ಹೇಮಂತ್ ಸೊರೆನ್ರಂತೆ ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ಗೂ ಗಾಂಧಿಗಳ ದರ್ಶನ ಭಾಗ್ಯ ಸಿಗಲಿಲ್ಲ!
ಪಂಜಾಬ್ ಕಾಂಗ್ರೆಸ್ನಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಮಾಡುವುದು ತಮ್ಮ ಕೆಲಸವಾಗಿದೆ ಎಂದು ಹೇಳಿರುವ ಸಮಿತಿಯ ಸದಸ್ಯರು ಸಿದ್ಧುಗೆ ತಮ್ಮನ್ನು ಭೇಟಿಯಾಗುವಂತೆ ಹೇಳುತ್ತಿದ್ದರೂ, ತಾನು ಕೇವಲ ಗಾಂಧಿಗಳನ್ನು ಮಾತ್ರ ಭೇಟಿಯಾಗುವುದು ಎಂದು ಅವರು ಹೇಳುತ್ತಿದ್ದಾರೆ.
ನವದೆಹಲಿ: ತಮ್ಮನ್ನು ಕಾಣಲು ಬರುವ ನಾಯಕರನ್ನು ಭೇಟಿ ಮಾಡದೆ ವಾಪಸ್ಸು ಕಳಿಸುವ ಎಐಸಿಸಿ ಹೈಕಮಾಂಡ್ನ ಪರಂಪರೆ ಮುಂದುವರಿದಿರುವಂತೆ ಕಾಣುತ್ತಿದೆ. ಕಳೆದ ವಾರವಷ್ಟೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಕಾಣಲು ದೆಹಲಿಗೆ ಬಂದು ನಾಲ್ಕು ದಿನ ಕಾದರೂ ದರ್ಶನ ಭಾಗ್ಯ ಸಿಗದೆ ನಿರಾಶರಾಗಿ ರಾಂಚಿಗೆ ವಾಪಸ್ಸಾಗಿದ್ದರು. ಮೂಲಗಳ ಪ್ರಕಾರ ತಮ್ಮ ಪಕ್ಷದ ಸದಸ್ಯರು ಮತ್ತು ಶಾಸಕರಿಂದಲೇ ತೊಂದರೆಗಳನ್ನು ಎದುರಿಸುತ್ತಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ 2 ದಿನ ದೆಹಲಿಯಲ್ಲಿ ಕಾದರೂ ಗಾಂಧಿಗಳು ಭೇಟಿಯಾಗುವ ಅವಕಾಶ ನೀಡದ ಕಾರಣ ವಾಪಸ್ಸು ಹೋಗಿಬಿಟ್ಟಿದ್ದಾರೆ. ಆದರೆ, ಪಕ್ಷದ ಮೂಲಗಳು ಸಿಂಗ್ ದೆಹಲಿಯಲ್ಲೇ ಉಳಿದಿರುವರೆಂದು ಹೇಳಿದೆ. ಏತನ್ಮಧ್ಯೆ, ಪಂಜಾಬಿನಲ್ಲಿ ವಿಧಾನ ಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ನಡೆಯುತ್ತಿರುವ ತಿಕ್ಕಾಟ, ಒಳಜಗಳ ಮತ್ತು ಬಂಡಾಯಗಳನ್ನು ಶಮನಗೊಳಿಸಲು, ಸೋನಿಯಾ ಗಾಂಧಿಯವರು ರೂಪಿಸಿರುವ ತ್ರಿಸದಸ್ಯರ ಸಮಿತಿ ತನ್ನ ಕೆಲಸವನ್ನು ಜಾರಿಯಲ್ಲಿಟ್ಟಿದೆ.
ರಾಜ್ಯದ ಒಂದಷ್ಟು ನಾಯಕರು ಅಮರಿಂದರ್ ಸಿಂಗ್ ಅವರು ನಾಯಕತ್ವವನ್ನು ವಿರೋಧಿಸುತ್ತಿದ್ದಾರೆ. ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಷ್ಕ್ರಿಯತೆ, ಸಂಪುಟದಲ್ಲಿ ದಲಿತರಿಗೆ ಕಡಿಮೆ ಸ್ಥಾನಗಳನ್ನು ನೀಡಿರುವುದು ಮತ್ತು ಕೇವಲ ತಮ್ಮ ಆಪ್ತರಿಂದ ಸುತ್ತುವರಿಯಲ್ಪಟ್ಟು ಬೇರೆಯವರಿಎಗ ಕೈಗೆ ಸಿಗದಂತಾಗಿರುವ ಮುಖ್ಯಮಂತ್ರಿ ಸಿಂಗ್ ಮೊದಲಾದ ಸಂಗತಿಗಳ ಹಿನ್ನೆಲೆಯಲ್ಲಿ, ಪಂಜಾಬಿನ ಕಾಂಗ್ರೆಸ್ ಒಡೆದ ಮನೆಯಾಗಿದೆ.
