Personal finance: ನಾಳೆ ಮಾಡುವುದನ್ನೇ ಇಂದೇ ಮಾಡಿ; ಅದೇನೆಂದರೆ ವಿಲ್
ಉಯಿಲು ಮಾಡುವುದು ಇವತ್ತಿಗೆ ಎಷ್ಟರ ಮಟ್ಟಿಗೆ ಮುಖ್ಯ? ಇದನ್ನು ಯಾಕೆ ಮುಂದಕ್ಕೆ ಹಾಕಬಾರದು ಎಂಬುದಕ್ಕೆ ಉದಾಹರಣೆ ಸಹಿತವಾದ ಮುಖ್ಯ ಮಾಹಿತಿ ಈ ಲೇಖನದಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿಗೆ ತಮ್ಮ ಕುಟುಂಬದಲ್ಲೇ ನಡೆದ ಇತಿಹಾಸ ಪುನರಾವರ್ತನೆ ಆಗುವುದು ಇಷ್ಟ ಇಲ್ಲ. ಈ ವಿಚಾರದಲ್ಲಿ ಮುಕೇಶ್ ತನ್ನ ತಂದೆಗಿಂತ ಭಿನ್ನವಾಗಿ ಹೆಜ್ಜೆ ಇಡುವ ನಿರ್ಧಾರ ಮಾಡಿದ್ದಾರೆ. 2002ನೇ ಇಸವಿಯಲ್ಲಿ ಪಾರ್ಶ್ವವಾಯುವಿನಿಂದ ನಿಧನರಾದ ಧೀರೂಭಾಯಿ ಅಂಬಾನಿ ಅವರು ತಮ್ಮ ಬಿಲಿಯನ್ ಡಾಲರ್ ರಿಲಯನ್ಸ್ ಸಾಮ್ರಾಜ್ಯವನ್ನು ತೊರೆದರು. ಆಗ ತಮ್ಮ ಆಸ್ತಿಯ ವಿಭಜನೆ ಮಾಡಿರಲಿಲ್ಲ. ಆ ತಪ್ಪಿನಿಂದ ಅವರ ಕುಟುಂಬದ ಮುಂದಿನ ಪೀಳಿಗೆಯು ಸಂಪತ್ತು ಮತ್ತು ಶಾಂತಿ ಎರಡನ್ನೂ ಕಳೆದುಕೊಂಡಿತು. ಧೀರೂಭಾಯಿ ಮರಣದ ನಂತರ ದ್ವೇಷ ಮತ್ತು ದಾಯಾದಿ ಕಲಹದಿಂದ ಕುಟುಂಬ ಒಡೆಯಿತು. ಮತ್ತು ಒಡಹುಟ್ಟಿದವರೇ ಪೈಪೋಟಿಗೆ ನಿಂತರು. ಅವರೇ ಮುಕೇಶ್ ಮತ್ತು ಅನಿಲ್ ಅಂಬಾನಿ. ಜಗಳ ಮಾಡಿಕೊಂಡರು, ಪರಸ್ಪರ ಕೆಸರೆರಚಿಕೊಂಡರು. ಇದು ಎಲ್ಲಿಯ ತನಕ ಹೋಯಿತೆಂದರೆ, ಅವರ ತಾಯಿ ಕೋಕಿಲಾಬೆನ್ ಮತ್ತು ಶ್ರೀನಾಥಜಿ ದೇವಸ್ಥಾನ ಹಸ್ತಕ್ಷೇಪ ಆಗುವ ತನಕ ಇದು ನಡೆಯಿತು. ಕೊನೆಗೂ 2005ರಲ್ಲಿ ಮಧ್ಯವರ್ತಿಗಳ ಮೂಲಕ ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಸಂಪತ್ತು, ಆಸ್ತಿ ವಿಭಜನೆಗೆ ಕಾರಣವಾಯಿತು.
