Business Loan: ಅನ್ಸೆಕ್ಯೂರ್ಡ್ ಉದ್ಯಮ ಸಾಲ ಪಡೆಯುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳಿವು
ಅನ್ಸೆಕ್ಯೂರ್ಡ್ ಉದ್ಯಮ ಸಾಲವನ್ನು ಪಡೆಯುವಾಗ ಯಾವುದೆಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಹೊಸ ಉದ್ಯಮವನ್ನು ಆರಂಭಿಸಲು ಮತ್ತು ಈಗಾಗಲೇ ಆರಂಭಿಸಿರುವ ಉದ್ಯಮವು ಬೆಳೆಯಲು ಧನಸಹಾಯ ಅತ್ಯಗತ್ಯ. ಈ ಹಣವನ್ನು ಪ್ರವರ್ತಕರು ತಮ್ಮ ಸ್ವಂತ ಉಳಿತಾಯವನ್ನು ಬಳಸಿ ಅಥವಾ ಹಣಕಾಸು ಸಂಸ್ಥೆಯಿಂದ ಸಾಲವನ್ನು ತೆಗೆದುಕೊಳ್ಳುವ ಮೂಲಕ ವ್ಯವಸ್ಥೆ ಮಾಡಬಹುದು. ಈ ಸಾಲಗಳನ್ನು ಉದ್ಯಮ ಸಾಲಗಳು ಎಂದು ಕರೆಯಲಾಗುತ್ತದೆ. ವ್ಯಾಪಾರ ಸಾಲವನ್ನು ಸುರಕ್ಷಿತವಾಗಿ ಅಥವಾ ಅಸುರಕ್ಷಿತ (Secured and Unsecured) ವಿಧಾನದಲ್ಲಿ ಮಾಡಬಹುದು. ಸಾಲ ನೀಡುವ ಸಂಸ್ಥೆಯ ಬಳಿ ಯಾವುದೇ ಅಡಮಾನವನ್ನು ಮಾಡದೆ ಈ ಸಾಲವನ್ನು ಪಡೆದರೆ ಅದನ್ನು ಅಸುರಕ್ಷಿತ ವ್ಯಾಪಾರ ಸಾಲ (Unsecured business loan) ಎಂದು ಕರೆಯಲಾಗುತ್ತದೆ. ಔಪಚಾರಿಕವಾಗಿ ಸಾಲ ನೀಡುವ ಕ್ಷೇತ್ರದಲ್ಲಿ ಪಿಎಸ್‌ಯು ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳಿಂದ ಹಿಡಿದು ಹೊಸ ಕಾಲದ ಫಿನ್‌ಟೆಕ್ ಕಂಪೆನಿಗಳವರೆಗಿನ ವ್ಯಾಪಾರ ಸಾಲವನ್ನು ಪಡೆಯಲು ಉದ್ಯಮಿಗಳಿಗೆ ಬಹು ಆಯ್ಕೆಗಳು ಲಭ್ಯ ಇವೆ. ಬಹು ಹಣಕಾಸು ಆಯ್ಕೆಗಳು ಲಭ್ಯ ಇರುವುದರಿಂದ ಸರಿಯಾದ ಸಾಲ ನೀಡುವ ಸಂಸ್ಥೆಯನ್ನು ಹೇಗೆ ಆರಿಸಬೇಕು ಎಂದು ತಿಳಿದಿರಬೇಕು. ವ್ಯಾಪಾರ ಸಾಲವನ್ನು ಪಡೆಯಲು ಸಂಸ್ಥೆಗಳನ್ನು ಹೋಲಿಕೆ ಮಾಡುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ಸಾಲದ ಅವಧಿ, ಬಡ್ಡಿ ದರದ ಹೋಲಿಕೆ ಉದ್ಯಮ ಸಾಲಗಳನ್ನು ಪಡೆಯಲು ಯೋಜನೆ ಮಾಡುವವರು ಸಾಲ ಪಡೆಯುವ ಸಂಸ್ಥೆಯನ್ನು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಅದು ಅವರಿಗೆ ಅಗತ್ಯವಿರುವ ಸಾಲದ ಮೊತ್ತವನ್ನು ಸಾಧ್ಯವಾದಷ್ಟು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ. ಅಲ್ಲದೆ, ಸಾಲದ ಅವಧಿಯು ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯಕ್ಕೆ ಸರಿಹೊಂದುವಂತೆ ಇರಬೇಕು. ಎರಡನೆಯದಾಗಿ, ಓವರ್‌ಡ್ರಾಫ್ಟ್ ಅಥವಾ ನಗದು ಕ್ರೆಡಿಟ್ ಸೌಲಭ್ಯಗಳಂತಹ ವ್ಯಾಪಾರ ಸಾಲದ ಪ್ರಕಾರವು ಆಯಾ ವ್ಯಕ್ತಿ ಅಥವಾ ಉದ್ಯಮವು ಮಾಡಲು ಯೋಜನೆ ರೂಪಿಸುತ್ತಿರುವ ವ್ಯವಹಾರದ ನಗದು ಹರಿವಿಗೆ ಹೊಂದಿಕೆ ಆಗಬೇಕು.
