Home Loan Charges: ಹೋಮ್​ ಲೋನ್​ ಅಂದರೆ ಬಡ್ಡಿಯಷ್ಟೇ ಅಲ್ಲ, ಈ ಎಲ್ಲ ಶುಲ್ಕಗಳ ಬಗ್ಗೆಯೂ ವಿಚಾರಿಸಬೇಕು

ಗೃಹ ಸಾಲ ಪಡೆಯುವವರಿಗೆ ಬಡ್ಡಿ ದರವನ್ನು ಹೊರತುಪಡಿಸಿ ಇತರ ಶುಲ್ಕಗಳನ್ನು ವಿಧಿಸಲಾಗುತ್ತದೆ. ಯಾವುವು ಆ ಶುಲ್ಕಗಳು ಎಂಬ ಬಗ್ಗೆ ವಿವರಗಳು ಇಲ್ಲಿವೆ.

Home Loan Charges: ಹೋಮ್​ ಲೋನ್​ ಅಂದರೆ ಬಡ್ಡಿಯಷ್ಟೇ ಅಲ್ಲ, ಈ ಎಲ್ಲ ಶುಲ್ಕಗಳ ಬಗ್ಗೆಯೂ ವಿಚಾರಿಸಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 17, 2021 | 11:47 AM

ಮನೆ ಕಟ್ಟಿಸುವುದು ಅಥವಾ ಖರೀದಿ ಮಾಡುವುದು ಯಾರ ಪಾಲಿಗಾದರೂ ತುಂಬ ದೊಡ್ಡ ಕನಸು. ಸಾಲ ಪಡೆಯದೆ ಈ ಕನಸು ಸಾಕಾರ ಮಾಡಿಕೊಳ್ಳುವುದು ಬಹಳ ಕಷ್ಟಸಾಧ್ಯವಾದ ಮಾತು. ಆದ್ದರಿಂದ ಹೋಮ್​ ಲೋನ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚು. ಅದರಲ್ಲೂ ಕೊವಿಡ್-19 ಬಿಕ್ಕಟ್ಟಿನ ನಂತರ ಗೃಹ ಸಾಲದ ಮೇಲಿನ ಬಡ್ಡಿ ದರ ದಶಕಗಳಲ್ಲೇ ಕನಿಷ್ಠ ಮಟ್ಟವನ್ನು ತಲುಪಿದೆ. ಆದರೆ ಬ್ಯಾಂಕ್​ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವುದು ಅಂದರೆ ಬಡ್ಡಿ ದರ ಮಾತ್ರ ಅಲ್ಲ, ಇತರ ಶುಲ್ಕಗಳ ಬಗ್ಗೆಯೂ ವಿಚಾರಿಸಿಕೊಳ್ಳಬೇಕು. ಒಂದು ಬ್ಯಾಂಕ್​ನಿಂದ ಮತ್ತೊಂದಕ್ಕೆ ಇವುಗಳು ಬದಲಾಗುತ್ತವೆ. ಕೆಲವು ಬ್ಯಾಂಕ್​ಗಳು ಈ ಶುಲ್ಕಗಳನ್ನು ಒಂದರಲ್ಲೇ ಸೇರಿಸಿ, ವಿಧಿಸುತ್ತವೆ. ಅಥವಾ ಬಿಡಿ ಬಿಡಿಯಾಗಿ ಶುಲ್ಕಗಳನ್ನು ತೋರಿಸುತ್ತವೆ. ಹಾಗಿದ್ದಲ್ಲಿ ಯಾವುದೆಲ್ಲ ಶುಲ್ಕಗಳು ಬರುತ್ತವೆ ಎಂಬುದರ ವಿವರ ಇಲ್ಲಿದೆ.

ಅರ್ಜಿ ಶುಲ್ಕ ಇದು ಆರಂಭದ ಶುಲ್ಕ. ಸಾಲ ನೀಡುವ ಸಂಸ್ಥೆಯಿಂದ ಇದನ್ನು ವಿಧಿಸಲಾಗುತ್ತದೆ. ಅರ್ಜಿಯ ಜತೆಗೆ ಎಲ್ಲ ಅಗತ್ಯ ದಾಖಲಾತಿಗಳು ಇವೆಯೇ ಮತ್ತು ಅದನ್ನು ಮುಂದಿನ ಪ್ರಕ್ರಿಯೆ ಮಾಡಬಹುದೇ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸಲಾಗುತ್ತದೆ.

ಪ್ರೊಸೆಸಿಂಗ್ ಶುಲ್ಕ ಸಾಲ ಮಂಜೂರಾಗುವ ಮೊದಲು ಎಲ್ಲ ಅರ್ಜಿಗಳು ಕ್ರೆಡಿಟ್ ಅಂಡರ್​ರೈಟಿಂಗ್ ಪ್ರೊಸೆಸ್ ಮೂಲಕ ಸಾಗುತ್ತದೆ. ಇದನ್ನು ಮಾಡುವುದಕ್ಕೆ ಜನರು ಹಾಗೂ ಸಂಪನ್ಮೂಲದ ಅಗತ್ಯ ಇರುತ್ತದೆ. ಪ್ರೊಸೆಸಿಂಗ್ ಶುಲ್ಕದ ಮೂಲಕ ಸಾಲ ನೀಡುವ ಬ್ಯಾಂಕ್​ಗಳು ಅಂಡರ್​ರೈಟಿಂಗ್​ಗೆ ಸಂಬಂಧಿಸಿದ ಈ ಎಲ್ಲ ವೆಚ್ಚವನ್ನು ವಸೂಲಿ ಮಾಡುತ್ತಾರೆ.

