HCL Technologies: ಎಚ್‌ಸಿಎಲ್ ಟೆಕ್ನಾಲಜೀಸ್ನಿಂದ ಪ್ರತಿ ಷೇರಿಗೆ 10 ರೂಪಾಯಿ ಡಿವಿಡೆಂಡ್ ಘೋಷಣೆ
ಎಚ್‌ಸಿಎಲ್ ಟೆಕ್ನಾಲಜೀಸ್ನಿಂದ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಾಗಿದ್ದು, 10 ರೂಪಾಯಿಯಂತೆ ಪ್ರತಿ ಷೇರಿಗೆ ಡಿವಿಡೆಂಡ್ ಘೋಷಣೆ ಮಾಡಲಾಗಿದೆ.
ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪೆನಿಯಾದ ಎಚ್‌ಸಿಎಲ್ ಟೆಕ್ನಾಲಜೀಸ್ ಶುಕ್ರವಾರದಂದು FY22ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ (HCL Technologies FY22 Q3 Results) ಪ್ರಕಟಿಸಿದ್ದು, 2021ರ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭವು ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ 13.6ರಷ್ಟು ಇಳಿಕೆ ಆಗಿದ್ದು, 3969 ಕೋಟಿ ರೂಪಾಯಿಯಿಂದ 3,442 ಕೋಟಿ ರೂಪಾಯಿಗೆ ಕುಸಿದಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಕಂಪೆನಿಗೆ ಕಾರ್ಯಾಚರಣೆಗಳಿಂದ 19,302 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ (YoY) 22,331 ಕೋಟಿ ರೂಪಾಯಿಗೆ ತಲುಪುವ ಮೂಲಕ ಶೇ 15.7ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿ ಹೇಳಿದೆ. ಅನುಕ್ರಮವಾಗಿ ಆದಾಯವು ಶೇ 8.1ರಷ್ಟು ಮತ್ತು ನಿವ್ವಳ ಲಾಭವು ಶೇ 5.4ರಷ್ಟು ಹೆಚ್ಚಾಗಿದೆ.
ಬಡ್ಡಿ ಮತ್ತು ತೆರಿಗೆಗೆ ಮುಂಚಿನ (Ebit) ಮಾರ್ಜಿನ್ ಶೇಕಡಾ 19 ರಷ್ಟಿತ್ತು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡಾ 8.5ರಷ್ಟು ಹೆಚ್ಚಾಗಿದ್ದರೆ, ವರ್ಷದಿಂದ ವರ್ಷಕ್ಕೆ ಶೇಕಡಾ 3.7ರಷ್ಟು ಕಡಿಮೆಯಾಗಿದೆ. ಡಿಸೆಂಬರ್ ತ್ರೈಮಾಸಿಕವು ಐಟಿ ಕಂಪೆನಿಗಳಿಗೆ ಋತುವಿನಂತೆ ದುರ್ಬಲವಾಗಿದೆ. ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ, ಆದಾಯದ ಬೆಳವಣಿಗೆಯು ಶೇ 7.6ರಷ್ಟು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಇದೆ. ಇದು ಕಳೆದ 12 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು HCL ಟೆಕ್ನಾಲಜೀಸ್ ಪ್ರಕಟಣೆಯಲ್ಲಿ ತಿಳಿಸಿದೆ. FY22ಗಾಗಿ ಸ್ಥಿರ ಕರೆನ್ಸಿಯಲ್ಲಿ ಅದರ ಆದಾಯವು ಎರಡು ಅಂಕಿಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಕಂಪೆನಿ ಹೇಳಿದೆ. FY22ಕ್ಕೆ EBIT ಮಾರ್ಜಿನ್ ಶೇಕಡಾ 19 ಮತ್ತು 21ರ ಮಧ್ಯೆ ಇರಬಹುದೆಂದು ನಿರೀಕ್ಷಿಸಲಾಗಿದೆ.
