SMS ಮತ್ತು ಆನ್ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು ಹೇಗೆ?
ಚುನಾವಣಾ ಕಚೇರಿಗೆ ಹೋಗುವ ಬದಲು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಫೋನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೀವು ಸುಲಭವಾಗಿ ಪರೀಕ್ಷಿಸಬಹುದು.
ನವದೆಹಲಿ: ಪ್ರತಿ ವರ್ಷ ಚುನಾವಣೆ ಸಂದರ್ಭದಲ್ಲಿ ಜನರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಓಡುತ್ತಾರೆ. ಚುನಾವಣಾ ಸಮಯದಲ್ಲಿ ಅನೇಕ ಜನರು ವೋಟರ್ ಐಡಿಗಾಗಿ (Voter ID) ಅರ್ಜಿ ಸಲ್ಲಿಸುತ್ತಾರೆ. ಆದರೆ, ಎಲ್ಲದಕ್ಕೂ ನೀವು ಚುನಾವಣಾ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಚುನಾವಣಾ ಕಚೇರಿಗೆ (Election Office) ಹೋಗುವ ಬದಲು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಫೋನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೀವು ಸುಲಭವಾಗಿ ಪರೀಕ್ಷಿಸಬಹುದು. ಆನ್ಲೈನ್ನಲ್ಲಿಯೇ ನೀವು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು. ಆಫೀಸಿಗೆ ಭೇಟಿ ನೀಡದೆ ಮತದಾರರ ಪಟ್ಟಿಯಲ್ಲಿ (Voters List) ನಿಮ್ಮ ಹೆಸರು ಸೇರಿಸಲು ನೀಡಿದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
ಹೆಲ್ಪ್ ಲೈನ್ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ. ಭಾರತೀಯ ಚುನಾವಣಾ ಆಯೋಗವು ಮತದಾರರಿಗೆ ಅಗತ್ಯವಿರುವ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಸಹಾಯ ಮಾಡಲು ಉಚಿತ ಸಹಾಯವಾಣಿ ಸಂಖ್ಯೆಯನ್ನು ಪರಿಚಯಿಸಿದೆ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1950ಗೆ ಫೋನ್ ಮಾಡಿ ಮಾಹಿತಿ ಪಡೆಯಬಹುದು. ದೇಶಾದ್ಯಂತ ಜನರು ಈ ಸಂಖ್ಯೆಗೆ ಕರೆ ಮಾಡಬಹುದು. ಜನರು ದೂರುಗಳನ್ನು ಸಲ್ಲಿಸಲು ಈ ಸಹಾಯವಾಣಿಯನ್ನು ಸಹ ಬಳಸಬಹುದು. ಜನರು ಮಾಡಿದ ಕರೆಗಳ ವೆಚ್ಚವನ್ನು ಆಯಾ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಭರಿಸಲಿದ್ದಾರೆ.
ಅಲ್ಲದೆ, ವಿಕಲಚೇತನರಿಗಾಗಿ ಚುನಾವಣಾ ಆಯೋಗವು SMS ಸೇವೆಯನ್ನು ಪರಿಚಯಿಸಿದೆ. ಸಹಾಯ ಪಡೆಯಲು ಅವರು ತಮ್ಮ ಮತದಾರರ ಗುರುತಿನ ಸಂಖ್ಯೆಯೊಂದಿಗೆ ಸ್ಟಾರ್ ಚಿಹ್ನೆ (*)ಯನ್ನು ನಮೂದಿಸಬೇಕು. ಈ ಸೇವೆಯು ನಿರ್ದಿಷ್ಟ ಸ್ಥಳದಲ್ಲಿರುವ ವಿಕಲಚೇತನ ಮತದಾರರ ಸಂಖ್ಯೆಯನ್ನು ಸಹ ದಾಖಲಿಸುತ್ತದೆ.
ಇಂಟರ್ನೆಟ್‌ನ ಪ್ರಯೋಜನವನ್ನು ಪಡೆದುಕೊಂಡು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಪ್ರದೇಶದಲ್ಲಿ ಚುನಾವಣಾ ಕಾರ್ಡ್‌ಗಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯಲು SMS ಮತ್ತು ಸಹಾಯವಾಣಿ ಸೇವೆಯನ್ನು ಬಳಸಿ.
ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ?: – ಮೊದಲು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಭೇಟಿ ನೀಡಿ https://www.nvsp.in/ – ಸರ್ಚ್ ಇನ್ ಎಲೆಕ್ಟೋರಲ್ ರೋಲ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. – ಆಗ ಹೊಸ ವೆಬ್ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ನಿಮ್ಮ ವಿವರಗಳನ್ನು ನಮೂದಿಸಬೇಕು. – ಈಗ, ಹೊಸ ವೆಬ್ ಪೇಜ್ನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು ಎರಡು ಮಾರ್ಗಗಳು ಇರುತ್ತದೆ. – ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವ ಮೊದಲ ಆಯ್ಕೆ ಇದು. ಇದರಲ್ಲಿ ನೀವು ನಿಮ್ಮ ಹೆಸರು, ತಂದೆಯ ಅಥವಾ ಗಂಡನ ಹೆಸರು, ವಯಸ್ಸು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಮೂದಿಸಬೇಕು. ಈ ಮಾಹಿತಿಯನ್ನು ನಮೂದಿಸಿದ ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ನಮೂದಿಸಬೇಕು. – ಹುಡುಕಲು ಇನ್ನೊಂದು ಆಯ್ಕೆಯು EPIC ಸಂಖ್ಯೆಯ ಮೂಲಕ ಹುಡುಕುವುದು. ಈ ಪ್ರಕ್ರಿಯೆಯಲ್ಲಿ ನೀವು ನಿಮ್ಮ EPIC ಸಂಖ್ಯೆಯನ್ನು ನಮೂದಿಸಬೇಕು. – ಈ ಎರಡೂ ಆಯ್ಕೆಗಳಿಗಾಗಿ ನೀವು ಕೊನೆಯಲ್ಲಿ ಕ್ಯಾಪ್ಚಾ ಕೋಡ್ (Captcha Code) ಅನ್ನು ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಅಧಿಕೃತಗೊಳಿಸಬೇಕು. – ಈ ಮಾಹಿತಿಯು ಪೂರ್ಣಗೊಂಡ ನಂತರ ವೆಬ್ ಪೇಜ್ ನಿಮಗೆ ಮತದಾರರ ನೋಂದಣಿ ವಿವರಗಳನ್ನು ತೋರಿಸುತ್ತದೆ.
SMS ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?: – ಮೊಬೈಲ್ ಮೆಸೇಜ್ ವಿಭಾಗದಲ್ಲಿ EPIC ಎಂದು ಟೈಪ್ ಮಾಡಿ. – ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ. – ಈ SMS ಅನ್ನು 9211728082 ಅಥವಾ 1950ಗೆ ಕಳುಹಿಸಿ. – ನಿಮ್ಮ ಪೋಲಿಂಗ್ ಸ್ಟೇಷನ್ ಸಂಖ್ಯೆ ಮತ್ತು ಹೆಸರನ್ನು ನಿಮ್ಮ ಫೋನ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. – ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ‘ದಾಖಲೆ ಕಂಡುಬಂದಿಲ್ಲ’ (no record found) ಎಂಬ ಉತ್ತರವನ್ನು ಸ್ವೀಕರಿಸುತ್ತೀರಿ.
ಮತ ಚಲಾಯಿಸಲು ಅಗತ್ಯವಿರುವ 11 ದಾಖಲೆಗಳು: ಮತದಾರರ ಫೋಟೋ ಗುರುತಿನ ಚೀಟಿ (ಇಪಿಐಸಿ) ನೀಡಿರುವ ಎಲ್ಲಾ ಕ್ಷೇತ್ರಗಳಲ್ಲಿನ ಎಲ್ಲಾ ಮತದಾರರು ಮತ ಚಲಾಯಿಸುವ ಮೊದಲು ತಮ್ಮ ಗುರುತಿಗಾಗಿ ಮತದಾರರ ಫೋಟೋ ಗುರುತಿನ ಚೀಟಿಯನ್ನು ಮತಗಟ್ಟೆಯಲ್ಲಿ ಹಾಜರುಪಡಿಸಬೇಕು ಎಂದು ಚುನಾವಣಾ ಸಮಿತಿ ಸೂಚಿಸಿದೆ. ಹನ್ನೊಂದು ದಾಖಲೆಗಳ ಪಟ್ಟಿ ಹೀಗಿದೆ.
– ಪಾಸ್ಪೋರ್ಟ್ – ಚಾಲನಾ ಪರವಾನಿಗೆ – ಕೇಂದ್ರ/ರಾಜ್ಯ ಸರ್ಕಾರ/ಪಿಎಸ್‌ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು – ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು – ಪ್ಯಾನ್ ಕಾರ್ಡ್ – NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್ – MNREGA ಜಾಬ್ ಕಾರ್ಡ್ – ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ – MPಗಳು/MLAಗಳು/MLC ಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು – ಆಧಾರ್ ಕಾರ್ಡ್
ಇದನ್ನೂ ಓದಿ: ಮತದಾರರ ಬಳಿ ಇರಲೇಬೇಕಾದ ಕೆಲವು ಆಪ್ಗಳಿವು; ಮಾಹಿತಿ ಪಡೆದುಕೊಳ್ಳಿ
Assembly Election Polling Booth ಮೊದಲ ಬಾರಿ ಮತದಾನ ಮಾಡುವವರು ಮತಗಟ್ಟೆ ವಿವರಗಳನ್ನು ಪಡೆಯುವುದು ಹೇಗೆ?
Published On - 1:50 pm, Thu, 10 February 22