್ರೇಕಿಂಗ್, ಚಾಸಿಸ್ ಮತ್ತಿತರ ಭಾಗಗಳಿಗೆ ಬೇಕಾದ ಕನೆಕ್ಟಿಂಗ್ ರಾಡ್, ರಾಕರ್ ಆರ್ಮ್, ಕ್ರಾಂಕ್ಶಾಫ್ಟ್, ಗೇರ್ ಶಿಫ್ಟರ್ ಫೋರ್ಕ್ ಇತ್ಯಾದಿ ವಸ್ತುಗಳನ್ನು ಸನ್ಸೇರ ತಯಾರಿಸುತ್ತದೆ. ಏರೋಸ್ಪೇಸ್, ಕೃಷಿ, ಆಫ್ರೋಡ್ ವಾಹನ ಮೊದಲಾದ ಕ್ಷೇತ್ರಗಳಲ್ಲೂ ಇದರ ಪ್ರಿಸಿಶನ್ ವಸ್ತುಗಳು ಬಳಕೆ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