ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಕೊಟ್ಟು ಮುಗಿಯಲು ಎಷ್ಟು ದಿನ ಬೇಕು?-ಇಲ್ಲಿದೆ ನೋಡಿ ಒಂದು ಲೆಕ್ಕಾಚಾರ
Covid 19 vaccine: ಜೂ.20ರ ಡಾಟಾ ಪ್ರಕಾರ ಭಾರತದಲ್ಲಿ 22.87 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಆಗಿದೆ. 5.12 ಕೋಟಿ ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗದೆ. ಅಂದರೆ ಒಟ್ಟಾರೆ 28 ಕೋಟಿ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.
ಕೊರೊನಾ ವಿರುದ್ಧ ಹೋರಾಟದಲ್ಲಿ ಕೊವಿಡ್ 19 ಲಸಿಕೆಯೇ ಪ್ರಬಲ ಅಸ್ತ್ರ ಎಂಬ ನಂಬಿಕೆಯೊಂದಿಗೆ ಭಾರತ ಮುಂದಡಿ ಇಡುತ್ತಿದ್ದು, ಸಮರೋಪಾದಿಯಲ್ಲಿ ಲಸಿಕೆ ಅಭಿಯಾನ ನಡೆಸುತ್ತಿದೆ. ನಿನ್ನೆ ಒಂದೇ ದಿನ 85 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಿದ್ದು ದಾಖಲೆ. ಏಪ್ರಿಲ್ 5ರಂದು ಒಂದೇ ದಿನ 43 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಅದಾದ 2 ತಿಂಗಳಲ್ಲಿ ಒಂದೇ ದಿನ 85 ಲಕ್ಷ ಅಂದರೆ ಎರಡು ಪಟ್ಟು ಹೆಚ್ಚು ಜನರಿಗೆ ಲಸಿಕೆ ನೀಡಿದ್ದು ಒಂದು ಮೈಲಿಗಲ್ಲು. ಆಗಸ್ಟ್ ವೇಳೆಗೆ ದಿನವೊಂದಕ್ಕೆ 1 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಮಹತ್ವಕಾಂಕ್ಷಿ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.
ಭಾರತದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 94.02 ಕೋಟಿ ಮಂದಿ 18 ವರ್ಷ ಮೇಲ್ಪಟ್ಟವರಿದ್ದಾರೆ. ಇವರಿಗೆಲ್ಲ ಕೊರೊನಾ ಲಸಿಕೆ ಕೊಟ್ಟು ಮುಗಿಯುವುದು ಯಾವಾಗ? ದಿನಕ್ಕೆ ಕೋಟಿ ಜನರಿಗೆ ಲಸಿಕೆ ಕೊಡದೆ ಇದ್ದರೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ತಕ್ಷಣಕ್ಕೆ ಮುಗಿಯೋದಿಲ್ಲ.
ಜೂ.20ರ ಡಾಟಾ ಪ್ರಕಾರ ಭಾರತದಲ್ಲಿ 22.87 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಆಗಿದೆ. 5.12 ಕೋಟಿ ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗದೆ. ಅಂದರೆ ಒಟ್ಟಾರೆ 28 ಕೋಟಿ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ಇದರರ್ಥ ಇನ್ನೂ 66.02 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವುದು ಬಾಕಿ ಇದೆ. ಅಂದರೆ ಇವಿಷ್ಟೂ ಜನರಿಗೆ ಪೂರ್ತಿಯಾಗಿ ಅಂದರೆ ಎರಡೂ ಡೋಸ್ಗಳಷ್ಟು ಲಸಿಕೆ ನೀಡಲು 132.04 ಕೋಟಿ ಡೋಸ್ ಲಸಿಕೆ ಬೇಕು.