ಉದ್ಯಮ ಸಾಲವನ್ನು ಮಂಜೂರು ಮಾಡುವಾಗ ಬ್ಯಾಂಕ್ನಿಂದ ವ್ಯವಹಾರದ ಸ್ವರೂಪ, ಅರ್ಜಿದಾರರ ಕ್ರೆಡಿಟ್ ಸ್ಕೋರ್, ಉದ್ಯಮ ವಹಿವಾಟು, ಬ್ಯಾಂಕಿಂಗ್ ವಹಿವಾಟು, ಅಸ್ತಿತ್ವದಲ್ಲಿರುವ ಸಾಲಗಳಂತಹ ಅಂಶಗಳನ್ನು ಪರಿಗಣಿಸುತ್ತಾರೆ. ನೀವು ಉದ್ಯಮದ ಯೋಜನೆಯನ್ನು (Business plan) ಒದಗಿಸಿದರೆ ಆಕರ್ಷಕ ಆದಾಯದ ಅಂದಾಜಿನೊಂದಿಗೆ ವ್ಯಾಪಾರ ಸಾಲವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಸಾಲ ನೀಡುವ ಸಂಸ್ಥೆಯ ವರ್ಚಸ್ಸನ್ನು ಪರಿಶೀಲಿಸಿ ಬ್ಯಾಂಕ್ ಅಥವಾ ಎನ್ಬಿಎಫ್ಸಿ ಆಗಿರಲಿ ಸಾಲ ನೀಡುವ ಸಂಸ್ಥೆಯೊಂದಿಗೆ ಸಾಲದ ಒಪ್ಪಂದಕ್ಕೆ ಸಹಿ ಮಾಡುವ ಮೊದಲು, ಅದರ ಸೇವೆಗಳು ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸಾಲದಾತರ ಖ್ಯಾತಿಯನ್ನು ನೀವು ಪರಿಶೀಲಿಸಬೇಕು. ಆನ್‌ಲೈನ್ ಹುಡುಕಾಟ ನಡೆಸುವ ಮೂಲಕ ಮತ್ತು ಅಸ್ತಿತ್ವದಲ್ಲಿ ಇರುವ ಗ್ರಾಹಕರ ಪ್ರತಿಕ್ರಿಯೆಗಳನ್ನು ಓದುವ ಮೂಲಕ ಇದನ್ನು ಮಾಡಬಹುದು. ಈ ವಿಮರ್ಶೆಗಳು ಸತ್ಯಕ್ಕೆ ನಿಖರವಾದ ನಿರೂಪಣೆ ಆಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ಆಯ್ಕೆಗಳನ್ನು ಮೌಲ್ಯಮಾಪನ ಮಾಡಲು ಅವು ಖಂಡಿತವಾಗಿಯೂ ಸಹಾಯ ಮಾಡುತ್ತವೆ.
