Hyundai India: ಪಾಕ್ ಹ್ಯಾಂಡಲ್‌ನಿಂದ ಕಾಶ್ಮೀರ ಬಗ್ಗೆ ಟ್ವೀಟ್‌; ನೆಟ್ಟಿಗರು ಸಿಟ್ಟಾದ ನಂತರ ಹ್ಯುಂಡೈ ಸ್ಪಷ್ಟನೆ

| Updated By: Srinivas Mata

Updated on: Feb 07, 2022 | 6:15 PM

ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಹ್ಯುಂಡೈ ಡೀಲರ್​ವೊಬ್ಬರು ಟ್ವಿಟರ್​ನಲ್ಲಿ ಹಾಕಿದ ಬೆಂಬಲದ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಹ್ಯುಂಡೈ ಇಂಡಿಯಾದಿಂದ ಸ್ಪಷ್ಟನೆ ನೀಡಲಾಗಿದೆ.

Hyundai India: ಪಾಕ್ ಹ್ಯಾಂಡಲ್‌ನಿಂದ ಕಾಶ್ಮೀರ ಬಗ್ಗೆ ಟ್ವೀಟ್‌; ನೆಟ್ಟಿಗರು ಸಿಟ್ಟಾದ ನಂತರ ಹ್ಯುಂಡೈ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ಹೊಸದಾಗಿ ಹುಟ್ಟಿಕೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಹ್ಯುಂಡೈ ಮೋಟಾರ್  (Hyundai Motors) ಇಂಡಿಯಾ ಭಾನುವಾರ ತಿಳಿಸಿರುವಂತೆ, ರಾಷ್ಟ್ರೀಯತೆಯ ಅಪ್ರತಿಮ ಮೌಲ್ಯವನ್ನು ಗೌರವಿಸುವುದಕ್ಕೆ ಬದ್ಧವಾಗಿರುವುದಾಗಿ ಹೇಳಿದೆ. ಪಾಕಿಸ್ತಾನದ ಹ್ಯುಂಡೈ ಡೀಲರ್​ವೊಬ್ಬರು ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ನೀಡುವ ಬಗ್ಗೆ ಪೋಸ್ಟ್ ಮಾಡಿದ ಮೇಲೆ ಹ್ಯುಂಡೈಗೆ ತಿರುಗುಬಾಣ ಆಗತೊಡಗಿತು. @hyundaiPakisatnOfficial ಎಂಬ ಹ್ಯಾಂಡಲ್​ನಿಂದ ಪಾಕಿಸ್ತಾನದ ಹ್ಯುಂಡೈ ಡೀಲರ್ ಟ್ವಿಟ್ಟರ್​ ಖಾತೆಯಲ್ಲಿ, “ಕಾಶ್ಮೀರ ಐಕಮತ್ಯ” ದಿನವನ್ನು ಬೆಂಬಲಿಸುವುದಾಗಿ ಪೋಸ್ಟ್​ ಮಾಡಿದ್ದರು. ಆ ನಂತರ #BoycottHyundai ಎಂಬುದು ಭಾರತದ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ದೇಶದಲ್ಲಿ ಹ್ಯುಂಡೈ ಉತ್ಪನ್ನಗಳನ್ನು ಖರೀದಿಸದಂತೆ ಹಲವರು ತಮ್ಮ ಸಂದೇಶ ಪೋಸ್ಟ್​ ಮಾಡುತ್ತಿರುವುದು ಟ್ರೆಂಡ್ ಆಗಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸುತ್ತಾ ಹ್ಯುಂಡೈ ಮೋಟಾರ್ಸ್​ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದನ್ನು ಹಾಕಿದ್ದು, ಭಾರತೀಯ ಮಾರುಕಟ್ಟೆಗೆ ಬದ್ಧವಾಗಿರುವುದಾಗಿ ಹೇಳಿದೆ. “ಹ್ಯುಂಡೈ ಮೋಟಾರ್ ಇಂಡಿಯಾವು 25 ವರ್ಷಕ್ಕೂ ಹೆಚ್ಚು ಸಮಯದಿಂದ ಭಾರತದ ಮಾರುಕಟ್ಟೆಗೆ ಬದ್ಧವಾಗಿದೆ ಮತ್ತು ರಾಷ್ಟ್ರೀಯತೆ ನೈತಿಕತೆ ಗೌರವಿಸುವ ವಿಚಾರದಲ್ಲಿ ನಾವು ಗಟ್ಟಿಯಾಗಿ ನಿಂತಿದ್ದೇವೆ,” ಎಂದು ಹೇಳಿದ್ದಾರೆ. ಇನ್ನೂ ಮುಂದುವರಿದು, “ಹ್ಯುಂಡೈ ಮೋಟಾರ್ ಇಂಡಿಯಾವನ್ನು ಜೋಡಣೆ ಮಾಡುವುದಕ್ಕೆ ಅಪೇಕ್ಷಿಸದ ಸಾಮಾಜಿಕ ಮಾಧ್ಯಮ ಪೋಸ್ಟ್ ಈ ಮಹಾನ್ ದೇಶಕ್ಕೆ ನಮ್ಮ ಅಪ್ರತಿಮ ಬದ್ಧತೆ ಮತ್ತು ಸೇವೆಯನ್ನು ತಪ್ಪು ಎಂಬಂತೆ ಮಾಡುತ್ತಿದೆ,” ಎಂದಿದ್ದಾರೆ.

