ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಏಳು ಕೋಟಿಗೂ ಹೆಚ್ಚು ಜನರು ಐಟಿಆರ್ ಸಲ್ಲಿಸಿದ್ದಾರೆ. ಇದೀಗ ಕೆಲ ಮಂದಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರತೊಡಗಿದೆ. ನೋಟೀಸ್ ಎಂದಾಕ್ಷಣ ಯಾವುದೋ ಪ್ರಮಾದ ನಡೆದಿದೆ, ಅಥವಾ ನಡೆಯಲಿದೆ ಎಂದು ಭಾವಿಸಬೇಕಿಲ್ಲ. ಹಲವಾರು ಕಾರಣಗಳಿಗೆ ಐಟಿ ವತಿಯಿಂದ ತೆರಿಗೆ ಪಾವತಿದಾರರಿಗೆ ನೋಟೀಸ್ ಬರಬಹುದು. ಸರಿಯಾಗಿ ಐಟಿ ರಿಟರ್ನ್ ಸಲ್ಲಿಸಿಲ್ಲದಿದ್ದರೆ, ಅಥವಾ ಪ್ರಮುಖ ಆದಾಯ ಮುಚ್ಚಿಟ್ಟದ್ದರೆ, ತೆರಿಗೆ ಪಾವತಿಸಿಲ್ಲದೇ ಇದ್ದರೆ ಹೀಗೆ ಬೇರೆ ಬೇರೆ ಕಾರಣಗಳಿಗೆ ಐಟಿ ಇಲಾಖೆ ನೋಟೀಸ್ ಕೊಡಬಹುದು.
ಸಾಮಾನ್ಯವಾಗಿ ಐಟಿ ಇಲಾಖೆ ಇಮೇಲ್ ಮೂಲಕ ನಿಮಗೆ ನೋಟೀಸ್ ನೀಡುತ್ತದೆ. ಹಾಗೆಯೇ, ಬಹಳಷ್ಟು ವಂಚಕರೂ ಕೂಡ ಐಟಿ ಇಲಾಖೆ ಹೆಸರಿನಲ್ಲಿ ನಿಮಗೆ ಇಮೇಲ್ ಕಳುಹಿಸಬಹುದು. ಆದ್ದರಿಂದ ಎಚ್ಚರದಿಂದಿರಿ.
ನಿಮಗೆ ಬಂದ ಇಮೇಲ್ ಆದಾಯ ತೆರಿಗೆ ಇ ಇಲಾಖೆಯದ್ದಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ಗೆ ಹೋಗಿ ‘ಕ್ವಿಕ್ ಲಿಂಕ್ಸ್’ ಅಡಿಯಲ್ಲಿ ‘ಅಥೆಂಟಿಕೇಟ್ ದಿ ನೋಟೀಸ್ ಇಷ್ಯೂಡ್ ಬೈ ಐಟಿಡಿ’ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಇಮೇಲ್ಗೆ ಬಂದಿರುವ ನೋಟೀಸ್ನ ವಿವರವನ್ನು ಅಲ್ಲಿ ಹಾಕಿ ಪರಿಶೀಲಿಸಿ.
ಒಂದು ವೇಳೆ ಇನ್ಕಮ್ ಟ್ಯಾಕ್ಸ್ ಇಲಾಖೆಯಿಂದ ಇಮೇಲ್ ಬಂದಿದ್ದರೂ ಅದರಲ್ಲಿ ನಮೂದಾಗಿರುವ ಪ್ಯಾನ್ ಇತ್ಯಾದಿ ವಿವರ ನಿಮ್ಮದಾ ಎಂಬುದನ್ನು ಪರಿಶೀಲಿಸಿ. ಹಾಗೆಯೇ, ನೋಟೀಸ್ನಲ್ಲಿ ಹೇಳಿರುವ ಅಂಶಗಳನ್ನು ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳಿ.
ಇದನ್ನೂ ಓದಿ: ಇಂಡೆಕ್ಸೇಶನ್ ಬೇಕೋ ಬೇಡವೋ? ನಿಮ್ಮ ಆಯ್ಕೆಗೆ ಬಿಟ್ಟಿದ್ದು ಎಂದ ಸರ್ಕಾರ; ಎಷ್ಟು ತೆರಿಗೆ ಹೊರೆ ಇಳಿಸುತ್ತೆ ಈ ಕ್ರಮ?
ಸಾಮಾನ್ಯವಾಗಿ ಈ ನೋಟೀಸ್ಗೆ ಉತ್ತರಿಸಲು ಇಲಾಖೆ ಡೆಡ್ಲೈನ್ ಕೊಟ್ಟಿರುತ್ತದೆ. ಅಷ್ಟರೊಳಗೆ ನೀವು ಉತ್ತರ ಕೊಡಬೇಕು. ನೋಟೀಸ್ನಲ್ಲಿರುವ ಅಂಶಗಳನ್ನು ಓದಿ ಸೂಕ್ತ ಸಮಜಾಯಿಷಿಯನ್ನು ಬೇಗನೇ ಕೊಡಲು ಯತ್ನಿಸಿ.
ಸಮಸ್ಯೆ ಸಂಕೀರ್ಣವಾಗಿದ್ದರೆ ತೆರಿಗೆ ಸಲಹೆಗಾರರೊಬ್ಬರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