ಇದು ಸಾಕಷ್ಟು ಅಚ್ಚರಿ, ಕುತೂಹಲ ಮೂಡಿಸುವ ಒಂದು ಸುದ್ದಿ. ಜಾಗತಿಕ ಐಟಿ ದೈತ್ಯ ಕಂಪನಿ ಐಬಿಎಂನ ಉದ್ಯೋಗಿಯಾದ (IBM Employee) ಈತ 2008ರಲ್ಲಿ ಅನಾರೋಗ್ಯಗೊಂಡು ಸಿಕ್ ಲೀವ್ ಪಡೆದು ರಜೆ ಹೋಗಿದ್ದವರು. ಆಗಿನಿಂದಲೂ ಈವರೆಗೂ ಸಿಕ್ ಲೀವ್ನಲ್ಲಿಯೇ ಇದ್ದಾರೆ. ಇವರಿಗೆ ಐಬಿಎಂ ಕಂಪನಿ ವರ್ಷಕ್ಕೆ 54,028 ಪೌಂಡ್ (ಸುಮಾರು 55.31 ಲಕ್ಷ ರುಪಾಯಿ) ಸಂಬಳ ತಪ್ಪದೇ ಪಾವತಿಸುತ್ತಿದೆ. ಇವರು ಹೆಚ್ಚೂಕಡಿಮೆ ವೈದ್ಯಕೀಯವಾಗಿ ನಿವೃತ್ತಿಯೇ ಆಗಿದ್ದಾರೆ. ಆದರೂ ಇವರಿಗೆ 65 ವರ್ಷ ಆಗುವವರೆಗೂ 55 ಲಕ್ಷ ರೂ ಸಂಬಳ ಪ್ರತೀ ವರ್ಷವೂ ತಪ್ಪದೇ ಪಾವತಿಯಾಗುತ್ತಿರುತ್ತದೆ. ಈಗ ಸುದ್ದಿ ಏನೆಂದರೆ ಅಮೆರಿಕದ ಇಯಾನ್ ಕ್ಲಿಫಾರ್ಡ್ (Ian Clifford) ಎಂಬ ಈ ಐಬಿಎಂ ಉದ್ಯೋಗಿ ತನ್ನ ಸಂಬಳವನ್ನು ಕಂಪನಿ ಹೆಚ್ಚುತ್ತಿಲ್ಲ ಎಂದು ದೂರಿ ಉದ್ಯೋಗ ನ್ಯಾಯಮಂಡಳಿಯ ಮೆಟ್ಟಿಲೇರಿದ್ದು.
ಐಬಿಎಂ ಕಂಪನಿ ಕಳೆದ 15 ವರ್ಷಗಳಿಂದಲೂ ಅದೇ ಸಂಬಳ ಕೊಡುತ್ತಿದೆ. ಒಮ್ಮೆಯೂ ಸಂಬಳ ಹೆಚ್ಚಳ ಮಾಡಿಲ್ಲ. ಹಣದುಬ್ಬರ ಎಷ್ಟೊಂದು ಏರಿಕೆ ಆಗಿದೆ. ದೈಹಿಕ ಊನತೆ ಸಂಬಂಧ ತಾರತಮ್ಯ ಮಾಡಲಾಗುತ್ತಿದೆ ಎಂದು ನ್ಯಾಯಮಂಡಳಿ ಬಳಿ ಇಯಾನ್ ಕ್ಲಿಫಾರ್ಡ್ ದೂರಿತ್ತಿದ್ದರು.
