ಐಟಿ ದಿಗ್ಗಜ ಕಂಪೆನಿ ಇನ್ಫೋಸಿಸ್ನಿಂದ ಅಭಿವೃದ್ಧಿ ಹಂತದಲ್ಲಿರುವ ಹೊಸ ಆದಾಯ ತೆರಿಗೆ ಪೋರ್ಟಲ್ ಅನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರೀಸ್ಟೋರ್ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ಅವರು ಮಾತನಾಡಿ, “ಹೊಸ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ ಇನ್ಫೋಸಿಸ್‌ಗೆ ನಾನು ನೆನಪಿಸುತ್ತಿದ್ದೇನೆ, ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಮುಂದಿನ ಕೆಲ ದಿನಗಳಲ್ಲಿ ಬಹುಪಾಲು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯೊಂದಿಗೆ ನನಗೆ ಸಂದೇಶ ಕಳುಹಿಸುತ್ತಿದ್ದಾರೆ,” ಎಂದು ನಿರ್ಮಲಾ ಹೇಳಿದ್ದಾರೆ.
ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪ್ಲಾಟ್‌ಫಾರ್ಮ್ ‘www.incometax.gov.in’ ಜೂನ್ 7ರಂದು ಪ್ರಾರಂಭವಾದ ದಿನದಿಂದ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಜೂನ್ 8, 2021ರಂದು, ನಂದನ್ ನಿಲೇಕಣಿ ಮಾತನಾಡಿ, “ಹೊಸ ಇ-ಫೈಲಿಂಗ್ ಪೋರ್ಟಲ್ ಫೈಲಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಮೊದಲ ದಿನ ನಾವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ. ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಈ ಆರಂಭಿಕ ದೋಷಗಳು ಮತ್ತು ವ್ಯವಸ್ಥೆಯು ವಾರದಲ್ಲಿ ಸರಿಯಾಗುವ ನಿರೀಕ್ಷೆ ಇದೆ,” ಎಂದಿದ್ದರು.
ಆದರೆ, ನಂದನ್ ನಿಲೇಕಣಿ ಮತ್ತು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರೊಂದಿಗೆ ಖಾತ್ರಿಪಡಿಸಿಕೊಂಡು, ನಿರ್ಮಲಾ ಸೀತಾರಾಮನ್ ಅವರು ಈಗ ತಿಳಿಸಿರುವಂತೆ, ಹೊಸ ಐಟಿ ಪೋರ್ಟಲ್ ಸಮಸ್ಯೆಗಳನ್ನು ಕೆಲ ದಿನಗಳಲ್ಲಿ ಸರಿಪಡಿಸಲು ಎಲ್ಲ ರೀತಿ ಸಿದ್ಧತೆಯೂ ಆಗಿದೆ. ಜೂನ್ 8ರಂದು ನಿರ್ಮಲಾ ಸೀತಾರಾಮನ್ ಟ್ವೀಟ್ನಲ್ಲಿ ತಿಳಿಸಿದಂತೆ, “ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ 20:45ಕ್ಕೆ ಸೇವೆಗೆ ಬಿಡುಗಡೆ ಮಾಡಲಾಯಿತು. ನನ್ನ ಟಿಎಲ್ ಕುಂದುಕೊರತೆಗಳನ್ನು ಮತ್ತು ತೊಂದರೆಗಳನ್ನು ನೋಡಿದ್ದೇನೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ನಮ್ಮ ತೆರಿಗೆದಾರರನ್ನು ನಿರಾಸೆ ಮಾಡುವುದಿಲ್ಲ. ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತದೆ. ತೆರಿಗೆದಾರರಿಗೆ ನಿಯಮಾವಳಿಯಲ್ಲಿ ಸುಲಭವಾಗಬೇಕು ಎಂಬುದು ನಮ್ಮ ಆದ್ಯತೆ,” ಎಂದಿದ್ದರು.
ಅಂದಹಾಗೆ, ಜನವರಿ 2019 ಮತ್ತು ಜೂನ್ 2021ರ ಮಧ್ಯೆ ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಸರಿಪಡಿಸಲು ಕೇಂದ್ರವು ಇನ್ಫೋಸಿಸ್‌ಗೆ ಒಟ್ಟು 164.5 ಕೋಟಿ ರೂಪಾಯಿಗಳ ಮೊತ್ತವನ್ನು ನೀಡಿದೆ.
ಇನ್ನು ಮರುಪಾವತಿ ಬಯಸುವ ತೆರಿಗೆದಾರರಿಗೆ ಒಂದು ಪ್ರಮುಖ ಮಾಹಿತಿಯಾಗಿ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ತಿಳಿಸಿರುವಂತೆ, “ಸಿಬಿಡಿಟಿಯಿಂದ ರೂ. 47,318 ಕೋಟಿಗಿಂತ ಹೆಚ್ಚು ಮರುಪಾವತಿಯನ್ನು 22.61 ಲಕ್ಷ ತೆರಿಗೆದಾರರಿಗೆ 2021ರ ಏಪ್ರಿಲ್ 1ರಿಂದ 9 ಆಗಸ್ಟ್ 2021ರ ಮಧ್ಯೆ ನೀಡಿದೆ. ಆದಾಯ ತೆರಿಗೆ ಮರುಪಾವತಿ ರೂ.14,241 ಕೋಟಿಯನ್ನು 21,38,375 ಪ್ರಕರಣಗಳಲ್ಲಿ ನೀಡಲಾಗಿದೆ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ ರೂ. 33,078 ಕೋಟಿಗಳನ್ನು 1,22,511 ಪ್ರಕರಣಗಳಲ್ಲಿ ನೀಡಲಾಗಿದೆ”.
ಇದನ್ನೂ ಓದಿ: Petrol-Diesel price: ಮನಮೋಹನ್ ಸಿಂಗ್ ಸರ್ಕಾರ ತಪ್ಪಿಗೆ ಪೆಟ್ರೋಲ್ಗೆ ನಾವು ಬೆಲೆ ತೆರುತ್ತಿದ್ದೇವೆ ಎಂದ ನಿರ್ಮಲಾ
(Income Tax New Portal Problem Will Be Solved In Couple Of Days Said FM Nirmala Sitharaman)