ಪಾಕಿಸ್ತಾನದಲ್ಲಿ ಉಗ್ರರ ಸಂಘಟನೆ ಇರುವುದು ನಿಜ; ಮೊದಲ ಬಾರಿ ಒಪ್ಪಿಕೊಂಡ ಮಾಜಿ ಪಾಕ್ ಸಚಿವ ಬಿಲಾವಲ್ ಭುಟ್ಟೋ
ಭಾರತದಲ್ಲಿ ನಡೆದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಈ ಉಗ್ರರ ದಾಳಿಯಲ್ಲಿ ಸ್ಥಳೀಯರೊಬ್ಬರು ಸೇರಿದಂತೆ 26 ಜನರು ಸಾವನ್ನಪ್ಪಿದ್ದರು. ಇತಿಹಾಸದಲ್ಲಿ ಅತ್ಯಂತ ಭೀಕರವಾದ ಈ ಭಯೋತ್ಪಾದಕ ದಾಳಿಯು ಮುಗ್ಧ ಪ್ರವಾಸಿಗರನ್ನು ಗುರಿಯಾಗಿಸಿತ್ತು. ಅವರ ಧರ್ಮದ ಬಗ್ಗೆ ವಿಚಾರಿಸಿ, ನಂತರ ಗುಂಡು ಹಾರಿಸಲಾಗಿತ್ತು. ಈ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ಬಿಲಾವಲ್ ಭುಟ್ಟೋ ಮಾತನಾಡಿದ್ದಾರೆ.

ನವದೆಹಲಿ, ಜುಲೈ 10: ಭಾರತೀಯ ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto) ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯು (Pahalgam Terror Attack) ಭಯೋತ್ಪಾದಕ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ. ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಯಕರೊಬ್ಬರು ತಮ್ಮ ದೇಶದಲ್ಲಿ ಉಗ್ರರ ಅಸ್ತಿತ್ವವಿರುವುದು ಸತ್ಯ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಯು ನಿಜಕ್ಕೂ ಭಯೋತ್ಪಾದಕ ದಾಳಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಭಾರತೀಯ ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಬಿಲಾವಲ್ ಭುಟ್ಟೋ, ದಾಳಿಯಲ್ಲಿ ಮೃತಪಟ್ಟವರು ಮತ್ತು ಅವರ ಕುಟುಂಬಗಳ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ)ನಂತಹ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಐತಿಹಾಸಿಕ ಪಾಲುದಾರಿಕೆಗೆ ಪಾಕಿಸ್ತಾನ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ
ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರ ಅಥವಾ ಸೈನ್ಯದ ಪಾತ್ರವನ್ನು ಬಿಲಾವಲ್ ಭುಟ್ಟೋ ನಿರಾಕರಿಸಿದ್ದಾರೆ. ಅಂತಹ ಆರೋಪಗಳನ್ನು “ಪ್ರಚಾರ” ಎಂದು ಕರೆದಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ, ಪಾಕಿಸ್ತಾನವೂ ಭಯೋತ್ಪಾದನೆಯಿಂದ ತೀವ್ರವಾಗಿ ಬಳಲುತ್ತಿದೆ ಎಂದು ಅವರು ಒತ್ತಿ ಹೇಳಿದ್ದಾರೆ. “ನಾವು ಭಯೋತ್ಪಾದನೆಯಿಂದ 92,000ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದೇವೆ. ಇದರಲ್ಲಿ ಕಳೆದ ವರ್ಷ 200ಕ್ಕೂ ಹೆಚ್ಚು ದಾಳಿಗಳಲ್ಲಿ 1,200 ನಾಗರಿಕರು ಮೃತಪಟ್ಟಿದ್ದಾರೆ. ಇದು ಹೀಗೆಯೇ ಮುಂದುವರಿದರೆ, 2025 ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ವರ್ಷವಾಗಬಹುದು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಪಾಕ್ನಲ್ಲಿ ಇಲ್ಲ, ಅಫ್ಘಾನಿಸ್ತಾನದಲ್ಲಿರಬಹುದು: ಬಿಲಾವಲ್ ಭುಟ್ಟೋ
ಪಹಲ್ಗಾಮ್ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ. ಇದರಲ್ಲಿ ಪಾಕಿಸ್ತಾನದ ಪಾತ್ರದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪಾಕಿಸ್ತಾನವು ನಿಷ್ಪಕ್ಷಪಾತ ಅಂತಾರಾಷ್ಟ್ರೀಯ ತನಿಖೆಗೆ ಸೇರಲು ಮುಂದಾಗಿದೆ, ಆದರೆ ಭಾರತ ಈ ಪ್ರಸ್ತಾಪವನ್ನು ತಿರಸ್ಕರಿಸಿತು. “ನಮ್ಮ ಕೈಗಳು ಶುದ್ಧವಾಗಿವೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