ವ್ಯಾಲ್ಯುಯೇಷನ್ ಫೀ ಯಾವುದೇ ಗೃಹ ಸಾಲವನ್ನು ಮಂಜೂರು ಮಾಡುವ ಮೊದಲಿಗೆ ಸಾಲ ನೀಡುವ ಸಂಸ್ಥೆಗಳು ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನು ಅಳೆಯುವುದಕ್ಕೆ ತಾಂತ್ರಿಕ ಪರಿಣತರ ನೆರವನ್ನು ಪಡೆಯುತ್ತವೆ. ಇದಕ್ಕಾಗಿ ಅರ್ಜಿದಾರರಿಂದ ಪ್ರತ್ಯೇಕವಾಗಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದು ಪ್ರೊಸೆಸಿಂಗ್ ಶುಲ್ಕದಲ್ಲೇ ಒಳಗೊಂಡಿರುತ್ತದೆ.

ಪ್ರೀಪೇಮೆಂಟ್ ಶುಲ್ಕ ಸಾಲ ಪಡೆದವರು ಒಂದು ವೇಳೆ ಮರುಪಾವತಿಯ ಪೂರ್ಣಾವಧಿಗೆ ಮುಂಚಿತವಾಗಿ ಸಾಲ ಹಿಂತಿರುಗಿಸಿದರೆ ಕೆಲವು ಬ್ಯಾಂಕ್​ಗಳು ಅದಕ್ಕಾಗಿ ಶುಲ್ಕ ವಿಧಿಸುತ್ತವೆ. ಇದರ ಪ್ರಮಾಣ ಬಾಕಿ ಇರುವ ಮೊತ್ತದ ಮೇಲೆ ಶೇ 2ರಿಂದ 6ರ ತನಕ ಇರುತ್ತದೆ. ಆದರೆ ಇತ್ತೀಚೆಗೆ ವಯಕ್ತಿಕ ಸಾಲಗಾರರಿಗೆ ಬಹುತೇಕ ಬ್ಯಾಂಕ್​ಗಳು ಫ್ಲೋಟಿಂಗ್ ರೇಟ್​ ಬಡ್ಡಿಗೆ ಈ ಅವಧಿಪೂರ್ವ ಪಾವತಿ ಶುಲ್ಕವನ್ನು ವಿಧಿಸುತ್ತಿಲ್ಲ.

ಕನ್ವರ್ಷನ್ ಶುಲ್ಕ ಇದನ್ನು ಸ್ವಿಚ್ಛಿಂಗ್ ಶುಲ್ಕ ಎನ್ನಲಾಗುತ್ತದೆ. ಸಾಲ ಪಡೆದಂಥವರು ಫ್ಲೋಟಿಂಗ್ ದರದಿಂದ ಫಿಕ್ಸೆಡ್ ದರಕ್ಕೆ ಅಥವಾ ಫಿಕ್ಸೆಡ್​ನಿಂದ ಫ್ಲೋಟಿಂಗ್ ದರಕ್ಕೆ ಬದಲಾವಣೆ ಮಾಡಿಕೊಳ್ಳಬೇಕು ಅಂತಾದಲ್ಲಿ ಅದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಅದೇ ಈ ಕನ್ವರ್ಷನ್ ಶುಲ್ಕ.

ನಿಯಂತ್ರಕರ ಶುಲ್ಕ ಇದು ಮುದ್ರಾಂಕ ಶುಲ್ಕ, ಜಿಎಸ್​ಟಿ ಅಂತ ಸಾಲ ಪಡೆಯುವವರಿಂದ ವಸೂಲಿ ಮಾಡಿ, ಸರ್ಕಾರಕ್ಕೆ ಪಾವತಿಸಲಾಗುತ್ತದೆ.

ವಿಳಂಬ ಪಾವತಿಯ ಶುಲ್ಕ ಸಾಲ ಪಡೆದವರು ಮರುಪಾವತಿಯನ್ನು, ಇಎಂಐ ಕಟ್ಟುವುದರಲ್ಲಿ ತಡ ಮಾಡಿದರೆ ವಿಧಿಸುವ ಶುಲ್ಕ ಆಗಿದೆ. ಇನ್ನು ಈ ಶುಲ್ಕವು ಒಂದು ಬ್ಯಾಂಕ್​ನಿಂದ ಮತ್ತೊಂದಕ್ಕೆ ಬದಲಾವಣೆ ಆಗುತ್ತದೆ.

ಸ್ಟ್ಯಾಂಪಿಂಗ್ ಶುಲ್ಕ ಬ್ಯಾಂಕ್ ಮತ್ತು ಸಾಲ ಪಡೆಯುವವರ ಮಧ್ಯೆ ಯಾವುದಾದರೂ ಕಾನೂನಿಗೆ ಸಂಬಂಧಿಸಿದ ಪತ್ರಗಳಿದ್ದಾಗ ಸ್ಟ್ಯಾಂಪ್​ ಪೇಪರ್ ಮೇಲೆ ಸಹಿ ಆಗಬೇಕು. ಈ ಶುಲ್ಕವು ವಾಸ್ತವದಲ್ಲಿ ಎಷ್ಟು ವೆಚ್ಚ ತಗುಲಿದೆ ಎಂಬುದರ ಆಧಾರದ ಮೇಲೆ ಇರುತ್ತದೆ.

ಕೊನೆಯದಾಗಿ, ಆದರೂ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ, ಇಲ್ಲಿರುವ ಶುಲ್ಕಗಳು ಎಲ್ಲರಿಗೂ ಅನ್ವಯ ಅಂತೇನೂ ಆಗಲ್ಲ. ಆದರೆ ಸಾಲ ಪಡೆದುಕೊಳ್ಳುವ ಮುಂಚೆ ಯಾವುದೆಲ್ಲ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ.

ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?