ಮುಂದಿನ ವರ್ಷವೇ ರಾಜ್ಯದಲ್ಲಿ ಚುನಾವಣೆಗಳಿ ನಡೆಯಲಿರುವುದರಿದ ಎಲ್ಲರೂ ಒಗ್ಗಟ್ಟಿನಿಂದಿರಬೇಕೆಂಬ ಮಂತ್ರವನ್ನು ಹೈಕಮಾಂಡ್ ಪಠಿಸುತ್ತಿದೆ. ಮುಖ್ಯಮಂತ್ರಿ ಸಿಂಗ್ ಅವರೊಂದಿಗೆ ಸೌಹಾರ್ದಯುತ ಸಂಬಂಧವಿಟ್ಟುಕೊಂಡಿರದ ಪಿಸಿಸಿ ಅಧ್ಯಕ್ಷ ಸುನಿಲ್ ಕುಮಾರ ಜಾಖರ್ ಅವರನ್ನು ಬದಲಿಸುವುದು ಪಕ್ಷದ ಆದ್ಯತೆಗಳಲ್ಲಿ ಒಂದಾಗಿದೆ. ಮೂಲಗಳ ಪ್ರಕಾರ ಒಬ್ಬ ದಲಿತ ನಾಯಕ ಇಲ್ಲವೇ ನವಜೋತ್ಸಿಂಗ್ ಸಿದ್ಧು ಅವರನ್ನು ಈ ಸ್ಥಾನಕ್ಕೆ ತರುವ ನಿರೀಕ್ಷೆಯಿದೆ.
ಮರಳು ಮತ್ತು ಸಾರಿಗೆ ಮಾಫಿಯಾ ಮೇಲೆ ಕ್ರಮ ತೆಗೆದುಕೊಳ್ಳುವುದು, ವಿದ್ಯುತ್ ಖರೀದಿಗೆ ಸಂಬಂಧಿಸಿದ ಒಪ್ಪಂದಗಳನ್ನು ಪುನರ್ಪರಿಶೀಲಿಸುವುದು, ವಿದ್ಯುತ್ ಬಿಲ್ಗಳನ್ನುಕಡಿಮೆ ಮಾಡುವುದು, ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಳಿಸಿದ ವಿಚಾರ ಮತ್ತು ದಲಿತರಿಗೆ ಸೂಕ್ತ ಸ್ಥಾನಮಾನ ಮೊದಲಾದವುಗಳನ್ನು ಒಳಗೊಂಡಂತೆ ಹಲವಾರು ವಿಷಯಗಳ ಕುರಿತು ಕ್ರಮ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರು ಸಿಂಗ್ ಅವರಿಗೆ ತಿಳಿಸಿದ್ದಾರೆ.
ಇದನ್ನು ಇತ್ಯರ್ಥಗೊಳಿಸದ ನಂತರ ನವಜೋತ್ ಸಿದ್ಧು ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೈಕಮಾಂಡ್ ಭಾವಿಸಿದೆ.
ಈಗಿನ ಸಂಕಷ್ಟದ ಸ್ಥಿತಿಯಲ್ಲಿ ಹೈಕಮಾಂಡ್ನ ಬೆಂಬಲ ನಿರೀಕ್ಷಿಸುತ್ತಿರುವ ಅಮರಿಂದರ್ ಅವರಿಗೆ ಗಾಂಧಿಗಳು ಕಡೆಗಣಿಸುತ್ತಿರುವುದು ಸರಿಯೇ ಎಂದು ಕೇಳಿದ್ದಕ್ಕೆ ಪಕ್ಷದ ಮೂಲಗಳು, ಸಿಂಗ್ ಅವರು ಸಮಿತಿಯನ್ನು ಭೇಟಿ ಮಾಡಿದ್ದಾರೆ, ಅವರೊಂದಿಗೆ ಊಟ ಮಾಡಿದ್ದಾರೆ ಮತ್ತು ಪಕ್ಷದ ಹಿರಿಯ ನಾಯಕಿ ಅಂಬಿಕಾ ಸೋನಿಯೊಂದಿಗೆ ಮಾತುಕತೆ ನಡೆಸಿದ್ದಾರೆ, ಎಂದು ತಿಳಿಸಿದವು.
