ನವದೆಹಲಿ: ಸಿಗರೇಟ್, ಗುಟ್ಕಾದಂಥ ತಂಬಾಕು ಉತ್ಪನ್ನಗಳ (Tobacco Products) ಮೇಲೆ ಅತಿಹೆಚ್ಚು ತೆರಿಗೆ (Tax) ವಿಧಿಸಿ ಅವುಗಳನ್ನು ಜನ ಖರೀದಿಸುವುದೇ ಕಡಿಮೆಯಾಗುವಂತೆ ಮಾಡಬೇಕು ಎಂಬ ಒಕ್ಕೊರಲ ಆಗ್ರಹ ಆರ್ಥಿಕ ತಜ್ಞರು, ಆರೋಗ್ಯ ಕ್ಷೇತ್ರದ ಪರಿಣತರಿಂದ ವ್ಯಕ್ತವಾಗಿದೆ. ದೆಹಲಿಯಲ್ಲಿ ತಂಬಾಕು ಮುಕ್ತ ಸಂಘಟನೆಯು (Tobacco Free India) ಆಯೋಜಿಸಿದ್ದ ‘ಅಮೃತಕಾಲ: ತಂಬಾಕು ಮುಕ್ತ ಭಾರತದತ್ತ ಒಂದು ಪಯಣ’ ಎಂಬ ಕಾರ್ಯಕ್ರಮದಲ್ಲಿ ತಜ್ಞರು ತಂಬಾಕು ಉತ್ಪನ್ನಗಳ ಮೇಲೆ ಇನ್ನಷ್ಟು ತೆರಿಗೆ ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜತೆಗೆ, ಈ ಬಾರಿಯ ಬಜೆಟ್ನಲ್ಲಿ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಳವನ್ನು ಸ್ವಾಗತಿಸಿದ್ದಾರೆ.
ಸಿಗರೇಟ್ ಮೇಲಿನ ಸುಂಕವನ್ನು ಶೇ 16ರಷ್ಟು ಹೆಚ್ಚಳ ಮಾಡಿರುವುದು ಸರ್ಕಾರದ ಉದ್ದೇಶವೇನೆಂಬುದನ್ನು ಸ್ಪಷ್ಟಪಡಿಸಿದೆ. ತೆರಿಗೆ ಹೆಚ್ಚಿಸುವ ಮೂಲಕ ತಂಬಾಕು ನಿಯಂತ್ರ ನೀತಿಯನ್ನು ಇನ್ನಷ್ಟು ಕಠಿಣಗೊಳಿಸಲು ಸರ್ಕಾರ ಮುಂದಾಗಿದೆ. ತಂಬಾಕು ಉತ್ಪನ್ನಗಳ ಪರಿಣಾಮ ದೇಶದಲ್ಲಿ ವಾರ್ಷಿಕ 13 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಾಯಕಾರಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ ಅವುಗಳ ಬಳಕೆ ಕಡಿಮೆ ಮಾಡುವುದು ಉತ್ತಮ ವಿಧಾನ ಎಂದು ಅರ್ಥಶಾಸ್ತ್ರಜ್ಞ, ಬಿಜೆಪಿ ವಕ್ತಾರ ಗೋಪಾಲ ಕೃಷ್ಣ ಅಗರ್ವಾಲ್ ಹೇಳಿದ್ದಾರೆ.
‘ತೆರಿಗೆ ದರವನ್ನು ವಿಪರೀತ ಹೆಚ್ಚಿಸುವ ಮೂಲಕ ತಂಬಾಕು ಉತ್ಪನ್ನಗಳ ಲಭ್ಯತೆ ಕಡಿಮೆ ಮಾಡಬೇಕು ಹಾಗೂ ಅದು ಜನರ ಕೈಗೆ ಸಿಗದಂತೆ ಮಾಡಬೇಕು. ಜನರು ಅಂಥ ಅಪಾಯಕಾರಿ ಉತ್ಪನ್ನಗಳ ಬಗ್ಗೆ ಜಾಗೃತಿ ಹೊಂದುವಂತೆ ಮಾಡಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ujjivan Small Finance Bank: 560 ದಿನಗಳ ಠೇವಣಿಗೆ ಶೇ 8.20ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್
ಪ್ರಸ್ತುತ ಸಿಗರೇಟ್ ಮೇಲೆ ಒಟ್ಟು ಶೇ 53ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಬೀಡಿಗಳ ಮೇಲೆ ಶೇ 22ರಷ್ಟು ಮತ್ತು ಹೊಗೆರಹಿತ ತಂಬಾಕಿನ ಮೇಲೆ ಶೇ 60ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ತೆರಿಗೆಯನ್ನು ಇನ್ನೂ ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ಅದರಿಂದ ಉದ್ಯಮದ ಮೇಲೆ ಹೆಚ್ಚು ಪರಿಣಾಮವಾಗುವಿಲ್ಲ. ಆದರೆ ಖಂಡಿತವಾಗಿಯೂ ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಪ್ರತಿ ತಂಬಾಕು ಉತ್ಪನ್ನದ ಮೇಲೆ ಒಂದೇ ರೀತಿಯಲ್ಲಿ ಶೇ 75ರಷ್ಟು ತೆರಿಗೆ ವಿಧಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದೆ. ತಂಬಾಕು ಉತ್ಪನ್ನಗಳ ಮೇಲೆ ಈಗ ವಿಧಿಸುತ್ತಿರುವ ತೆರಿಗೆ ತುಂಬಾ ಕಡಿಮೆ ಇದೆ ಎಂಬುದಾಗಿ ಸಂಸದೀಯ ಸಮಿತಿಯೂ ಇತ್ತೀಚೆಗೆ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
Published On - 2:38 pm, Mon, 13 February 23