ಭಾರತವು ಹ್ಯುಂಡೈ ಬ್ರ್ಯಾಂಡ್‌ಗೆ ಎರಡನೇ ನೆಲೆಯಾಗಿದೆ ಎಂದು ಪುನರುಚ್ಚರಿಸಿರುವ ಕಂಪೆನಿಯು, “ಸೂಕ್ಷ್ಮವಲ್ಲದ ಸಂವಹನದ ಬಗ್ಗೆ ನಾವು ಶೂನ್ಯ-ಸಹಿಷ್ಣು ನೀತಿ ಹೊಂದಿದ್ದೇವೆ. ಮತ್ತು ಅಂತಹ ಯಾವುದೇ ದೃಷ್ಟಿಕೋನವನ್ನು ನಾವು ಬಲವಾಗಿ ಖಂಡಿಸುತ್ತೇವೆ,” ಎನ್ನಲಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ, “ಭಾರತಕ್ಕೆ ನಮ್ಮ ಬದ್ಧತೆಯ ಭಾಗವಾಗಿ ದೇಶದ ಮತ್ತು ಅದರ ನಾಗರಿಕರ ಸುಧಾರಣೆಗೆ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ,” ಎಂದು ಹೇಳಿದೆ. ಮಾರುತಿ ಸುಜುಕಿ ಇಂಡಿಯಾದ ನಂತರ ಹ್ಯುಂಡೈ ಮೋಟಾರ್ ಇಂಡಿಯಾ ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಕ್ರೆಟಾ ಮತ್ತು ವೆನ್ಯೂ ಸೇರಿದಂತೆ 12 ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಣೆ ಮಾಡಿದಂತೆ, 2028ರ ವೇಳೆಗೆ ಭಾರತದಲ್ಲಿ ಸುಮಾರು ಆರು ಎಲೆಕ್ಟ್ರಿಕ್ ವಾಹನಗಳ ಚಾಲನೆಗೆ ಸುಮಾರು ರೂ. 4,000 ಕೋಟಿ ಹೂಡಿಕೆ ಮಾಡುವ ಯೋಜನೆಯನ್ನು ಹ್ಯುಂಡೈ ತಿಳಿಸಿದೆ. ಕಂಪೆನಿಯು ತನ್ನ ಅಸ್ತಿತ್ವದಲ್ಲಿರುವ ಶ್ರೇಣಿಯ ಆಧಾರದ ಮೇಲೆ ಮಾಡೆಲ್​ಗಳ ಮಿಶ್ರಣವನ್ನು ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಜಾಗತಿಕ ಪ್ಲಾಟ್‌ಫಾರ್ಮ್ ‘ಇ-ಜಿಎಂಪಿ’ ಆಧಾರಿತ ಸಂಪೂರ್ಣವಾಗಿ ಹೊಸ ವಾಹನಗಳನ್ನು ಹೊರತರಲು ಯೋಜಿಸುತ್ತಿದೆ. 1967ರಲ್ಲಿ ಸ್ಥಾಪಿತವಾದ ಹ್ಯುಂಡೈ ಮೋಟಾರ್ ಕಂಪೆನಿಯು 200ಕ್ಕೂ ಹೆಚ್ಚು ದೇಶಗಳಲ್ಲಿ 1,20,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸ ಮತ್ತು ಗೆಟಪ್​ನೊಂದಿಗೆ ಮುಂದಿನ ವರ್ಷ ಭಾರತದ ಮಾರ್ಕೆಟ್ ಪ್ರವೇಶಿಸಲಿದೆ