ಎಚ್‌ಡಿಎಫ್‌ಸಿ ಬ್ಯಾಂಕ್ ನಂತರ ಇದೀಗ ಐಸಿಐಸಿಐ ಬ್ಯಾಂಕ್ನಿಂದ (ICICI Bank) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಿಂದಿಕ್ಕಿ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಬ್ಯಾಂಕ್ ಎನಿಸಿಕೊಂಡಿದೆ. ಬಿಎಸ್‌ಇ ಅಂಕಿ-ಅಂಶಗಳ ಪ್ರಕಾರ, ಎಸ್‌ಬಿಐನ ಮಾರುಕಟ್ಟೆ ಮೌಲ್ಯ 4,25,168.49 ಕೋಟಿ ರೂಪಾಯಿಗೆ ಹೋಲಿಸಿದರೆ ಐಸಿಐಸಿಐ ಬ್ಯಾಂಕ್ 4,96,364.87 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳದೊಂದಿಗೆ ಬುಧವಾರ ಕೊನೆಗೊಂಡಿದೆ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್ 7,47,991.29 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದೊಂದಿಗೆ ಅತ್ಯಂತ ಮೌಲ್ಯಯುತ ಭಾರತೀಯ ಬ್ಯಾಂಕ್ ಆಗಿ ಉಳಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಭಾರತದ ಟಾಪ್ 10 ಅತ್ಯಮೂಲ್ಯ ಕಂಪೆನಿಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಥವಾ RIL ಮತ್ತು ಟಿಸಿಎಸ್ ಕ್ರಮವಾಗಿ ಪಟ್ಟಿಯಲ್ಲಿ 1 ಮತ್ತು 2ನೇ ಸ್ಥಾನದಲ್ಲಿವೆ.
ಇತ್ತ, ಅದಾನಿ ಗ್ರೀನ್ ಎನರ್ಜಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಭಾರತದ ಟಾಪ್ 10 ಅತ್ಯಂತ ಮೌಲ್ಯಯುತವಾದ ಲಿಸ್ಟೆಡ್ ಕಂಪೆನಿಗಳ ಪಟ್ಟಿಯಲ್ಲಿ 7ನೇ ಸ್ಥಾನದಿಂದ 8ಕ್ಕೆ ಕುಸಿದಿದೆ. ಅದಾನಿ ಸಮೂಹದ ಷೇರುಗಳ ಮಾರುಕಟ್ಟೆ ಮೌಲ್ಯವು ಕಳೆದ ಒಂದು ವಾರದಲ್ಲಿ ಷೇರುಗಳಲ್ಲಿ ಮಾರಾಟದ ಒತ್ತಡದ ಕಾರಣಕ್ಕೆ ಇಳಿಕೆ ಕಂಡಿದೆ. ಕಳೆದ ವಾರ, ಅದಾನಿ ಗ್ರೀನ್ ಎನರ್ಜಿ ಮಾರುಕಟ್ಟೆ ಬಂಡವಾಳ ಮೌಲ್ಯವು ಎಸ್‌ಬಿಐನ ಮಾರುಕಟ್ಟೆ ಬಂಡವಾಳವನ್ನು ಮೀರಿತು ಮತ್ತು 7ನೇ ಸ್ಥಾನವನ್ನು ಗಳಿಸಿತ್ತು. ಆದರೆ ಅದಾನಿ ಷೇರುಗಳಲ್ಲಿನ ಇತ್ತೀಚಿನ ಮಾರಾಟದ ನಂತರ, ಎಸ್‌ಬಿಐ ಅತ್ಯಂತ ಮೌಲ್ಯಯುತ ಭಾರತೀಯ ಕಂಪೆನಿಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ.
ಐಸಿಐಸಿಐ ಬ್ಯಾಂಕ್ ಮೊದಲ ಬಾರಿಗೆ 2013ರಲ್ಲಿ ಎಸ್‌ಬಿಐ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹಿಂದಿಕ್ಕಿತು. ಆದರೆ ಇದು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ICICI ಬ್ಯಾಂಕಿನ ಮಾರುಕಟ್ಟೆ ಮೌಲ್ಯವು ಕೆಲವು ಅವಧಿಗಳ ನಂತರ ಎಸ್‌ಬಿಐ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಾಗಿದೆ. ಆ ನಂತರ 2016ರಲ್ಲಿ ಮತ್ತು 2022ರ ಮಾರ್ಚ್ನಲ್ಲಿ ಎಸ್‌ಬಿಐ ಮಾರುಕಟ್ಟೆ ಬಂಡವಾಳವು ಮತ್ತೊಮ್ಮೆ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯಕ್ಕಿಂತ ಕೆಳಕ್ಕೆ ಬಂದಿತು. ಆದರೆ ಈ ಬಾರಿ ಎರಡು ಪ್ರಮುಖ ಭಾರತೀಯ ಬ್ಯಾಂಕ್‌ಗಳ ಮಾರುಕಟ್ಟೆ ಮೌಲ್ಯದಲ್ಲಿನ ಅಂತರವು ದೊಡ್ಡದಾಗಿ ಕಾಣುತ್ತಿದೆ. ಏಕೆಂದರೆ ಐಸಿಐಸಿಐ ಬ್ಯಾಂಕ್ 5 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳಕ್ಕೆ ತಲುಪುತ್ತಿದೆ ಮತ್ತು ಎಸ್‌ಬಿಐ ಮಾರುಕಟ್ಟೆ ಕ್ಯಾಪ್ ರೂ. 4 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯಕ್ಕೆ ಇಳಿಯುತ್ತಿದೆ.
5paisa.comನಲ್ಲಿ ಲೀಡ್ ರೀಸರ್ಚ್ ರುಚಿತ್ ಜೈನ್ ಮಾತನಾಡಿ, ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಬಂಡವಾಳ ಮೌಲ್ಯವು ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್‌ಗಿಂತ ತನ್ನ ಮುನ್ನಡೆಯನ್ನು ವಿಸ್ತರಿಸಲು ಸಂಭವನೀಯ ಕಾರಣವನ್ನು ತಿಳಿಸುತ್ತಾ, “ನಿಫ್ಟಿಗೆ ಹೋಲಿಸಿದರೆ ಬ್ಯಾಂಕ್ ನಿಫ್ಟಿ (ವಿಶೇಷವಾಗಿ ಖಾಸಗಿ ವಲಯದ ಬ್ಯಾಂಕಿಂಗ್ ಸ್ಟಾಕ್‌ಗಳು) ಕಳೆದ ಕೆಲವು ಸೆಷನ್ಗಳಿಂದ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿದೆ,” ಎಂದಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ICICI Bank iMobile Pay: ಐಸಿಐಸಿಐ ಬ್ಯಾಂಕ್ ಐಮೊಬೈಲ್ ಪೇ ಮೂಲಕ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿ
Published On - 12:16 pm, Thu, 12 May 22