Forbes India Richest People: ಫೋರ್ಬ್ಸ್ ಇಂಡಿಯಾ ಟಾಪ್ 10ರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂಬರ್ 1
ಫೋರ್ಬ್ಸ್ ಇಂಡಿಯಾ ಭಾರತದ ಟಾಪ್ 10ರ ಶ್ರೀಮಂತರ ಪಟ್ಟಿ ಇಲ್ಲಿದೆ. ಇದರಲ್ಲಿ ಮುಕೇಶ್ ಅಂಬಾನಿ ಮತ್ತೆ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಕಳೆದ ವರ್ಷ ಟಾಪ್ 3 ಸ್ಥಾನದಲ್ಲಿ ಇದ್ದವರು ಈ ವರ್ಷವೂ ಅದೇ ಸ್ಥಾನದಲ್ಲಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಫೋರ್ಬ್ಸ್ ಭಾರತದ ಟಾಪ್ 10 ಶ್ರೀಮಂತರ (Rich) ಪಟ್ಟಿಯಲ್ಲಿ ಒಂದನೇ ಸ್ಥಾನವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅವರಿಗೆ ಬಹಳ ಸಮೀಪದಲ್ಲಿ ಇರುವವರು ಅದಾನಿ ಸಮೂಹದ ನೇತೃತ್ವ ವಹಿಸಿರುವ ಗೌತಮ್ ಅದಾನಿ. ಇನ್ನು ಮೂರನೇ ಸ್ಥಾನದಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ ಗೌರವಾಧ್ಯಕ್ಷ ಶಿವ್ ನಾಡಾರ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಮೂರು ಸ್ಥಾನಗಳಲ್ಲಿ ಈ ವರ್ಷ ಕೂಡ ಯಾವುದೇ ಬದಲಾವಣೆ ಆಗಿಲ್ಲ ಎಂದು ವರದಿಗಳು ಹೇಳುತ್ತಿವೆ. ಅಂಬಾನಿ ಒಟ್ಟಾರೆ ಆಸ್ತಿ ಮೌಲ್ಯ 9007 ಕೋಟಿ ಅಮೆರಿಕನ್ ಡಾಲರ್ ಇದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ ಶೇ 7ರಷ್ಟು ಹೆಚ್ಚಾಗಿದೆ. ಭಾರತದಲ್ಲೇ ಅತಿ ಹೆಚ್ಚು ನಿವ್ವಳ ಆಸ್ತಿ ಹೊಂದಿರುವ ಶ್ರೇಯದ ಜತೆಗೆ ಏಷ್ಯಾದಲ್ಲೇ ಅತಿ ಶ್ರೀಮಂತ, ಮತ್ತು ಜಾಗತಿಕವಾಗಿ ಹತ್ತನೇ ಸಿರಿವಂತ ವ್ಯಕ್ತಿ ಆಗಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕೆ ತಂದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII)ದ ಸೈರಸ್ ಪೂನಾವಾಲಾ ಅವರು 2430 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ. ಡಿ-ಮಾರ್ಟ್ನ ರಾಧಾಕಿಶನ್ ದಮಾನಿ ಅವರು ಕಳೆದ ವರ್ಷ ಜಾಗತಿಕವಾಗಿ ವಿಶ್ವದ ಟಾಪ್ 100ರ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದರು. ಅವರು ಈಗ 2000 ಕೋಟಿ ಅಮೆರಿಕನ್ ಡಾಲರ್ ನಿವ್ವಳ ಆಸ್ತಿ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅರ್ಸೆಲರ್ ಮಿತ್ತಲ್ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಲಕ್ಷ್ಮಿ ಮಿತ್ತಲ್ ಅವರ ಆಸ್ತಿ ಮೌಲ್ಯ 1790 ಕೋಟಿ ಅಮೆರಿಕನ್ ಡಾಲರ್ ಮೌಲ್ಯದೊಂದಿಗೆ ಆರನೇ ಸ್ಥಾನದಲ್ಲಿ, ಒಪಿ ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್ 1770 ಕೋಟಿ ಅಮೆರಿಕನ್ ಡಾಲರ್ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.
ಎಂಟನೇ ಸ್ಥಾನದಲ್ಲಿ ಆದಿತ್ಯ ಬಿರ್ಲಾ ಸಮೂಹದ ಮುಖ್ಯಸ್ಥ ಕುಮಾರ್ ಬಿರ್ಲಾ 1650 ಕೋಟಿ ಅಮೆರಿಕನ್ ಡಾಲರ್, ಒಂಬತ್ತನೇ ಸ್ಥಾನದಲ್ಲಿ ಸನ್ ಫಾರ್ಮಾದ ಮುಖ್ಯಸ್ಥರಾದ ದಿಲೀಪ್ ಸಾಂಘ್ವಿ 1560 ಕೋಟಿ ಅಮೆರಿಕನ್ ಡಾಲರ್, 10ರಲ್ಲಿ 1430 ಯುಎಸ್ಡಿಯೊಂದಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ನ ಎಂ.ಡಿ. ಉದಯ್ ಕೊಟಕ್ ಇದ್ದಾರೆ.
ಕಳೆದ ವರ್ಷ ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ 140 ಇತ್ತು. ಅಲ್ಲಿಂದ ದಾಖಲೆಯ ಎತ್ತರವಾದ 166ಕ್ಕೆ ಏರಿದೆ ಎಂದು ಫೋರ್ಬ್ಸ್ ವರದಿ ಹೇಳಿದೆ. ಕಳೆದ ಹಣಕಾಸು ವರ್ಷದಲ್ಲಿ 60ರಷ್ಟು ಕಂಪೆನಿಗಳು 1560 ಕೋಟಿ ಡಾಲರ್ ಸಂಗ್ರಹಿಸಿವೆ.
ಇದನ್ನೂ ಓದಿ: Global Rich List 2022 ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಗೆ ಎರಡನೇ ಸ್ಥಾನ