ನವದೆಹಲಿ: ಯಾರಿಗಾದರೂ ಕೂತು ತಿನ್ನುವಷ್ಟು ಹಣ ಸಿಕ್ಕರೆ ಏನು ಆಲೋಚಿಸಬಹುದು..? ಯಾವುದಾದರೂ ಫಾರೀನ್ ಕಂಟ್ರಿಗೆ ಹೋಗಿ ಐಷಾರಾಮಿಯಾಗಿ ಬದುಕಲು ಬಯಸಬಹುದು. ಆದರೆ, ಸಾಕಷ್ಟು ಯಶಸ್ಸು ಕಂಡಿರುವ ಉದ್ಯಮಿಗಳು, ವ್ಯಾಪಾರಿಗಳು ದೇಶ ಬಿಟ್ಟು ಹೋಗಲು ಏನು ಕಾರಣವಿರಬಹುದು? ಹೆನ್ಲೇ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ 2023 ವರದಿ ಪ್ರಕಾರ ಈ ವರ್ಷ 6,500 ಮಂದಿ ಕೋಟ್ಯಾಧಿಪತಿಗಳು (HNWIs) ಭಾರತದಿಂದ ಹೊರಹೋಗಲಿದ್ದಾರಂತೆ. ಈ ರೀತಿ ಕೋಟ್ಯಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶಬಿಟ್ಟು ಹೋಗುತ್ತಿರುವುದರಲ್ಲಿ ಚೀನಾ ಬಿಟ್ಟರೆ ಭಾರತವೇ ಗರಿಷ್ಠ. ಚೀನಾದಲ್ಲಿ 13,500 ಮಂದಿ ಕೋಟ್ಯಾಧಿಪತಿಗಳು 2023ರಲ್ಲಿ ತಮ್ಮ ದೇಶ ತೊರೆದು ಹೊರಗೆ ಹೋಗಿ ನೆಲಸುತ್ತಿದ್ದಾರಂತೆ. ಅದು ಬಿಟ್ಟರೆ ಭಾರತೀಯರೇ ಹೆಚ್ಚು.
2022ರಲ್ಲಿ ಭಾರತದಿಂದ 7,500 ಮಂದಿ ಕೋಟ್ಯಾಧಿಪತಿಗಳು ಹೊರಗೆ ವಲಸೆ ಹೋಗಿದ್ದರು. ಅದಕ್ಕೆ ಹೋಲಿಸಿದರೆ ಈ ವರ್ಷ ಹೊರ ಹೋಗುತ್ತಿರುವವರ ಸಂಖ್ಯೆ 1,000ದಷ್ಟು ಕಡಿಮೆಯೇ ಆಗಲಿದೆ. ಈ ಸಿರಿವಂತರ ವಲಸೆಯ ಸಮಸ್ಯೆ ಭಾರತ, ಚೀನಾಗೆ ಮಾತ್ರವಿಲ್ಲ, ಜಾಗತಿಕವಾಗಿ ಇದೆ. ವಿಶ್ವಾದ್ಯಂತ 2023ರಲ್ಲಿ 1,28,000 ಮಂದಿ ಕೋಟ್ಯಾಧಿಪತಿಗಳು ತಮ್ಮ ದೇಶದಿಂದ ಹೊರಗೆ ವಲಸೆ ಹೋಗಲಿದ್ದಾರಂತೆ.
