ಕಳೆದ ಎರಡು ವರ್ಷದಲ್ಲಿ ಗೃಹ ಸಾಲದ ಬಡ್ಡಿ ದರ ಬಹಳ ಕಡಿಮೆ ಆಗಿದೆ. ಈ ಕಾರಣದಿಂದಾಗಿ ಆಸ್ತಿ ಖರೀದಿ ಕೈಗೆಟುಕುವಂತಾಗಿದೆ. ಆದರೆ ಹೋಮ್ ಲೋನ್ ಪಡೆಯುವುದಕ್ಕೆ ಕೆಲವು ಅರ್ಹತೆಗಳು ಕಡ್ಡಾಯ. ಒಂದು ವೇಳೆ ನೀವು ಗೃಹ ಸಾಲಕ್ಕೆ (Home Loan) ಅರ್ಜಿ ಹಾಕುವಂತಿದ್ದರೆ ಅದಕ್ಕೆ ಹಾಕುವ ಅರ್ಜಿ ಗುಣಮಟ್ಟ ಕೂಡ ಮುಖ್ಯವಾಗುತ್ತದೆ. ಸಾಲ ನೀಡುವ ಸಂಸ್ಥೆಯು ನಿರೀಕ್ಷೆ ಮಾಡುವಂಥ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ. ಹೋಮ್ ಲೋನ್ ನೀಡುವ ಮುನ್ನ ಸಮಗ್ರವಾಗಿ ಪರಿಶೀಲಿಸಿ, ಅರ್ಹತೆಯನ್ನು ನಿರ್ಧರಿಸುತ್ತವೆ. ಅದರಲ್ಲಿ ಉದ್ಯೋಗದ ಬಗೆ, ಕ್ರೆಡಿಟ್ ಸ್ಕೋರ್ ಮುಂತಾದವುಗಳನ್ನು ಅಳೆಯುತ್ತವೆ. ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದ್ದು, ಇವುಗಳನ್ನು ಅನುಸರಿಸಿ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು.
1. ಕೋ- ಅಪ್ಲಿಕೆಂಟ್ (ಸಹ ಅರ್ಜಿದಾರರ) ಸೇರ್ಪಡೆ
ಉತ್ತಮ ಕ್ರೆಡಿಟ್ ಸ್ಕೋರ್‌ನೊಂದಿಗೆ ಆದಾಯ ಗಳಿಸುವ ಕುಟುಂಬದ ಸದಸ್ಯರನ್ನು ಸಹ-ಅರ್ಜಿದಾರರಾಗಿ ಸೇರಿಸುವ ಮೂಲಕ ಹೋಮ್ ಲೋನ್‌ಗೆ ಅರ್ಹತೆಯನ್ನು ಹೆಚ್ಚಿಸಬಹುದು. ಹಾಗೆ ಮಾಡುವುದರಿಂದ ನೀವು ಸಾಲ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ಹೆಚ್ಚಿಸುತ್ತದೆ. ಏಕೆಂದರೆ ನಿಮ್ಮ ಇಎಂಐ ಕೈಗೆಟುಕುವುದು ಹೆಚ್ಚಾಗುತ್ತದೆ. ಗೃಹ ಸಾಲದ ಅರ್ಹತೆಯನ್ನು ಮೌಲ್ಯಮಾಪನ ಮಾಡುವಾಗ ಕೆಲವು ಹಣಕಾಸು ಸಂಸ್ಥೆಗಳು ಕುಟುಂಬ ಸದಸ್ಯರ ಆದಾಯವನ್ನು ಸೇರಿಸಬಹುದು.
2. 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸಿ
ಹೆಚ್ಚಿನ ಕ್ರೆಡಿಟ್ ಸ್ಕೋರ್ (ಸುಮಾರು 800ರಷ್ಟು ಇದ್ದಲ್ಲಿ ಆದ್ಯತೆ) ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಬಹುದು. ಏಕೆಂದರೆ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿಮ್ಮ ಹೆಚ್ಚಿನ ಮರುಪಾವತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ನೀವು ಸಾಲದಾತರಿಂದ ಕಡಿಮೆ ಬಡ್ಡಿದರವನ್ನು ಪಡೆಯಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು. ಒಂದು ವೇಳೆ ಸ್ಕೋರ್ ಕಡಿಮೆ ಇದ್ದಲ್ಲಿ ಇದೇ ಕಾರಣಕ್ಕೆ ಯಾವುದೇ ಸಾಲದ ನಿರಾಕರಣೆ ಆಗಬಹುದು. ಅದನ್ನು ತಪ್ಪಿಸಲು ನಿಮ್ಮ ಸ್ಕೋರ್ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು.
