LIC Jeevan Labh Policy: ದಿನಕ್ಕೆ 253 ರೂ. ಉಳಿಸಿದರೆ ಜೀವನ್ ಲಾಭ್ ಪಾಲಿಸಿಯಿಂದ ಸಿಗುತ್ತದೆ 54.50 ಲಕ್ಷ ರೂಪಾಯಿ
ಎಲ್ಐಸಿ ಜೀವನ್ ಲಾಭ್ ಪಾಲಿಸಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ. ಇದರ ಅನುಕೂಲಗಳೇನು ಎಂಬುದರ ವಿವರ ಸಹ ಇಲ್ಲಿದೆ.
ಭಾರತೀಯರಿಗೆ ಎಲ್ಐಸಿ (LIC) ಅಂದರೆ ನಂಬಿಕೆ, ವಿಶ್ವಾಸ ಹಾಗೂ ಬ್ರ್ಯಾಂಡ್. ಯಾವುದಾದರೂ ಇನ್ಷೂರೆನ್ಸ್ ಪಾಲಿಸಿ ಖರೀದಿ ಮಾಡಬೇಕು ಅಂದಾಕ್ಷಣ ಅವರೆದುರಿಗೆ ಬರುವ ಮೊದಲ ಆಯ್ಕೆ ಎಲ್ಐಸಿ ಇಂಡಿಯಾದು. ಎಲ್ಲ ವಯಸ್ಸಿವರಿಗೂ ಯಾವುದಾದರೂ ಒಂದು ಪ್ಲಾನ್ ಎಲ್ಐಸಿಯಿಂದ ಇದ್ದೇ ಇದೆ. ಬ್ಯಾಂಕ್, ಪೋಸ್ಟ್ ಆಫೀಸ್ ಉಳಿತಾಯವನ್ನು ಸಾಕಷ್ಟು ಮಾಡಿದ್ದೇನೆ ಎಂದು ಎನಿಸಿದ ಮೇಲೆ ಅಪಾಯ ಇರದ, ಉತ್ತಮ ರಿಟರ್ನ್ ದೊರೆಯುವಂತಿದ್ದರೆ ಅದು ಎಲ್ಐಸಿ ಪ್ಲಾನ್ಗಳಿಂದ. ಎಲ್ಐಸಿಯಿಂದ ನೀಡುವ ರಿಟರ್ನ್ಗೂ ಷೇರು ಮಾರುಕಟ್ಟೆಗೂ ಏನೇನೂ ಸಂಬಂಧ ಇಲ್ಲ. ಆ ಕಾರಣಕ್ಕೆ ಷೇರು ಮಾರುಕಟ್ಟೆಯ ಎಂಥ ಏರಿಳಿತಕ್ಕೂ ಕಂಗಾಲಾಗಬೇಕಿಲ್ಲ. ಎಲ್ಐಸಿ ಜನಪ್ರಿಯವಾದ ಸ್ಕೀಮ್ಗಳ ಪೈಕಿ ಜೀವನ್ ಲಾಭ್ ಪಾಲಿಸಿ ಸಹ ಒಂದು. ಇಂದಿನ ಲೇಖನದಲ್ಲಿ ಆ ಬಗ್ಗೆ ತಿಳಿಸಲಾಗುವುದು.
ಏನಿದು ಜೀವನ್ ಲಾಭ್ ಪಾಲಿಸಿ?
ಜೀವನ್ ಲಾಭ್ ಪಾಲಿಸಿ ಎಂಬುದು ಲಿಮಿಟೆಡ್ ಪ್ರೀಮಿಯಂ ಪಾವತಿ, ನಾನ್ ಲಿಂಕ್ಡ್, ಪ್ರಾಪಿಟ್ ಎಂಡೋಮೆಂಟ್ ಪ್ಲಾನ್. ಇದು ರಕ್ಷಣೆ ಮತ್ತು ಉಳಿತಾಯ ಎರಡನ್ನೂ ಒದಗಿಸುತ್ತದೆ. ಮೆಚ್ಯೂರಿಟಿಗಿಂತ ಮುಂಚಿತವಾಗಿ ಪಾಲಿಸಿಯ ಚಂದಾದಾರರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹಣಕಾಸಿನ ಬೆಂಬಲ ಒದಗಿಸುತ್ತದೆ. ಒಂದು ವೇಳೆ ಚಂದಾದಾರು ಬದುಕುಳಿದಲ್ಲಿ ಒಂದು ಸಲದ ಇಡಿಗಂಟು ಪಾವತಿಸಲಾಗುವುದು. ನಗದಿನ ತುರ್ತು ಇದ್ದಾಗ ಸಾಲ ಸೌಲಭ್ಯ ಸಹ ದೊರೆಯುತ್ತದೆ.
