ಯಾವುದೇ ಗುರುತಿನ ಚೀಟಿ, ಸ್ವಂತ ಮೊಬೈಲ್ ನಂಬರ್ ಇಲ್ಲದವರು ಕೊರೊನಾ ಲಸಿಕೆ ಪಡೆಯಲು ಹೀಗೆ ಮಾಡಿ: ಆರೋಗ್ಯ ಸಚಿವಾಲಯ ಸ್ಪಷ್ಟನೆ
Covid Vaccination: ಲಸಿಕೆ ಪಡೆಯಲು ತಾಂತ್ರಿಕ ಜ್ಞಾನವಿಲ್ಲದವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಿರಾಧಾರ ವರದಿಗಳಾಗಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಲು ಸ್ಮಾರ್ಟ್ಫೋನ್ ಇರಬೇಕು ಎನ್ನುವುದಾಗಲಿ ಅಥವಾ ವಿಳಾಸದ ದಾಖಲೆ ಸಲ್ಲಿಸಬೇಕೆಂಬುದಾಗಲಿ ಕಡ್ಡಾಯವಲ್ಲ.
ದೆಹಲಿ: ಭಾರತದಲ್ಲಿ ಎರಡನೇ ಅಲೆ ಕ್ಷೀಣಿಸುತ್ತಿದೆ. ಆದರೆ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮೂರನೇ ಅಲೆ ಅಪ್ಪಳಿಸುವುದು ನಿಶ್ಚಿತ ಎಂದು ತಜ್ಞರು ಎಚ್ಚರಿಸಿರುವ ಕಾರಣ ಆರೋಗ್ಯ ಸಚಿವಾಲಯ ದೇಶದ ಎಲ್ಲಾ ನಾಗರೀಕರಿಗೂ ಅಷ್ಟರೊಳಗೆ ಮೊದಲ ಡೋಸ್ ಕೊರೊನಾ ಲಸಿಕೆಯನ್ನಾದರೂ ನೀಡಿ ಅಪಾಯದ ದವಡೆಯಿಂದ ಪಾರಾಗಬೇಕೆಂದು ಶತಾಯುಗತಾಯ ಪ್ರಯತ್ನಿಸುತ್ತಿದೆ. ಆದ್ದರಿಂದ ಲಸಿಕೆ ವಿತರಣೆಯನ್ನು ಮತ್ತಷ್ಟು ಸುಗಮಗೊಳಿಸಲಾಗುತ್ತಿದ್ದು, ಜನರಲ್ಲಿ ಆ ಕುರಿತಾಗಿ ಎದ್ದಿರುವ ಗೊಂದಲಗಳನ್ನು ಶಮನಗೊಳಿಸಲು ಸರ್ಕಾರ ಮುಂದಾಗಿದೆ. ನಿನ್ನೆ (ಜೂನ್ 23) ಕೊರೊನಾ ಲಸಿಕೆ ನೋಂದಾವಣಿ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ನಿರ್ಗತಿಕರು ಹಾಗೂ ದಾಖಲೆಗಳಿಲ್ಲದವರು ಲಸಿಕೆ ಪಡೆಯುವುದು ಸಾಧ್ಯವಿಲ್ಲ. ತಂತ್ರಜ್ಞಾನ ಬಳಕೆ ಬಗ್ಗೆ ಅರಿವಿಲ್ಲದವರೂ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಕೆಲ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದೆ.
ಕೊರೊನಾ ಲಸಿಕೆ ಪಡೆಯಲು ಆನ್ಲೈನ್ ಮೂಲಕ ಅಥವಾ ಡಿಜಿಟಲ್ ವಿಧಾನದಲ್ಲಿ ನೋಂದಾವಣಿ ಮಾಡಿಸಿಕೊಳ್ಳಬೇಕಿದ್ದು, ಆಂಗ್ಲಭಾಷೆ ಗೊತ್ತಿಲ್ಲದೇ ಇರುವುದು, ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಬಳಕೆಯ ಅರಿವಿಲ್ಲದೇ ಇರುವುದು, ಇಂಟರ್ನೆಟ್ ಸೌಲಭ್ಯವಿಲದಿರುವುದು ಲಸಿಕೆ ಪಡೆಯಲು ಹಿನ್ನೆಡೆ ಉಂಟುಮಾಡುವ ಅಂಶಗಳಾಗಿವೆ ಎಂದು ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ‘ಲಸಿಕೆ ಪಡೆಯಲು ಆನ್ಲೈನ್ನಲ್ಲಿ ಕೊವಿನ್ ಪೋರ್ಟಲ್ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ’ ಎಂದು ತಿಳಿಸಿದೆ.
