ನರೇಂದ್ರ ಮೋದಿ ಪ್ರಕಟಿಸಿದ್ದ ಉಚಿತ ಪಡಿತರ ವಿತರಣೆ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮತ್ತೆ 5 ತಿಂಗಳ ಅವಧಿಗೆ ಅಂದರೆ ಜುಲೈನಿಂದ ನವೆಂಬರ್ವರೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಕೊಂಡಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದ ಉಚಿತ ಪಡಿತರ ವಿತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮತ್ತೆ 5 ತಿಂಗಳ ಅವಧಿಗೆ ಅಂದರೆ ಜುಲೈನಿಂದ ನವೆಂಬರ್ವರೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಕೊಂಡಿದೆ.
ಈ ಯೋಜನೆಯಡಿ ಅರ್ಹ ಕುಟುಂಬಗಳ 81.35 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ಸಿಗಲಿದೆ. ಮೊದಲಿಗೆ ಎಪ್ರಿಲ್, ಮೇ ಮತ್ತು ಜೂನ್ನ ಮೂರು ತಿಂಗಳ ಅವಧಿಗೆ ಎಂದು ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇದೀಗ ಮತ್ತೆ 5 ತಿಂಗಳ ಅವಧಿಗೆ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಕೆಲ ದಿನಗಳ ಹಿಂದೆ ಪ್ರಧಾನಿ ಪ್ರಕಟಿಸಿದ್ದರು. ಈ ಪ್ರಸ್ತಾವಕ್ಕೆ ಈಗ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರವು ₹ 67,266.44 ಕೋಟಿ ವೆಚ್ಚ ಮಾಡಲಿದೆ. ಈ ಯೋಜನೆಯಡಿ ರಾಜ್ಯಗಳಿಗೆ 204 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಿಗಲಿದೆ ಎಂದು ಕೇಂದ್ರ ಆಹಾರ ಇಲಾಖೆ ವಿವರಿಸಿದೆ.
ಕೇಂದ್ರ ಸಚಿವ ಸಂಪುಟವು ಮತ್ತೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅದರಂತೆ ಸೆಂಟ್ರಲ್ ರೈಲ್ಸೈಡ್ ವೇರ್ಹೌಸ್ ಕಂಪನಿಯನ್ನು ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೋರೇಷನ್ನಲ್ಲಿ ವಿಲೀನಗೊಳಿಸಲು ಕೇಂದ್ರ ಸಂಪುಟ ತೀರ್ಮಾನಿಸಿದೆ. ಮಿನಿಮಮ್ ಗವರ್ನಮೆಂಟ್ – ಮ್ಯಾಗ್ಸಿಮಮ್ ಗವರ್ನನ್ಸ್ ಘೋಷಣೆಯ ಆಶಯವನ್ನು ಜಾರಿ ಮಾಡುವ ಉದ್ದೇಶದಿಂದ ವಿಲೀನದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ಹೇಳಿದೆ.
ವಿಲೀನದ ನಂತರ ನಿರ್ವಹಣೆ ವೆಚ್ಚ ₹ 5 ಕೋಟಿಗೂ ಅಧಿಕ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸದಾಗಿ ಇನ್ನೂ 50 ರೈಲ್ಸೈಡ್ ವೇರ್ಹೌಸ್ನಿರ್ಮಾಣಕ್ಕೆ ಈ ಕ್ರಮದಿಂದ ಉಪಯೋಗವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
(Central Cabinet Okays Narendra Modi Proposal of Food for Poor to extend another three months)
ಇದನ್ನೂ ಓದಿ: ಬೆಂಗಳೂರಿನ ದೇವಾಲಯದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಸುಹರ್ತ್ ಫೌಂಡೇಶನ್ನಿಂದ ಉಚಿತ ಪಡಿತರ ಕಿಟ್ ವಿತರಣೆ
ಇದನ್ನೂ ಓದಿ: ಆಹಾರ ಸಚಿವರ ತವರಿನ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಆರೋಪ; ಬಡವರ ಹೊಟ್ಟೆಗೆ ಏನು ಗತಿ ಎಂದು ಜನರ ಆಕ್ರೋಶ