ವೈಶಿಷ್ಟ್ಯ ಮತ್ತು ಅರ್ಹತೆ
ಈ ಎಲ್ಐಸಿ ಜೀವನ್ ಲಾಭ್ ಪಾಲಿಸಿ ಅಡಿಯಲ್ಲಿ ಸಮ್ ಅಶ್ಯೂರ್ಡ್ ಕನಿಷ್ಠ ಮೊತ್ತ 2 ಲಕ್ಷ ರೂಪಾಯಿ. ಚಂದಾದಾರರು 10, 15 ಮತ್ತು 16 ವರ್ಷ ಪ್ರೀಮಿಯಂ ಪಾವತಿಸಬಹುದು. ಮೆಚ್ಯೂರಿಟಿ ಮೊತ್ತವನ್ನು 16ರಿಂದ 25 ವರ್ಷ ಆದ ಮೇಲೆ ಪ್ರೀಮಿಯಂ ಅವಧಿ ಪಾವತಿಸಿದ ಅವಧಿ ಮೇಲೆ ಪಡೆಯಬಹುದು. ಎಲ್ಐಸಿ ಜೀವನ್ ಲಾಭ್ ಪಾಲಿಸಿ ಪಡೆಯಲು ಕನಿಷ್ಠ ವಯೋಮಿತಿ 8 ವರ್ಷ, ಗರಿಷ್ಠ ಪ್ರವೇಶ ವಯೋಮಿತಿ 59 ವರ್ಷ, ಇದು 16 ವರ್ಷಗಳ ಮೆಚ್ಯೂರಿಟಿಗಳ ಅವಧಿಗೆ. ಇದರ ಅರ್ಥ ಏನೆಂದರೆ, ಎಲ್ಐಸಿ ಜೀವನ್ ಲಾಭ್ ಮೆಚ್ಯೂರಿಟಿ ಆಗುವ ಹೊತ್ತಿಗೆ ಚಂದಾದಾರರ ವಯಸ್ಸು 75 ದಾಟಬಾರದು.
ಜೀವನ್ ಲಾಭ್ ಪಾಲಿಸಿ ಅನುಕೂಲಗಳು
ಈ ಪಾಲಿಸಿಯಲ್ಲಿ ಹಲವು ಅನುಕೂಲಗಳಿವೆ. ಮೆಚ್ಯೂರಿಟಿ ಆಗುವಾಗ ಪಾಲಿಸಿದಾರರು ಜೀವಂತವಾಗಿ ಇದ್ದಲ್ಲಿ ಸಮ್ ಅಶ್ಯೂರ್ಡ್ ಜತೆಗೆ ಸರಳ ಬೋನಸ್ ಮತ್ತು ಹೆಚ್ಚುವರಿ ಬೋನಸ್ ಏನಾದರೂ ಇದ್ದಲ್ಲಿ ಅದನ್ನೂ ಸೇರಿಸಿ ಪಾವತಿಸಬೇಕು. ಆದರೆ ಆ ಅವಧಿಯಲ್ಲಿ ಎಲ್ಲ ಪ್ರೀಮಿಯಂ ಸರಿಯಾಗಿ ಪಾವತಿಸಿರಬೇಕು. ಒಂದು ವೇಳೆ ಪಾಲಿಸಿದಾರರು ಬದುಕಿರದಿದ್ದಲ್ಲಿ ಮರಣ ಸಮಯದಲ್ಲಿ ನಾಮಿನಿಗೆ ಸಮ್ ಅಶ್ಯೂರ್ಡ್ ದೊರೆಯುತ್ತದೆ. ಅದು ಪೂರ್ತಿ ಅಶ್ಯೂರ್ಡ್ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಸಿಗುತ್ತದೆ.
ದಿನಕ್ಕೆ 253 ರೂ. ಪಾವತಿ, ಮೆಚ್ಯೂರಿಟಿ ವೇಳೆ 55 ಲಕ್ಷ ರೂ.
ಚಂದಾದಾರರು 25 ವರ್ಷದವರಾಗಿದ್ದು, 25 ವರ್ಷಗಳ ಮೆಚ್ಯೂರಿಟಿ ಅವಧಿಗೆ ಪಾಲಿಸಿ ಖರೀದಿಸಿದಲ್ಲಿ 54.50 ಲಕ್ಷ ರೂಪಾಯಿ ಪಡೆಯಬಹುದು. ಅದಕ್ಕಾಗಿ 20 ಲಕ್ಷ ರೂಪಾಯಿ ಬೇಸಿಕ್ ಸಮ್ ಅಶ್ಯೂರ್ಡ್ ಆರಿಸಿಕೊಳ್ಳಬೇಕು. 92,400 ರೂಪಾಯಿ ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಅಂದರೆ ದಿನಕ್ಕೆ 253 ರೂಪಾಯಿ ಆಗುತ್ತದೆ. 25 ವರ್ಷಗಳ ನಂತರ ಒಟ್ಟು ಮೌಲ್ಯ 54.50 ಲಕ್ಷ ಆಗುತ್ತದೆ.
ಇದನ್ನೂ ಓದಿ:LIC Jeevan Amar: ಎಲ್ಐಸಿಯ ಜೀವನ್ ಅಮರ್ ಪಾಲಿಸಿ ಇಷ್ವವಾಗದಿದ್ದಲ್ಲಿ 15 ದಿನದಲ್ಲೇ ನಿಮ್ಮ ಹಣ ವಾಪಸ್
Published On - 8:33 pm, Thu, 23 June 22