ಇನ್ನು ದಿನವೊಂದಕ್ಕೆ 75 ಲಕ್ಷ ಡೋಸ್ ಲಸಿಕೆ ನೀಡುತ್ತ ಹೋದರೆ, 66.02 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ನೀಡಲು 176 ದಿನಗಳು ಬೇಕು. ಈಗಾಗಲೇ ಒಂದು ಡೋಸ್ ಪಡೆದ 22.87 ಜನರಿಗೆ ಮತ್ತೊಂದು ಡೋಸ್ ನೀಡಲು 31 ದಿನಗಳು ಬೇಕಾಗುತ್ತದೆ. ಎಲ್ಲ ಸೇರಿ ಭಾರತದ ಒಟ್ಟಾರೆ ಜನಸಂಖ್ಯೆಗೆ ಲಸಿಕೆ ಕೊಟ್ಟು ಪೂರ್ಣಗೊಳಿಸಲು 207 ದಿನಗಳು ಅಗತ್ಯವಿದೆ.
3 ಲಸಿಕೆಗಳ ಬಳಕೆಗೆ ಅನುಮತಿ ಭಾರತದಲ್ಲಿ ಸದ್ಯ ಕೊವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಅನುಮೋದನೆ ಸಿಕ್ಕಿದ್ದು, ಇವು ಮೂರು ಲಸಿಕೆಗಳನ್ನು. ನಿಗದಿತ ಅಂತರದಲ್ಲಿ ಎರಡು ಡೋಸ್ ಪಡೆಯಲೇಬೇಕು. ಕೊವಿಶೀಲ್ಡ್ ಲಸಿಕೆ ಒಂದು ಡೋಸ್ನಿಂದ ಇನ್ನೊಂದು ಡೋಸ್ಗೆ 84ದಿನಗಳ ಅಂತರವಿದ್ದರೆ, ಕೊವ್ಯಾಕ್ಸಿನ್ 28 ದಿನಗಳ ಅಂತರವಿದೆ. ಹಾಗೇ, ಸ್ಪುಟ್ನಿಕ್ ವಿ ಲಸಿಕೆಯನ್ನು ಒಂದು ಡೋಸ್ ಪಡೆದು 21 ದಿನಗಳಲ್ಲಿ ಇನ್ನೊಂದು ಡೋಸ್ ಪಡೆಯಬೇಕಾಗಿದೆ. ಇನ್ನು ಈ ಮೂರು ಲಸಿಕೆಗಳಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಕೊವಿಶೀಲ್ಡ್.
ಹಲವು ರಾಜ್ಯ ಸರ್ಕಾರಗಳ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ನಿನ್ನೆಯಿಂದ ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿಯೇ ನೀಡುತ್ತಿದೆ. ಈ ತಿಂಗಳಲ್ಲಿ ಭಾರತಕ್ಕೆ 12 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ. ಹಾಗೇ ಜುಲೈ ಅಂತ್ಯದ ವೇಳೆಗೆ ಅದನ್ನು 20-25 ಕೋಟಿ ಡೋಸ್ಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಕೊವಿಡ್ 19 ಲಸಿಕೆ ಪಡೆಯಲು ಈಗ ನೋಂದಣಿ ಕಡ್ಡಾಯವಲ್ಲ ಎಂದು ಹೇಳಿದೆ. ಇನ್ನು ಕೊವಿನ್ ಆ್ಯಪ್ನ್ನು ಹಿಂದಿ ಮತ್ತು ಹಲವು ಪ್ರಾದೇಶಿಕ ಭಾಷೆಯಲ್ಲೂ ಅಭಿವೃದ್ಧಿಗೊಳಿಸಲಾಗಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಇಬ್ಬರು ರೈತರ ನಡುವಿನ ಜಗಳದಲ್ಲಿ ದ್ರಾಕ್ಷಿ ಗಿಡ ನಾಶ; ಕಳೆನಾಶಕ ಸಿಂಪಡಿಸಿ ಬೆಳೆಗೆ ಹಾನಿ ಮಾಡಿರುವ ಆರೋಪ