ಕಂಪೆನಿಯು Q3ಗಾಗಿ ಪ್ರತಿ ಷೇರಿಗೆ 10 ರೂಪಾಯಿಗಳ ಲಾಭಾಂಶವನ್ನು ಘೋಷಿಸಿದ್ದು, ಈ ಮೂಲಕ ಸತತ 76ನೇ ತ್ರೈಮಾಸಿಕ ಡಿವಿಡೆಂಡ್ ಪಾವತಿ ಮಾಡಲಾಗುತ್ತಿದೆ. ಕಂಪೆನಿಯು ಹೇಳಿರುವಂತೆ, ತನ್ನ ಹೊಸ ಒಪ್ಪಂದದ ಒಟ್ಟು ಒಪ್ಪಂದದ ಮೌಲ್ಯವು (TCV) 2,135 ಮಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ 64ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸೇವೆಗಳ TCV ಎಂಟು ನಿವ್ವಳ ಹೊಸ ಒಪ್ಪಂದದ ಗೆಲುವುಗಳಿಂದ ಸಕ್ರಿಯಗೊಂಡಿದ್ದು, 1,968 ಮಿಲಿಯನ್ (ವರ್ಷದಿಂದ ವರ್ಷಕ್ಕೆ ಶೇ 63)ನಲ್ಲಿತ್ತು. ಉತ್ಪನ್ನಗಳ TCV 167 ಮಿಲಿಯನ್ ಡಾಲರ್ (ವರ್ಷದಿಂದ ವರ್ಷಕ್ಕೆ ಶೇ 70) 8 ನಿವ್ವಳ ಹೊಸ ದೊಡ್ಡ ಒಪ್ಪಂದದ ಗೆಲುವುಗಳಿಂದ ಸಕ್ರಿಯಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಡಿಸೆಂಬರ್ 31, 2021ರ ಅಂತ್ಯದ ವೇಳೆಗೆ ಒಟ್ಟು ನಗದು 2,666 ಮಿಲಿಯನ್ ಡಾಲರ್ ಇದ್ದು, ನಿವ್ವಳ ನಗದು 2,140 ಮಿಲಿಯನ್ ಡಾಲರ್ ಆಗಿದೆ.
“ನಮ್ಮ ಭವಿಷ್ಯವು ಉಜ್ವಲವಾಗಿ ಕಾಣುತ್ತದೆ. ಏಕೆಂದರೆ ನಾವು ಅತ್ಯಂತ ಬಲವಾದ ನಿವ್ವಳ ಹೊಸ ಬುಕಿಂಗ್ ಅನ್ನು ಹೊಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಶೇ 64ರಷ್ಟು ಹೆಚ್ಚಳವಾಗಿದೆ. ಈ ತ್ರೈಮಾಸಿಕದಲ್ಲಿ ನಮ್ಮ ಉದ್ಯೋಗಿಗಳ ಬಲಕ್ಕೆ 10,000ಕ್ಕಿಂತ ಹೆಚ್ಚು ಸೇರಿಸಿದ್ದೇವೆ. ಡಿಜಿಟಲ್, ಕ್ಲೌಡ್ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯಗಳಂತಹ ಕಾರ್ಯತಂತ್ರದ ಆದ್ಯತೆಗಳ ಮೇಲಿನ ನಮ್ಮ ಹೂಡಿಕೆಗಳು ಮತ್ತು ನಮ್ಮ ಪ್ರತಿಭೆ ಅಭಿವೃದ್ಧಿ ಯೋಜನೆಗಳು ಬಲವಾದ ಆದಾಯವನ್ನು ತೋರಿಸುತ್ತಿರುವುದರಿಂದ ನಿರಂತರ ಬೇಡಿಕೆಯ ವೇಗವನ್ನು ಪೂರೈಸಲು ಉತ್ತಮ ಸ್ಥಿತಿಯಲ್ಲಿ ಮುಂದುವರಿಯುವುದನ್ನು ನಂಬುತ್ತೇವೆ, ”ಎಂದು ಎಚ್ಸಿಎಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ. ವಿಜಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: HCL Technologies: ಎಚ್‌ಸಿಎಲ್ ಟೆಕ್ನಾಲಜೀಸ್ ಎರಡನೇ ತ್ರೈಮಾಸಿಕದ ಲಾಭ ರೂ. 3259 ಕೋಟಿ, ಡಿವಿಡೆಂಡ್ ರೂ. 10