ನವದೆಹಲಿ, ಡಿಸೆಂಬರ್ 1: ದೇಶದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚುತ್ತಿರುವುದು ದತ್ತಾಂಶದಿಂದ ತಿಳಿದುಬರುತ್ತದೆ. ಹಾಗೆಯೇ, ಆದಾಯ ತೆರಿಗೆ ಪಾವತಿಸುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ. ಐಟಿಆರ್ ಸಲ್ಲಿಸಿರುವ ಮಹಿಳೆಯರ ಸಂಖ್ಯೆ ನಾಲ್ಕು ವರ್ಷದಲ್ಲಿ ಶೇ. 25ರಷ್ಟು ಹೆಚ್ಚಿದೆ. 2019-20ರ ಅಸೆಸ್ಮೆಂಟ್ ವರ್ಷದಲ್ಲಿ (2018-19ರ ಹಣಕಾಸು ವರ್ಷಕ್ಕೆ) 1.83 ಕೋಟಿ ಮಹಿಳೆಯರು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದಾರೆ. 2023-24ರಲ್ಲಿ ಇವರ ಸಂಖ್ಯೆ 2.29 ಕೋಟಿ ಆಗಿದೆ. ಇವರ ಸಂಖ್ಯೆ ಬಹುತೇಕ ಶೇ. 25ರಷ್ಟು ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಒಟ್ಟಾರೆ ಸಲ್ಲಿಕೆಯಾಗಿರುವ ಐಟಿಆರ್ಗಳು ಏರಿಕೆ ಆಗಿರುವುದು ಶೇ. 17 ಮಾತ್ರ. ಅಂದರೆ, ಮಹಿಳಾ ಐಟಿ ಪಾವತಿದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವುದು ದತ್ತಾಂಶದಿಂದ ತಿಳಿದುಬರುತ್ತದೆ.
ಜಿಎಸ್ಟಿ, ಇನ್ಕಮ್ ಟ್ಯಾಕ್ಸ್ ಪಾವತಿಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿರುವ ರಾಜ್ಯ. ಅಂತೆಯೇ, ಮಹಿಳಾ ತೆರಿಗೆ ಪಾವತಿಯಲ್ಲೂ ಈ ರಾಜ್ಯವೇ ನಂಬರ್ ಒನ್. 2019-20ರ ಮೌಲ್ಯಮಾಪನ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ 29.95 ಲಕ್ಷ ಮಹಿಳೆಯರು ಐಟಿಆರ್ ಸಲ್ಲಿಸಿದ್ದರು. 2023-24ರಲ್ಲಿ ಇವರ ಸಂಖ್ಯೆ 36.84 ಲಕ್ಷ ಆಗಿದೆ. ನಾಲ್ಕು ವರ್ಷದಲ್ಲಿ 6.88 ಲಕ್ಷದಷ್ಟು ಮಹಿಳಾ ಐಟಿ ಪಾವತಿದಾರರ ಸಂಖ್ಯೆ ಏರಿಕೆ ಆಗಿದೆ.
ಇದನ್ನೂ ಓದಿ: ಒಂದು ತಿಂಗಳ ವಿಶೇಷ ಅಭಿಯಾನದಲ್ಲಿ ಒಂದು ಕೋಟಿ ಪಿಂಚಣಿದಾರರಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೃಷ್ಟಿ: ಸರ್ಕಾರದಿಂದ ಮಾಹಿತಿ
ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಮೊದಲು. ಆದರೆ, ನೇರ ತೆರಿಗೆಯಾದ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಯಲ್ಲಿ ಕರ್ನಾಟಕ ಟಾಪ್-5ನಲ್ಲಿ ಇಲ್ಲ. ಅತಿಹೆಚ್ಚು ಆದಾಯ ತೆರಿಗೆ ಪಾವತಿದಾರ ರಾಜ್ಯಗಳಲ್ಲಿ ಕರ್ನಾಟಕವೂ ಇದೆ. ಆದರೆ, ಅತಿಹೆಚ್ಚು ಐಟಿ ರಿಟರ್ನ್ ವಿಚಾರದಲ್ಲಿ ಕರ್ನಾಟಕ ಅಗ್ರ ಐದರಲ್ಲಿ ಇಲ್ಲ ಎಂಬುದು ಗಮನಾರ್ಹ. ಆದರೆ ಮಹಿಳೆಯ ಐಟಿಆರ್ ವಿಚಾರದಲ್ಲಿ ಕರ್ನಾಟಕ ಟಾಪ್-5ನಲ್ಲಿ ಇದೆ.
ಮಹಿಳಾ ಐಟಿಆರ್ ಸಲ್ಲಿಕೆಯಲ್ಲಿ ಮಹಾರಾಷ್ಟ್ರ ನಂತರದ ಸ್ಥಾನ ಉತ್ತರಪ್ರದೇಶದ್ದು. ಗುಜರಾತ್, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳು ಮೊದಲ ಐದು ಸ್ಥಾನಗಳಲ್ಲಿ ಇವೆ.
ಇದನ್ನೂ ಓದಿ: ಪೇಟೆಂಟ್, ಟ್ರೇಡ್ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಭಾರತ
ಕರ್ನಾಟಕದಲ್ಲಿ 2019-20ರಲ್ಲಿ 11,34,903 ಮಹಿಳೆಯರು ಐಟಿಆರ್ ಸಲ್ಲಿಸಿದ್ದರು 2023-24ರಲ್ಲಿ ಇವರ ಸಂಖ್ಯೆ 14,30,345ಕ್ಕೆ ಏರಿದೆ. ಉತ್ತರಪ್ರದೇಶದಲ್ಲಿ 20,43,794, ಗುಜರಾತ್ನಲ್ಲಿ 22,50,098, ಪಂಜಾಬ್ನಲ್ಲಿ 13,22,580 ಮಹಿಳೆಯರಿಂದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