ಅರ್ಜಿ ಪ್ರಕ್ರಿಯೆ ಮತ್ತು ಸಾಲ ಮಂಜೂರು ಅವಧಿ ಉದ್ಯಮ ಸಾಲದ ಅರ್ಜಿಯನ್ನು ಪ್ರಕ್ರಿಯೆ ಮಾಡಲು ಸಾಲ ನೀಡುವ ಹೆಚ್ಚಿನ ಸಂಸ್ಥೆಗಳಿಗೆ ಒಂದೇ ರೀತಿಯ ದಾಖಲೆಗಳ ಅಗತ್ಯವಿದ್ದರೂ ಸಾಲದ ಅರ್ಜಿ ಪ್ರಕ್ರಿಯೆಯ ಡಿಜಿಟಲೈಸೇಷನ್ ಕಾರಣದಿಂದಾಗಿ ವೇಗದ ವಿಲೇವಾರಿ ಸಮಯದೊಂದಿಗೆ ಸುಲಭವಾದ ಪ್ರಕ್ರಿಯೆಯನ್ನು ಹೊಂದಿರುವ ಸಂಸ್ಥೆಗಳೂ ಇವೆ. ಆದ್ದರಿಂದ ಸಾಲ ನೀಡುವ ಸಂಸ್ಥೆಯನ್ನು ಆಯ್ಕೆ ಮಾಡುವ ಮೊದಲು ಸಾಲದ ಅರ್ಜಿ ಪ್ರಕ್ರಿಯೆಯ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಬೇಕು. ಈ ರೀತಿ ಮಾಡುವುದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು.
ವಾಣಿಜ್ಯ ಶುಲ್ಕಗಳು ಬಡ್ಡಿ ದರದ ಹೊರತಾಗಿ ಹಣಕಾಸು ಸಂಸ್ಥೆಗಳಿಂದ ವಿಧಿಸುವ ಪ್ರೊಸೆಸಿಂಗ್ ಶುಲ್ಕ, ನೀವು ಒಂದು ಇಎಂಐ ತಪ್ಪಿಸಿದರೆ ವಿಧಿಸುವ ದಂಡ ಮತ್ತು ಪ್ರೀ ಕ್ಲೋಷರ್ ಶುಲ್ಕಗಳು ಇತರ ವೆಚ್ಚಗಳನ್ನು ಸಹ ಹೋಲಿಸಬೇಕು. ಈ ವೆಚ್ಚಗಳು ಒಟ್ಟಾರೆ ಸಾಲದ ಸೇವಾ ವೆಚ್ಚದ ಮೇಲೆ ತೀವ್ರ ಪರಿಣಾಮ ಬೀರಬಹುದು. ಅಲ್ಲದೆ, ಹೆಚ್ಚಿನ ಸಂಸ್ಥೆಗಳು ಸಾಲ ಪಡೆದವರ ಸಾವಿನಂತಹ ಘಟನೆಗಳಲ್ಲಿ ತಮ್ಮ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸಾಲಕ್ಕೆ ವಿಮೆಯನ್ನು ಮಾಡಿಸಿರುತ್ತಾರೆ. ಈ ಸಂದರ್ಭದಲ್ಲಿ ವಿಮೆಗೆ ಪಾವತಿಸಿದ ಪ್ರೀಮಿಯಂ ಅನ್ನು ಸಾಲದ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಹಾಗಾಗಿ ಸಾಲ ಪಡೆದವರಿಗೆ ಹೆಚ್ಚುವರಿ ವೆಚ್ಚವಾಗುತ್ತದೆ. ಆದರೆ ಈ ವಿಮೆಯು ಸಾಲ ಪಡೆಯುವವರಿಗೆ ಐಚ್ಛಿಕ ಆಗಿರುತ್ತದೆ.
ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಮೇಲಿನ ಎಲ್ಲ ಅಂಶಗಳಿಗೆ ಹೊಂದಿಕೆ ಆಗುವ ಸಾಲ ನೀಡುವ ಸಂಸ್ಥೆಗಳನ್ನು ಕಂಡುಹಿಡಿಯುವುದು ಕಷ್ಟ ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಅಂಶ. ಆದರೆ ಮೇಲೆ ತಿಳಿಸಿದ್ದರಲ್ಲಿ ಹೆಚ್ಚಿನ ಅಂಶಗಳನ್ನು ಒಳಗೊಂಡಂಥ ಸಂಸ್ಥೆಯನ್ನು ಸಾಲ ಪಡೆಯುವ ಸಲುವಾಗಿ ಆರಿಸಿಕೊಳ್ಳಬಹುದು.
ಇದನ್ನೂ ಓದಿ: Home Loan: ಜಂಟಿಯಾಗಿ ಗೃಹ ಸಾಲ ಪಡೆಯುವುದರ ಲಾಭಗಳೇನು ಗೊತ್ತೆ? ಇಲ್ಲಿದೆ ಮಾಹಿತಿ