Housing Price: ಬೆಂಗಳೂರು ಸೇರಿ 8 ನಗರಗಳಲ್ಲಿ ಹೆಚ್ಚಾಗಿದೆ ವಸತಿ ದರ; ಇಲ್ಲಿದೆ ವಿವರ

|

Updated on: Feb 07, 2023 | 3:57 PM

2016-21ರ ಅವಧಿಯಲ್ಲಿ ವಸತಿ ದರಗಳು ಸ್ಥಿರವಾಗಿದ್ದವು. 2022ರಲ್ಲಿ ನಿರ್ಮಾಣ ಸಲಕರಣೆಗಳ ವೆಚ್ಚದಲ್ಲಿ ಏರಿಕೆಯಾದದ್ದು ವಸತಿ ದರ ಹೆಚ್ಚಳಕ್ಕೆ ಕಾರಣವಾಯಿತು. ರಷ್ಯಾ-ಉಕ್ರೇನ್ ಯುದ್ಧ, ಜಾಗತಿಕ ಪೂರೈಕೆ ಸರಪಳಿಗೆ ಅಡಚಣೆ ಇತ್ಯಾದಿ ಅಂಶಗಳು ನಿರ್ಮಾಣ ಸಲಕರಣೆಗಳ ದರ ಏರಿಕೆಗೆ ಕಾರಣವಾಯಿತು ಎನ್ನಲಾಗಿದೆ.

Housing Price: ಬೆಂಗಳೂರು ಸೇರಿ 8 ನಗರಗಳಲ್ಲಿ ಹೆಚ್ಚಾಗಿದೆ ವಸತಿ ದರ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಿರ್ಮಾಣ ವೆಚ್ಚದಲ್ಲಿ ಏರಿಕೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮವಾಗಿ ಬೆಂಗಳೂರು (Bengaluru) ಸೇರಿದಂತೆ ದೇಶದ 8 ನಗರಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಸತಿ ದರ (Housing Price) ಸರಾಸರಿ ಶೇ 7ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. 2021ರ ಕ್ಯಾಲೆಂಡರ್ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ವಸತಿ ದರ ಚದರ ಅಡಿಗೆ 6,700 ರೂ.ನಿಂದ 6,900 ರೂ.ಗೆ ಹೆಚ್ಚಳವಾಗಿರುವುದು ಪ್ರಾಪ್​​ಟೈಗರ್ ಡಾಟ್​ ಕಾಂ ದತ್ತಾಂಶಗಳಿಂದ ತಿಳಿದುಬಂದಿದೆ. ಈ ಮಧ್ಯೆ, ವಸತಿ ಆಸ್ತಿಯ ದರ ಹೆಚ್ಚಳವಾದರೂ 2022ರಲ್ಲಿ ಮಾರಾಟದ ಮೇಲೆ ಪರಿಣಾಮವಾಗಿಲ್ಲ. ಕಳೆದ ಎರಡು ವರ್ಷಗಳಿಗಿಂತ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ ಎಂದು ‘ರಿಯಲ್​ ಇನ್​ಸೈಟ್’ ವರದಿ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದಿಂದ ದೇಶವು ಹಳಿಗೆ ಮರಳುತ್ತಿದ್ದಂತೆಯೇ ಮತ್ತೆ ವಸತಿ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

2016-21ರ ಅವಧಿಯಲ್ಲಿ ವಸತಿ ದರಗಳು ಸ್ಥಿರವಾಗಿದ್ದವು. 2022ರಲ್ಲಿ ನಿರ್ಮಾಣ ಸಲಕರಣೆಗಳ ವೆಚ್ಚದಲ್ಲಿ ಏರಿಕೆಯಾದದ್ದು ವಸತಿ ದರ ಹೆಚ್ಚಳಕ್ಕೆ ಕಾರಣವಾಯಿತು. ರಷ್ಯಾ-ಉಕ್ರೇನ್ ಯುದ್ಧ, ಜಾಗತಿಕ ಪೂರೈಕೆ ಸರಪಳಿಗೆ ಅಡಚಣೆ ಇತ್ಯಾದಿ ಅಂಶಗಳು ನಿರ್ಮಾಣ ಸಲಕರಣೆಗಳ ದರ ಏರಿಕೆಗೆ ಕಾರಣವಾಯಿತು. ಇದು ವಸತಿ ದರದ ಮೇಲೂ ಪರಿಣಾಮ ಬೀರಿತು ಎಂದು ಪ್ರಾಪ್​ಟೈಗರ್ ಡಾಟ್​ ಕಾಂ, ಹೌಸಿಂಗ್ ಡಾಟ್​ ಕಾಂ ಹಾಗೂ ಮಕಾನಾ ಡಾಡ್​ ಕಾಂಗಳ ಗ್ರೂಫ್​ ಸಿಎಫ್​ಒ ವಿಕಾಸ್ ವಧ್ವಾನ್ ತಿಳಿಸಿದ್ದಾರೆ. ಒಟ್ಟಾರೆ ನಿರ್ಮಾಣ ವೆಚ್ಚ ಹೆಚ್ಚಳವು ಅಪಾರ್ಟ್​​ಮೆಂಟ್​​ಗಳ ಮೂಲ ಮಾರಾಟ ದರ (ಬೇಸಿಕ್ ಸೆಲ್ಲಿಂಗ್ ಪ್ರೈಸ್ ಅಥವಾ ಬಿಎಸ್​ಪಿ) ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟಿದೆ ವಸತಿ ದರ?

ಬೆಂಗಳೂರಿನಲ್ಲಿ ವಸತಿ ದರ 2022ರಲ್ಲಿ ಚದರ ಅಡಿಗೆ 6,000 ರೂ.ನಿಂದ 6,200 ರೂ.ಗೆ ಹೆಚ್ಚಾಗಿದ್ದು, ಶೇ 9ರಷ್ಟು ಏರಿಕೆಯಾಗಿದೆ. ಗುರುಗ್ರಾಮದಲ್ಲಿ ಅತಿಹೆಚ್ಚು, ಅಂದರೆ ಶೇ 13ರಷ್ಟು ದರ ಏರಿಕೆಯಾಗಿದೆ. ಅಲ್ಲಿ ಚದರ ಅಡಿಗೆ 7,000 ರೂ.ನಿಂದ 7,200 ರೂ.ಗೆ ದರ ಹೆಚ್ಚಳವಾಗಿದೆ. ಅಹಮದಾಬಾದ್​​ನಲ್ಲಿ ವಸತಿ ದರ ಶೇ 7ರಷ್ಟು, ಅಂದರೆ ಚದರ ಅಡಿಗೆ 3,600 ರೂ.ನಿಂದ 3,800 ರೂ.ಗೆ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ದೇಶದ ಸರಾಸರಿ ವಸತಿ ದರ ಶೇ 7ರಷ್ಟು ಹೆಚ್ಚಾಗಿದ್ದು, ಚದರ ಅಡಿಗೆ 6,700 ರೂ.ನಿಂದ 6,900 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