ಆದರೆ, ನ್ಯಾಯಾಲಯವು ಕ್ಲಿಫಾರ್ಡ್ ವಾದವನ್ನು ಪುರಸ್ಕರಿಸಲಿಲ್ಲ. ಸಕ್ರಿಯ ಉದ್ಯೋಗಿಯಾಗಿದ್ದರೆ ಸಂಬಳ ಹೆಚ್ಚಳ ಪಡೆಯಬಹುದು. ನಿಷ್ಕ್ರಿಯವಾಗಿರುವ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಆಗಬೇಕೆನ್ನುವುದು ತರವಲ್ಲ. ನಿಮಗೆ ಅನ್ಯಾಯ ಆಗಿಲ್ಲ. ಬದಲಾಗಿ ನಿಮಗೆ ಹೆಚ್ಚು ಅನುಕೂಲವಾಗಿರುವುದು. ನಿಮ್ಮ ವಾದವನ್ನು ಒಪ್ಪಲು ಆಗುವುದಿಲ್ಲ ಎಂದು ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್ನ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದರು ಎಂದು ದಿ ಟಿಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಪಾಶ್ಚಿಮಾತ್ಯ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಒಳ್ಳೆಯ ಸೌಲಭ್ಯಗಳಿರುತ್ತವೆ. ಐಬಿಎಂನಲ್ಲಿ ತುರ್ತು ಅನಾರೋಗ್ಯಕ್ಕೆ ತುತ್ತಾದ ಉದ್ಯೋಗಿಗೆ ಸಂಬಳ ಇತ್ಯಾದಿ ನೆರವು ನಿರಂತರವಾಗಿರುತ್ತದೆ. ವಿಶೇಷ ಸಂದರ್ಭದಲ್ಲಿ ಅನಾರೋಗ್ಯದಲ್ಲಿರುವ ಉದ್ಯೋಗಿಯನ್ನು ಕಂಪನಿಯ ಹೆಲ್ತ್ ಪ್ಲಾನ್ಗೆ ಒಳಪಡಿಸಿದ್ದೇ ಆದಲ್ಲಿ ಆ ವ್ಯಕ್ತಿ ಚೇತರಿಸಿಕೊಳ್ಳುವವರೆಗೂ ಅಥವಾ 65 ವರ್ಷ ಆಗುವವರೆಗೂ ನಿರ್ದಿಷ್ಟ ಮೊತ್ತದ ಸಂಬಳ ನೀಡುತ್ತಿರಲಾಗುತ್ತದೆ. ಈ ಪ್ಲಾನ್ ಪ್ರಕಾರ ವ್ಯಕ್ತಿಯ ಸಂಬಳದ ಶೇ. 75ರಷ್ಟು ಹಣವನ್ನು ಸಂಬಳವಾಗಿ ನೀಡಲಾಗುತ್ತದೆ.
ಇದನ್ನೂ ಓದಿ: Success: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ
ಇಯಾನ್ ಕ್ಲಿಫಾರ್ಡ್ 2008ರಲ್ಲಿ ಅನಾರೋಗ್ಯದಿಂದ ಸಿಕ್ ಲೀವ್ ಪಡೆದು ರಜೆಯಲ್ಲಿದ್ದರು. ಆಗ ಅವರಿಗೆ ವಾರ್ಷಿಕ ಸಂಬಳ 72,037 ಪೌಂಡ್ ಇತ್ತು. 2013 ಆದರೂ ಅವರ ಆರೋಗ್ಯದಲ್ಲಿ ಚೇತರಿಕೆ ತೋರಲಿಲ್ಲ. ಈತ ತನ್ನ ಆರೋಗ್ಯ ಸ್ಥಿತಿ ಬಗ್ಗೆ ಕಂಪನಿ ಬಳಿ ದೂರು ಕೊಟ್ಟಿದ್ದರು. ಆಗ ಐಬಿಎಂ ಸಂಸ್ಥೆ ಕ್ಲಿಫಾರ್ಡ್ ಅವರನ್ನು ಡಿಸಬಿಲಿಟಿ ಪ್ಲಾನ್ಗೆ ಒಳಪಡಿಸಿತು. ಈ ಪ್ಲಾನ್ಗೆ ಒಳಪಟ್ಟ ಉದ್ಯೋಗಿ ಕೆಲಸ ಮಾಡದಿದ್ದರೂ ಕಂಪನಿಯ ಉದ್ಯೋಗಿಯಾಗಿ ಮುಂದುವರಿಯುತ್ತಾನೆ. ಅಂತೆಯೇ, ಕ್ಲಿಫಾರ್ಡ್ ಅವರಿಗೆ ಅವರ ಸಂಬಳದ ಶೇ. 75ರಷ್ಟು ಹಣವನ್ನು, ಅಂದರೆ 54,028 ಪೌಂಡ್ ಅನ್ನು ಸಂಬಳವಾಗಿ ನೀಡಲು ನಿರ್ಧರಿಸಲಾಯಿತು.
ಆಗ ಇಯಾನ್ ಕ್ಲಿಫಾರ್ಡ್ ವಯಸ್ಸು 30ರ ಆಸುಪಾಸಿನಲ್ಲಿತ್ತು. 65 ವರ್ಷ ವಯಸ್ಸಾಗುವವರೆಗೂ ಇದೇ ರೀತಿ ಕೊಡುತ್ತಾ ಹೋಗುವುದೆಂದು ತೀರ್ಮಾನಿಸಲಾಗಿತ್ತು. ಇಲ್ಲಿಯವರೆಗೂ ಪ್ರತೀ ವರ್ಷ ಕ್ಲಿಫಾರ್ಡ್ಗೆ ಅಷ್ಟು ಸಂಬಳ ತಪ್ಪದೇ ಬರುತ್ತಿದೆ.