ಸಿಂಗ್ ಅವರೊಂದಿಗೆ ಅಕ್ಷರಶಃ ಕಾದಾಟಕ್ಕಿಳಿದಿರುವ ನವಜೋತ್ ಸಿದ್ಧು ಅವರೊಂದಿಗೆ ಹೈಕಮಾಂಡ್ ಸಭೆ ನಡೆಸಲಿದೆಯೇ ಎಂದು ಕೇಳಿದ ಪ್ರಶ್ನೆಗೆ, ಪಂಜಾಬ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಹರೀಷ್ ರಾವತ್ ಅವರು, ಹೌದು ಕರೆಸಲಾಗುತ್ತದೆ ಎಂದು ಹೇಳಿದರು.
ಪಂಜಾಬ್ ಕಾಂಗ್ರೆಸ್ನಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಮಾಡುವುದು ತಮ್ಮ ಕೆಲಸವಾಗಿದೆ ಎಂದು ಹೇಳಿರುವ ಸಮಿತಿಯ ಸದಸ್ಯರು ಸಿದ್ಧುಗೆ ತಮ್ಮನ್ನು ಭೇಟಿಯಾಗುವಂತೆ ಹೇಳುತ್ತಿದ್ದರೂ, ತಾನು ಕೇವಲ ಗಾಂಧಿಗಳನ್ನು ಮಾತ್ರ ಭೇಟಿಯಾಗುವುದು ಎಂದು ಅವರು ಹೇಳುತ್ತಿದ್ದಾರೆ. ತಮ್ಮ ಕೆಲಸ ಹೆಚ್ಚು ಕಡಿಮೆ ಮುಗಿಯುವ ಹಂತಕ್ಕೆ ಬಂದಿದೆ ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.
2015 ರ ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕಾನೂನಾತ್ಮಕ ಹಿನ್ನಡೆಯಾದ ನಂತರ ಸಿದ್ಧು ಅವರು ಮುಖ್ಯಮಂತ್ರಿಗಳ ವಿರುದ್ಧ ಹೊಸ ವಾಗ್ದಾಳಿಯನ್ನು ಆರಂಭಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಶಾಸಕರ ಮಕ್ಕಳಿಗೆ ಸರ್ಕಾರೀ ಹುದ್ದೆಗಳನ್ನು ನೀಡಿರುವ ಮುಖ್ಯಮಂತ್ರಿಗಳ ಕ್ರಮವನ್ನು ಸಹ ಸಿದ್ಧು ಪ್ರಶ್ನಿಸಿದ್ದಾರೆ.
ಅಮರಿಂದರ್ ಸಿಂಗ್ ಅವರು ಸೋಮವಾರದಂದು ಎರಡನೇ ಬಾರಿಗೆ ತ್ರಿ ಸದಸ್ಯರ ಸಮಿತಿಯನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು. ಈ ಸಭೆಯು ಮಂಗಳವಾರದಂದು ನಡೆಯಿತು. ಸಮಿತಿಯ ಸದಸ್ಯರಾಗಿರುವ ಮಲ್ಲಿಕಾರ್ಜುನ ಖರ್ಗೆ, ಜೆಪಿ ಆಗರ್ವಾಲ್ ಮತ್ತು ರಾವತ್ ಅವರು ಪಂಜಾಬ್ನಲ್ಲಿ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ಸಿಂಗ್ರಿಂದ ಸ್ಪಷ್ಟೀಕರಣ ಕೇಳಿದರು.
ಇದೇ ತಿಂಗಳ ಆರಂಭದಲ್ಲೂ ಸಮಿತಿಯನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿಗಳು ಸಿದ್ಧು ಅವರ ತಮ್ಮ ವಿರುದ್ಧ ಮಾಡಿದ ಆಪಾದನಗೆಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು.
ಇದನ್ನೂ ಓದಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ಗೆ 4 ದಿನ ಕಾದರೂ ಸೋನಿಯಾ ಮತ್ತು ರಾಹುಲ್ರ ದರ್ಶನ ಭಾಗ್ಯ ಸಿಗಲಿಲ್ಲ!