ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತ 99, ಯುಕೆ 90; ಯಾರಿಗೇನು ಲಾಭ? ಇಲ್ಲಿದೆ ಡೀಟೇಲ್ಸ್
Key facts of India-UK Free Trade Agreement: ಭಾರತ ಮತ್ತು ಯುಕೆ ನಡುವೆ ಮೂರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮಾತುಕತೆ, ಸಂಧಾನದ ಬಳಿಕ ಫ್ರೀ ಟ್ರೇಡ್ ಅಗ್ರೀಮೆಂಟ್ ಅಂತಿಮಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯುಕೆ ಭೇಟಿ ವೇಳೆ ಜುಲೈ 24ರಂದು ಎಫ್ಟಿಎಗೆ ಸಹಿ ಬೀಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಒಪ್ಪಂದವು ಭಾರತದ ಶೇ. 99 ಸರಕುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಟ್ಯಾರಿಫ್ ರಹಿತ ಪ್ರವೇಶ ಸಿಗಲಿದೆ.

ನವದೆಹಲಿ, ಜುಲೈ 23: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (India UK free trade agreement) ಬಹುತೇಕ ಅಂತಿಮಗೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 24, ಗುರುವಾರದಂದು ಲಂಡನ್ಗೆ ಭೇಟಿ ನೀಡುತ್ತಿದ್ದು, ಅಂದೇ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ. ಮೂರು ವರ್ಷಗಳ ಸಂಧಾನ ಮತ್ತು ಮಾತುಕತೆಗಳ ಫಲ ನಾಳೆ ಸಿಕ್ಕಲಿದೆ. ಈ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವೆ ವ್ಯಾಪಾರ ವಹಿವಾಟು ಹಿಂದೆಂದಿಗಿಂತಲೂ ಸಲೀಸಾಗಿ ನಡೆಯಲಿದೆ.
ಪ್ರಧಾನಿಗಳ ಬ್ರಿಟನ್ ಭೇಟಿ ವೇಳೆ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಕೂಡ ಜೊತೆಯಲ್ಲಿರುವ ಸಾಧ್ಯತೆ ಇದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಎರಡೂ ದೇಶಗಳ ಸಂಸತ್ತಿನಲ್ಲಿ ಅದಕ್ಕೆ ಅನುಮೋದನೆ ದೊರೆಯಬೇಕು. ಅದಾದ ಬಳಿಕವಷ್ಟೇ ಒಪ್ಪಂದವು ಜಾರಿಗೆ ಬರುತ್ತದೆ. ವರದಿಗಳ ಪ್ರಕಾರ ಈ ಒಪ್ಪಂದದಲ್ಲಿ ಭಾರತಕ್ಕೆ ಹೆಚ್ಚು ಅನುಕೂಲಕರ ಅಂಶಗಳಿವೆ ಎನ್ನಲಾಗಿದೆ.
ಈ ಒಪ್ಪಂದ ಪ್ರಕಾರ ಭಾರತವು ಶೇ. 90ರಷ್ಟು ಬ್ರಿಟನ್ ಸರಕುಗಳಿಗೆ ಟ್ಯಾರಿಫ್ ತೆಗೆದುಹಾಕಬಹುದು ಅಥವಾ ಕಡಿಮೆ ಮಾಡಬಹುದು. ಅದೇ ವೇಳೆ, ಭಾರತದ ಶೇ. 99ರಷ್ಟು ಸರಕುಗಳಿಗೆ ಬ್ರಿಟನ್ ಟ್ಯಾರಿಫ್ ತೆಗೆಯಲಿದೆ. ಸದ್ಯ ಶೇ. 4ರಿಂದ 14ರಷ್ಟು ಆಮದು ಸುಂಕವನ್ನು ಭಾರತದ ಸರಕುಗಳಿಗೆ ವಿಧಿಸಲಾಗುತ್ತಿದೆ. ಈಗ ಬಹುತೇಕ ಟ್ಯಾರಿಫ್ರಹಿತವಾಗಿ ಮುಕ್ತವಾಗಿ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯ.
