ಎಚ್​ಡಿಎಫ್​ಸಿ ಬ್ಯಾಂಕ್ ತ್ರೈಮಾಸಿಕ ವರದಿ ಪ್ರಕಟ; ನಿರೀಕ್ಷೆಮೀರಿ ಭರ್ಜರಿ ಲಾಭ ಹೆಚ್ಚಳ

HDFC Bank Quarterly Results: ಜುಲೈನಿಂದ ಸೆಪ್ಟೆಂಬರ್​​ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಹತ್ತಿರಹತ್ತಿ 16,000 ಕೋಟಿ ರೂ ನಿವ್ವಳ ಲಾಭ ಪಡೆದಿರುವುದು ಅದರ ತ್ರೈಮಾಸಿಕ ವರದಿಯಿಂದ ತಿಳಿಯುತ್ತದೆ. ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದ ಬಳಿಕ ಬಿಡುಗಡೆ ಆದ ಮೊದಲ ತ್ರೈಮಾಸಿಕ ವರದಿ ಇದಾಗಿದೆ. ತಜ್ಞರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಹೆಚ್ಚು ಆದಾಯ ತೋರಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ತ್ರೈಮಾಸಿಕ ವರದಿ ಪ್ರಕಟ; ನಿರೀಕ್ಷೆಮೀರಿ ಭರ್ಜರಿ ಲಾಭ ಹೆಚ್ಚಳ
ಎಚ್​ಡಿಎಫ್​ಸಿ ಬ್ಯಾಂಕ್

Updated on: Oct 16, 2023 | 4:53 PM

ನವದೆಹಲಿ, ಅಕ್ಟೋಬರ್ 16: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್​ಡಿಎಫ್​ಸಿ (HDFC Bank) ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ 15,976.11 ಕೋಟಿ ರೂನಷ್ಟು ನಿವ್ವಳ ಲಾಭ (net profit) ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 50ರಷ್ಟು ಹೆಚ್ಚಳವಾಗಿದೆ. ಅದರ ನಿವ್ವಳ ಬಡ್ಡಿ ಆದಾಯ ಹೆಚ್ಚಾಗಿದೆ. ಜೊತೆಗೆ ಅನುತ್ಪಾದಕ ಆಸ್ತಿಯ ಪ್ರಮಾಣವೂ ಹೆಚ್ಚಾಗಿದೆ.

ಕುತೂಹಲವೆಂದರೆ ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​​ಗಳ ವಿಲೀನದ ಬಳಿಕ ಪ್ರಕಟವಾದ ಮೊದಲ ತ್ರೈಮಾಸಿಕ ವರದಿ ಇದಾಗಿದೆ. ಈ ವಿಲೀನದ ನಂತರ ಎಚ್​​ಡಿಎಫ್​ಸಿ ಬ್ಯಾಂಕ್ ಭಾರತದಲ್ಲಿ ನಂಬರ್ ಒನ್ ಎನಿಸಿರುವುದು ಮಾತ್ರವಲ್ಲ ಜಾಗತಿಕವಾಗಿ ಪ್ರಮುಖ ಬ್ಯಾಂಕುಗಳಲ್ಲಿ ಒಂದೆನಿಸಿದೆ.

ಇದನ್ನೂ ಓದಿ: ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಎಚ್​ಸಿಎಲ್ ಷೇರಿಗೆ ಬೇಡಿಕೆ, ಇನ್ಫೋಸಿಸ್ ಷೇರುಬೆಲೆ ಕುಸಿತ

ಎಚ್​ಡಿಎಫ್​ಸಿ ಬ್ಯಾಂಕ್​ನ ಎರಡನೇ ಕ್ವಾರ್ಟರ್ ವರದಿಯ ಮುಖ್ಯಾಂಶಗಳು

  • ನಿವ್ವಳ ಲಾಭದಲ್ಲಿ ಶೇ. 50ರಷ್ಟು ಹೆಚ್ಚಳವಾಗಿದೆ. 15,976.11 ಕೋಟಿ ರೂ ನಿವ್ವಳ ಲಾಭ ತೋರಿಸಲಾಗಿದೆ.
  • ಅರ್ಧ ವರ್ಷದಲ್ಲಿ ಒಟ್ಟು ಆದಾಯ 1,36,233 ಕೋಟಿ ರೂ.
  • ನಿವ್ವಳ ಆದಾಯ ಶೇ. 114.8ರಷ್ಟು ಹೆಚ್ಚಳ; 66,317 ಕೋಟಿ ರೂ ನೆಟ್ ಇನ್ಕಮ್ ದಾಖಲು
  • ನಿವ್ವಳ ಬಡ್ಡಿ ಆದಾಯ (ಎನ್​ಐಐ) 27,385 ಕೋಟಿ ರೂ
  • ಒಟ್ಟು ಅನುತ್ಪಾದಕ ಆಸ್ತಿ (ಗ್ರಾಸ್ ಎನ್​ಪಿಎ) ಶೇ. 1.34ಕ್ಕೆ ಹೆಚ್ಚಾಗಿದೆ. ಹಿಂದಿನ ಕ್ವಾರ್ಟರ್​ನಲ್ಲಿ ಜಿಎನ್​ಪಿಎ ಶೇ. 1.17ರಷ್ಟಿತ್ತು.
  • ನಿವ್ವಳ ಎನ್​ಪಿಎ ಶೇ. 0.30ರಿಂದ ಶೇ. 0.35ಕ್ಕೆ ಏರಿಕೆ
  • ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ ಅನುಪಾತ (ಕಾಸಾ ರೇಷಿಯೋ) ಶೇ. 37.6ರಷ್ಟಿದೆ.
  • ಬ್ಯಾಲನ್ಸ್ ಶೀಟ್ ಗಾತ್ರ 34.16 ಲಕ್ಷ ಕೋಟಿ ರೂ
  • ಠೇವಣಿಗಳ ಪ್ರಮಾಣ 21.72 ಲಕ್ಷಕೋಟಿ ರೂಗೆ ಏರಿಕೆ
  • ಫಿಕ್ಸೆಡ್ ಇತ್ಯಾದಿ ಅವಧಿ ಠೇವಣಿಗಳ ಪ್ರಮಾಣ 13.55 ಲಕ್ಷಕೋಟಿ ರೂ.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

ಷೇರುಪೇಟೆಯಲ್ಲಿ ಇಳಿಕೆ ಕಂಡ ಎಚ್​ಡಿಎಫ್​ಸಿ ಬ್ಯಾಂಕ್

ಕುತೂಹಲವೆಂದರೆ, ಎಚ್​ಡಿಎಫ್​ಸಿ ಬ್ಯಾಂಕ್​ನ ತ್ರೈಮಾಸಿಕ ವರದಿ ಪ್ರಕಟವಾಗುವ ಮುನ್ನವೇ ಅದರ ಷೇರುಗಳು ತುಸು ಹಿನ್ನಡೆ ಕಂಡವು. ಶುಕ್ರವಾರ ಮಧ್ಯಾಹ್ನದಿಂದಲೇ ಷೇರುಬೆಲೆ ಕುಸಿತ ಕಾಣತೊಡಗಿತ್ತು. 1,545 ರೂ ಇದ್ದ ಅದರ ಬೆಲೆ ಇವತ್ತು ದಿನಾಂತ್ಯದಲ್ಲಿ 1,532ರೂಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