ಲಸಿಕೆ ಪಡೆಯಲು ತಾಂತ್ರಿಕ ಜ್ಞಾನವಿಲ್ಲದವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಿರಾಧಾರ ವರದಿಗಳಾಗಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಲು ಸ್ಮಾರ್ಟ್ಫೋನ್ ಇರಬೇಕು ಎನ್ನುವುದಾಗಲಿ ಅಥವಾ ವಿಳಾಸದ ದಾಖಲೆ ಸಲ್ಲಿಸಬೇಕೆಂಬುದಾಗಲಿ ಕಡ್ಡಾಯವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಯಾವುದೇ ವ್ಯಕ್ತಿ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಲೀ ಅಥವಾ ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಲೀ ಲಸಿಕೆಯಿಂದ ದೂರ ಉಳಿಯಬಾರದು ಎನ್ನುವುದನ್ನು ತಿಳಿಸಲಾಗಿದೆ.
ಇನ್ನು ಆಂಗ್ಲಭಾಷೆ ಅರ್ಥ ಮಾಡಿಕೊಳ್ಳುವುದು ಕಷ್ಟವಾದ ಕಾರಣಕ್ಕೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯ, ಕೊವಿನ್ ಪೋರ್ಟಲ್ ಭಾರತೀಯ ಭಾಷೆಗಳಲ್ಲೂ ಲಭ್ಯವಿದೆ. ಒಟ್ಟು 12 ಭಾಷೆಗಳು ಪೋರ್ಟಲ್ನಲ್ಲಿ ಲಭ್ಯವಿದ್ದು ಕನ್ನಡ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಬೆಂಗಾಳಿ, ಅಸ್ಸಾಮಿ, ಪಂಜಾಬಿ, ಒಡಿಯಾ, ಗುಜರಾತಿ, ಹಿಂದಿ, ಇಂಗ್ಲಿಷ್ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಸ್ಪಷ್ಟೀಕರಿಸಿದೆ. ಕೊರೊನಾ ಲಸಿಕೆ ಪಡೆಯಲು ಆಧಾರ್ ಚೀಟಿ, ಮತದಾರರ ಚೀಟಿ, ಫೋಟೋ ಹೊಂದಿದ ಪಡಿತರ ಚೀಟಿ, ವಿಶೇಷ ಚೇತನರ ಗುರುತಿನ ಚೀಟಿ ಸೇರಿದಂತೆ ಒಟ್ಟು ಒಂಬತ್ತು ಬಗೆಯ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು. ಒಂದುವೇಳೆ ಒಂಬತ್ತರಲ್ಲಿ ಯಾವುದೂ ಇಲ್ಲವೆಂದಾದರೂ ಅಂತಹವರಿಗೆ ಲಸಿಕೆ ನೀಡಲು ಸರ್ಕಾರ ವಿಶೇಷ ಅಭಿಯಾನವನ್ನೇ ಮಾಡುತ್ತಿದೆ. ಸ್ವಂತ ಮೊಬೈಲ್ ಫೋನ್ ಇಲ್ಲವೆನ್ನುವವರಿಗೂ ಲಸಿಕೆ ನೀಡುವ ವ್ಯವಸ್ಥೆ ಇದೆ. ದಾಖಲೆಗಳಿದ್ದೂ ಆನ್ಲೈನ್ ನೋಂದಣಿ ಮಾಡಿಸಿಕೊಳ್ಳದಿದ್ದವರು ಸಹ ಲಸಿಕೆ ಪಡೆಯಲು ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಬಹುದು ಎಂದು ಇದೇ ವೇಳೆ ಸಚಿವಾಲಯದಿಂದ ಹೇಳಿಕೆ ನೀಡಲಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್ ಗುಲೇರಿಯಾ