ಇಲ್ಲಿ ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಈ ವರದಿಯಲ್ಲಿ ಹೇಳಲಾಗಿರುವ ಶ್ರೀಮಂತರನ್ನು ಹೆಚ್ಎನ್ಡಬ್ಲ್ಯೂಐ ಎಂದು ಸಂಬೋಧಿಸಲಾಗಿದೆ. ಇವರು ಹೈ ನೆಟ್ ವರ್ತ್ ಇಂಡಿವಿಜುವಲ್. ಅಧಿಕ ಆಸ್ತಿ ಹೊಂದಿರುವ ವ್ಯಕ್ತಿಗಳು ಇವರು. ಹೂಡಿಕೆ ಮಾಡಲು ಸಾಧ್ಯ ಇರುವ ಕನಿಷ್ಠ 1 ಮಿಲಿಯನ್ ಡಾಲರ್ನಷ್ಟು (ಸುಮಾರು 8-10 ಕೋಟಿ ರೂ) ಮೊತ್ತದ ಹಣ ಹೊಂದಿರುವವರನ್ನು ಎಚ್ಎನ್ಡಬ್ಲ್ಯೂಐ ಎಂದು ಪರಿಗಣಿಸಲಾಗುತ್ತದೆ.
ಕೆಲವೊಂದಿಷ್ಟು ತೆರಿಗೆ ನಿಯಮಗಳು ಹಾಗೂ ಬೇರೆ ದೇಶಗಳಿಗೆ ಹಣ ರವಾನಿಸುವ ವ್ಯವಸ್ಥೆಯನ್ನು ಸಂಕೀರ್ಣಗೊಳಿಸಿದ್ದು ಇವೇ ಮುಂತಾದ ಕೆಲ ಸಂಗತಿಗಳು ಭಾರತದಿಂದ ಕೋಟ್ಯಾಧಿಪತಿಗಳನ್ನು ಬೇರೆ ದೇಶಕ್ಕೆ ಹೋಗುವಂತೆ ಮಾಡಿವೆ ಎಂಬುದು ಈ ವರದಿಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ.
ಈ ಶ್ರೀಮಂತರು ಭಾರತದಲ್ಲಿ ಹೂಡಿಕೆದಾರರೂ ಆಗಿದ್ದವರು. ಹೀಗಾಗಿ, ಭಾರತದಿಂದ ಸಾಕಷ್ಟು ಹೂಡಿಕೆಗಳು ಹೊರತೆಗೆಯಲ್ಪಡಬಹುದು. ಆದರೆ, ಇದನ್ನು ಮರೆಸುವಂತೆ ಭಾರತದಲ್ಲಿ ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೋಟ್ಯಾಧಿಪತಿಗಳು ನಿರ್ಮಾಣ ಆಗುತ್ತಲೆ ಇದ್ದಾರೆ. ಹೀಗಾಗಿ, 6,500 ಮಂದಿ ಶ್ರೀಮಂತರು ಹೊರಹೋಗುವುದರಿಂದ ಭಾರತದ ಆರ್ಥಿಕತೆಗೆ ಅಷ್ಟೇನೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಆಗಲೆ ಹೇಳಿದಂತೆ 2023ರಲ್ಲಿ ಜಾಗತಿಕವಾಗಿ 1,28,000 ಮಂದಿ ಕೋಟ್ಯಾಧಿಪತಿಗಳು ಬೇರೆ ದೇಶಗಳಿಗೆ ವಲಸೆ ಹೋಗಲಿದ್ದಾರೆ. ಈ ಪೈಕಿ ಅತಿಹೆಚ್ಚು ಮಂದಿ ಆಸ್ಟ್ರೇಲಿಯಾಗೆ ವಲಸೆ ಹೋಗುತ್ತಿದ್ದಾರೆ. ಸುಮಾರು 5,200 ಮಂದಿ ಆಸ್ಟ್ರೇಲಿಯಾಗೆ; 4,500 ಮಂದಿ ಯುಎಇಗೆ; 3,200 ಮಂದಿ ಸಿಂಗಾಪುರಕ್ಕೆ; 2,100 ಮಂದಿ ಅಮೆರಿಕಕ್ಕೆ ಹಾರಲಿದ್ದಾರಂತೆ. ಹಾಗೆಯೇ, ಸ್ವಿಟ್ಜರ್ಲೆಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್ ಮತ್ತು ನ್ಯೂಜಿಲೆಂಡ್ ದೇಶಗಳತ್ತಲೂ ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿ ನೆಲಸಲು ಹೋಗುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