ಇದನ್ನೂ ಓದಿ: ತಲಾ ಆದಾಯದಲ್ಲಿ ಕರ್ನಾಟಕವೇ ಟಾಪ್: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದ ಸುರ್ಜೇವಾಲ
ಬ್ರಿಟನ್ ಜೊತೆಗಿನ ಎಫ್ಟಿಎಯಿಂದ ಭಾರತಕ್ಕೆ ಅನುಕೂಲಗಳು..
ಭಾರತದ ಶೇ. 99 ಉತ್ಪನ್ನಗಳಿಗೆ ಸುಂಕ ಇರುವುದಿಲ್ಲ. ಜವಳಿ, ಪಾದರಕ್ಷೆ, ಒಡವೆ, ಹರಳು, ವಾಹನ ಬಿಡಿಭಾಗ, ಪೀಠೋಪಕರಣ, ಕ್ರೀಡಾ ಸರಕು, ರಾಸಾಯನಿಕ, ಯಂತ್ರೋಪಕರಣ ಇತ್ಯಾದಿಗಳಿಗೆ ಶೂನ್ಯ ಸುಂಕ ಇರುತ್ತದೆ.
ಭಾರತದಲ್ಲಿ ತಯಾರಾದ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶ ಸಿಗಲಿದೆ.
ಬ್ರಿಟನ್ನಲ್ಲಿ ತಾತ್ಕಾಲಿಕವಾಗಿ ಹೋಗಿರುವ ವೃತ್ತಿಪರರು ಅಲ್ಲಿಯ ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳಿಗೆ ಮೂರು ವರ್ಷಗಳವರೆಗೆ ಕೊಡುಗೆ ನೀಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ವರ್ಷಕ್ಕೆ ಭಾರತೀಯರಿಗೆ 4,000 ಕೋಟಿ ರೂ ಉಳಿತಾಯವಾಗಬಹುದು.
ಇದನ್ನೂ ಓದಿ: ಸೋದರರ ಕಮಾಲ್; ದಿನಸಿ ಅಂಗಡಿ ಬಿಟ್ಟು 300 ಕೋಟಿ ರೂ ‘ಕೂಲ್’ ಸಾಮ್ರಾಜ್ಯ ಕಟ್ಟಿದ ಕಥೆ
ಭಾರತದೊಂದಿಗೆ ಒಪ್ಪಂದದಿಂದ ಬ್ರಿಟನ್ಗೆ ಆಗುವ ಲಾಭಗಳು…
ಬ್ರಿಟನ್ನ ಶೇ. 90ರಷ್ಟು ಉತ್ಪನ್ನಗಳಿಗೆ ಭಾರತವು ಆಮದು ಸುಂಕ ಇಳಿಸಲಿದೆ. ಬ್ರಿಟನ್ ಜಿಡಿಪಿಗೆ ವರ್ಷಕ್ಕೆ 6.5 ಬಿಲಿಯನ್ ಡಾಲರ್ನಷ್ಟು ಹೆಚ್ಚುವರಿ ಆದಾಯವು ಸಿಗಲಿದೆ. ಭಾರತದಿಂದ ಕಡಿಮೆ ಬೆಲೆಗೆ ಉಡುಗೆ, ಪಾದರಕ್ಷೆ ಹಾಗೂ ಆಹಾರ ಉತ್ಪನ್ನಗಳು ಬ್ರಿಟನ್ ಗ್ರಾಹಕರಿಗೆ ಸಿಗಲಿದೆ. ಬ್ರಿಟನ್ನ ಆಟೊಮೊಬೈಲ್ ಕಂಪನಿಗಳು ಮತ್ತು ಮದ್ಯಪಾನ ಕಂಪನಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮುಕ್ತಾವಕಾಶ ಸಿಗಲಿದೆ.
ಬ್ರಿಟನ್ನ ಉದ್ಯಮದಲ್ಲಿ ಭಾರತದ ಕಂಪನಿಗಳಿಂದ ಹೂಡಿಕೆ ಹೆಚ್ಚಲಿದೆ. ಉದ್ಯೋಗ ಪ್ರಮಾಣವೂ ಹೆಚ್ಚಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