ಹಾಗಾದರೆ ಇದರಿಂದ ನಾವು ಕಲಿಯಲು ಏನಿದೆ? -ನೀವು ಇಂದು ಪೂರ್ಣಗೊಳಿಸಬಹುದಾದ ಪ್ರಮುಖ ಕಾರ್ಯಗಳಲ್ಲಿ ಒಂದು: ವಿಲ್ (ಮರಣ ಇಚ್ಛಾ ಪತ್ರ) ಅನ್ನು ಈಗಲೇ ಮಾಡುವುದು. ಹೀಗೆ ಯೋಚಿಸುವುದು, ಮಾತನಾಡುವುದು ಅಥವಾ ಅಥವಾ ವಿಲ್ ಮಾಡಿ ಇಡುವುದೇ ತಪ್ಪು ಎಂದು ನಮ್ಮಲ್ಲಿ ಅನೇಕರು ಭಾವಿಸುತ್ತಾರೆ. ಹಾಗಾಗಿ ಅದನ್ನು ಮಾಡುವುದೇ ಇಲ್ಲ. ಮರಣದ ಬಗ್ಗೆ ವಿಚಾರ ಮಾಡುವುದು ತಪ್ಪು ಅಂತ ಅಂದುಕೊಳ್ಳುವವರೇ ಜಾಸ್ತಿ. ಆದರೆ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಸಮಯಕ್ಕೆ ಸರಿಯಾಗಿ ವಿಲ್ ಮಾಡಿಟ್ಟರೆ ನಮ್ಮ ನಂತರ ಕುಟುಂಬಗಳಲ್ಲಿ ಸಮಸ್ಯೆ ಇರುವುದಿಲ್ಲ. ವಿಲ್ ಮಾಡುವ ಮೂಲಕ ಸ್ವತ್ತುಗಳನ್ನು ನಮ್ಮ ನಂತರ ಮಕ್ಕಳಿಗೆ ನೀಡುವುದು, ಹಂಚಿಕೆ ಮಾಡುವುದು ಸುಲಭ.
ಹಾಗಾದರೆ ವಿಲ್ ಮಾಡುವುದು ಹೇಗೆ? 18 ವರ್ಷಗಳನ್ನು ಪೂರ್ಣಗೊಳಿಸಿದ ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವ ಯಾವುದೇ ವ್ಯಕ್ತಿಯು ವಿಲ್ ಅನ್ನು ಕಾರ್ಯಗತಗೊಳಿಸಬಹುದು. ಸ್ಟಾಂಪ್ ಪೇಪರ್‌ನಲ್ಲಿ ಉಯಿಲು ಮಾಡಬೇಕಾದ ಅಗತ್ಯವಿಲ್ಲ ಅಥವಾ ಅದಕ್ಕೆ ಯಾವುದೇ ಮುದ್ರಾಂಕ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಯಾವುದೇ ಕಾನೂನು ಪರಿಭಾಷೆಗಳಿಲ್ಲದ ಸರಳ ಕಾಗದದ ಮೇಲೆ ಸಹ ನೀವು ಉಯಿಲು ಬರೆಯಬಹುದು. ಅಗತ್ಯವಿರುವುದು ನಿಮ್ಮ ಉದ್ದೇಶವು ಅದರ ಸರಳವಾದ ಓದುವಿಕೆಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಕಾನೂನುಬದ್ಧವಾಗಿ ವರ್ಗಾಯಿಸಬಹುದಾದ ಎಲ್ಲ ಸ್ವತ್ತುಗಳನ್ನು ವಿಲ್‌ನಲ್ಲಿ ಸೇರಿಸಬಹುದು. ನೀವು ಅದಕ್ಕೆ ಸಹಿ ಮಾಡಬೇಕಾಗುತ್ತದೆ ಮತ್ತು ಉಯಿಲು ಕನಿಷ್ಠ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸುವ ಅಗತ್ಯವಿದೆ, ಅವರಲ್ಲಿ ಒಬ್ಬರು ನಿಮ್ಮ ಕುಟುಂಬ ವೈದ್ಯರಾಗಿರಬೇಕು.