3. ನಿಮ್ಮ ಸಾಲಗಳನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ
ನಿಮ್ಮ ಸಾಲಗಳನ್ನು ಪ್ರಾಮಾಣಿಕವಾಗಿ ಪಾವತಿಸುವುದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುತ್ತದೆ. ಇನ್ನೂ ಹೆಚ್ಚಾಗಿ, ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುವ ಉಳಿತಾಯ ಮತ್ತು ಹೂಡಿಕೆಗಳನ್ನು ಸಹ ಹೊಂದಿರಬೇಕು.
4. ನಿಮ್ಮ ಆದ್ಯತೆಯ ಹಣಕಾಸು ಸಂಸ್ಥೆಯಲ್ಲಿ ಖಾತೆಯನ್ನು ತೆರೆಯಿರಿ
ವಿವಿಧ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ಗಳನ್ನು ಹುಡುಕಾಟ ನಡೆಸಿದ ಮೇಲೆ ಮತ್ತು ಅವರು ನೀಡುವ ಬೆನಿಫಿಟ್ಗಳನ್ನು ಹೋಲಿಸಿದ ನಂತರ ನೀವು ಎಲ್ಲಿ ಸಾಲ ಪಡೆಯಬೇಕು ಎಂಬುದನ್ನು ನಿರ್ಧರಿಸಿದ್ದರೆ ಅಲ್ಲಿ ಖಾತೆಯನ್ನು ತೆರೆಯುವುದು ಒಳ್ಳೆಯದು. ಸಾಲ ಪಡೆಯುವ ಆಲೋಚನೆ ನಿಮಗಿದ್ದಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಕನಿಷ್ಠ ಒಂದು ವರ್ಷ ಮೊದಲು ಇದನ್ನು ಮಾಡಬೇಕು. ಸಾಲ ನೀಡುವ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವು ಗೃಹ ಸಾಲಕ್ಕಾಗಿ ಅರ್ಹತೆಯನ್ನು ಹೆಚ್ಚಿಸುತ್ತದೆ.
5. ಹೆಚ್ಚುವರಿ ಆದಾಯದ ಮೂಲಗಳನ್ನು ಘೋಷಿಸಿ
ನಿಮ್ಮ ಹೆಚ್ಚಿನ ಮರುಪಾವತಿ ಸಾಮರ್ಥ್ಯವನ್ನು ಸೂಚಿಸುವ ಯಾವುದೇ ಹೆಚ್ಚುವರಿ ಆದಾಯದ ಮೂಲಗಳನ್ನು ಘೋಷಿಸಿದರೆ ಹೋಮ್ ಲೋನ್‌ಗಾಗಿ ನಿಮ್ಮ ಅರ್ಹತೆಯನ್ನು ಹೆಚ್ಚಿಸಬಹುದು.
6. ದೀರ್ಘಾವಧಿಯನ್ನು ಆಯ್ಕೆ ಮಾಡಿ
ದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದರಿಂದ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಬಹುದು. ಏಕೆಂದರೆ ಇಎಂಐ ಮೊತ್ತವು ಕಡಿಮೆ ಇರುತ್ತದೆ. ಅಂದರೆ ನೀವು ಸಕಾಲಿಕ ಪಾವತಿಗಳನ್ನು ಮಾಡುವ ಸಾಧ್ಯತೆ ಹೆಚ್ಚು. ಸಾಲ ನೀಡುವ ಸಂಸ್ಥೆಗೆ ಇದು ನಿಮಗೆ ಕಡಿಮೆ ಅಪಾಯದ ಸಾಲವಾಗಿ ಕಾಣಿಸುತ್ತದೆ ಮತ್ತು ಪ್ರಕ್ರಿಯೆಯಲ್ಲಿ ಹೋಮ್ ಲೋನ್‌ಗಾಗಿ ನಿಮ್ಮ ಅರ್ಹತೆಯನ್ನು ಹೆಚ್ಚಿಸಲಾಗುತ್ತದೆ. ಆದರೆ ಮತ್ತೊಂದು ಬದಿಯಲ್ಲಿ ಇದು ನಿಮಗೆ ಸಾಲ ಅವಧಿಯ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸಲು ಕಾರಣವಾಗಬಹುದು.
ಇದನ್ನೂ ಓದಿ: Home Loan Charges: ಹೋಮ್ ಲೋನ್ ಅಂದರೆ ಬಡ್ಡಿಯಷ್ಟೇ ಅಲ್ಲ, ಈ ಎಲ್ಲ ಶುಲ್ಕಗಳ ಬಗ್ಗೆಯೂ ವಿಚಾರಿಸಬೇಕು