
ನವದೆಹಲಿ, ಜನವರಿ 19: 2025ರ ಕ್ಯಾಲಂಡರ್ ವರ್ಷದಲ್ಲಿ, ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕ ಬೆಳವಣಿಗೆ (GDP) ಶೇ. 7.3ರಷ್ಟು ದಾಖಲಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಮೂಡೀಸ್ ಏಜೆನ್ಸಿ ಅಂದಾಜು ಮಾಡಿವೆ. ಈ ಎರಡೂ ಸಂಸ್ಥೆಗಳು ಕೂಡ ತಮ್ಮ ಹಿಂದಿನ ಅಂದಾಜನ್ನು ಪರಿಷ್ಕರಿಸಿದ್ದು, ನಿರೀಕ್ಷೆ ಹೆಚ್ಚಿಸಿವೆ. 2025ರಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದು ಐಎಂಎಫ್ ಹೇಳಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದು ಮೂಡೀಸ್ ಹೇಳಿದೆ.
ಐಎಂಎಫ್ ತನ್ನ ಹಿಂದಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಭಾರತದ ಜಿಡಿಪಿ 2025ರಲ್ಲಿ ಶೇ. 6.7 ಬೆಳೆಯಬಹುದು ಎಂದು ನಿರೀಕ್ಷಿಸಿತ್ತು. ಇದೀಗ 70 ಮೂಲಾಂಕಗಳಷ್ಟು ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ ಮಾಡಿದೆ. ಪ್ರಸಕ್ತ ಕ್ಯಾಲಂಡರ್ ವರ್ಷದಲ್ಲಿ (2026) ಮತ್ತು ಮುಂದಿ ವರ್ಷದಲ್ಲಿ (2027) ಜಿಡಿಪಿ ಶೇ. 6.4ಕ್ಕೆ ಸೀಮಿತಗೊಳ್ಳಬಹುದು ಎಂದೂ ಐಎಂಎಫ್ ಹೇಳಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್
2025ರ ಕ್ಯಾಲಂಡರ್ ವರ್ಷದ ಮೊದಲ ಮೂರು ಕ್ವಾರ್ಟರ್ಗಳಲ್ಲಿ ಜಿಡಿಪಿ ಬೆಳವಣಿಗೆ ಶೇ. 7.4, ಶೇ. 7.8 ಮತ್ತು ಶೇ. 8.2 ದಾಖಲಾಗಿದೆ. ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಶೇ. 5.8ರಷ್ಟು ಜಿಡಿಪಿ ವೃದ್ಧಿಯಾದರೂ ಸಾಕು ಐಎಂಎಫ್ ಅಂದಾಜಿನಂತೆ 2025ರಲ್ಲಿ ಜಿಡಿಪಿ ದರ ಶೇ. 7.3 ಆಗುತ್ತದೆ. ಕೊನೆಯ ಕ್ವಾರ್ಟರ್ನಲ್ಲಿ ಭಾರತೀಯ ಕಾರ್ಪೊರೇಟ್ ಕಂಪನಿಗಳು ನಿರೀಕ್ಷೆಗಿಂತ ಉತ್ತಮ ಹಣಕಾಸು ಲಾಭಗಳನ್ನು ತೋರಿದ ಹಿನ್ನೆಲೆಯಲ್ಲಿ ಆರ್ಥಿಕತೆ ಉತ್ತಮವಾಗಿ ಬೆಳೆಯುವ ಸಾಧ್ಯತೆ ಇದೆ ಎಂಬುದು ಐಎಂಎಫ್ನ ಅಭಿಪ್ರಾಯ.
ಪ್ರಸಕ್ತ ಹಣಕಾಸು ವರ್ಷವಾದ 2025-26ರಲ್ಲಿ ಭಾರತದ ಆರ್ಥಿಕತೆ ಶೇ. 7.3ರಷ್ಟು ಬೆಳೆಯಬಹುದು ಎಂದು ಮೂಡೀಸ್ ರೇಟಿಂಗ್ಸ್ ಏಜೆನ್ಸಿ ಹೇಳಿದೆ. ಉತ್ತಮ ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿ ಸರಾಸರಿ ಕೌಟುಂಬಿಕ ಆದಾಯವೂ ಹೆಚ್ಚಳವಾಗಬಹುದು. ಇದರಿಂದ ಹೆಚ್ಚೆಚ್ಚು ಆದಾಯವಂತ ಜನರು ವಿಮಾ ರಕ್ಷಣೆಯ ಮೊರೆ ಹೋಗಬಹುದು. ಇದರಿಂದ ಇನ್ಷೂರೆನ್ಸ್ ಸೆಕ್ಟರ್ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಬಹುದು ಎಂದು ಮೂಡೀಸ್ ರೇಟಿಂಗ್ಸ್ ವರದಿ ಹೇಳಿದೆ.
ಇದನ್ನೂ ಓದಿ: ಗ್ರೀನ್ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?
ಭಾರತೀಯ ಜನಸಾಮಾನ್ಯರ ಆದಾಯ ಸ್ಥಿರವಾಗಿ ಹೆಚ್ಚುತ್ತಿದೆ. ಜನರಿಗೆ ತಮ್ಮ ಆದಾಯದ ರಕ್ಷಣೆ ಎಷ್ಟು ಮುಖ್ಯ ಎಂಬುದು ಅರಿವಿರುವುದರಿಂದ ಇನ್ಷೂರೆನ್ಸ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಣಕಾಸು ವ್ಯವಸ್ಥೆ ಡಿಜಿಟಲೀಕರಣಗೊಂಡಿರುವುದರಿಂದ ಇನ್ಷೂರೆನ್ಸ್ ಉತ್ಪನ್ನಗಳು ಜನರನ್ನು ತಲುಪುವುದು ಸುಲಭವಾಗಿದೆ ಎಂಬಿತ್ಯಾದಿ ಅಂಶಗಳನ್ನು ಮೂಡೀಸ್ ರೇಟಿಂಗ್ಸ್ ಗುರುತಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