ವಿಲ್‌ನಲ್ಲಿ ಏನಿದೆ ಎಂಬುದು ಸಾಕ್ಷಿಗಳಿಗೆ ಗೊತ್ತಿರಬೇಕಿಲ್ಲ. ಸಾಕ್ಷಿಗಳ ಸಹಿಗಳನ್ನು ಬೇರೆ ಬೇರೆ ಸಮಯದಲ್ಲಿ ಪಡೆಯಬಹುದು. ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಅವರು ಏನು ಹೇಳುತ್ತಾರೆ ಗೊತ್ತಾ? “ವಿಲ್‌ನಲ್ಲಿ ಸೇರಿಸದೇ ಇರುವ ಸ್ವತ್ತಿನ ಬಗ್ಗೆ ಕೂಡ ಒಂದು ಮಾತು ಹೇಳಬೇಕು. ಅದಕ್ಕೆ ಇಂಗ್ಲಿಷಿನಲ್ಲಿ residual clause ಎನ್ನುತ್ತಾರೆ. ಇದು ವಿಲ್‌ನಲ್ಲಿ ಸ್ಪಷ್ಟವಾಗಿ ಸೇರದೇ ಇರುವ ಸ್ವತ್ತುಗಳನ್ನು ನೋಡಿಕೊಳ್ಳುತ್ತದೆ.”
ವಕೀಲರಾದ ಜಯಸಿಂಹ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿ, ಇತ್ತೀಚೆಗೆ ವಿಲ್ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ನಂತರದಲ್ಲಿ ಈ ಬಗ್ಗೆ ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನು ವಿಲ್ ಹೇಗೆ ಅನುಷ್ಠಾನಕ್ಕೆ ಬರುತ್ತದೆ, ಅದನ್ನು ಜಾರಿಗೆ ತರುವುದು ಹೇಗೆ ಇತ್ಯಾದಿ ಸಂಗತಿಗಳು ಸರಳವಾಗಿಯೇ ತಿಳಿಯಬಹುದು. ವಕೀಲರೊಬ್ಬರ ಮಾರ್ಗದರ್ಶನ ಪಡೆಯುವುದು ಉತ್ತಮ.
ಹಾಗಾದರೆ Money9 ಏನು ಶಿಫಾರಸು ಮಾಡುತ್ತದೆ? ಚರ ಅಥವಾ ಸ್ಥಿರ ಆಸ್ತಿ ಖರೀದಿ ಮಾಡಿದ ತಕ್ಷಣ ವಿಲ್ ಮಾಡಿಸಿ. ಮದುವೆಯಾಗಲು ಅಥವಾ ಮಕ್ಕಳನ್ನು ಹೊಂದಲು ಅಥವಾ ವಿಲ್ ಬರೆಯಲು ನಿರ್ದಿಷ್ಟ ವಯಸ್ಸನ್ನು ತಲುಪಲು ಕಾಯಬೇಡಿ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ವಿಲ್ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಿಳಿದುಕೊಳ್ಳಿ.
ಒಬ್ಬ ವ್ಯಕ್ತಿಯು ವಿಲ್ ಮಾಡದೆ ಮೃತಪಟ್ಟರೆ ಸಂಪತ್ತು ಮತ್ತು ಸ್ವತ್ತು ಹಂಚಿಕೆ ಹೇಗೆ? ಈ ಕುರಿತು ತಿಳಿದುಕೊಳ್ಳಲು ಟಿವಿ9 ಕನ್ನಡದಲ್ಲೇ ನಿರೀಕ್ಷಿಸಿ.
ಇದನ್ನೂ ಓದಿ: Estate planning: ಏನಿದು ಎಸ್ಟೇಟ್ ಪ್ಲಾನಿಂಗ್ ಸಂಗತಿ, ಇದು ನಿಮಗೆ ಗೊತ್ತಿರಲೇಬೇಕಾದ ಮಾಹಿತಿ