ಸೋದರರ ಕಮಾಲ್; ದಿನಸಿ ಅಂಗಡಿ ಬಿಟ್ಟು 300 ಕೋಟಿ ರೂ ‘ಕೂಲ್’ ಸಾಮ್ರಾಜ್ಯ ಕಟ್ಟಿದ ಕಥೆ
Summercool Sanjeev and Rajeev Gupta: ಧೈರ್ಯಶಾಲಿಗೆ ಅದೃಷ್ಟ ಒಲಿಯುತ್ತದೆ. ಉತ್ತರಪ್ರದೇಶದ ಸಂಜೀವ್ ಗುಪ್ತಾ ಮತ್ತು ರಾಜೀವ್ ಗುಪ್ತಾ ಸೋದರರು ತೋರಿದ ಧೈರ್ಯ, ಶ್ರಮದಿಂದ ಇವತ್ತು ನೂರಾರು ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಲು ಸಾಧ್ಯವಾಗಿದೆ. ದಿನಸಿ ಅಂಗಡಿ ಬಿಟ್ಟು ಏರ್ ಕೂಲರ್ ಮಾರುತ್ತಿದ್ದ ಈ ಸೋದರರು ಇವತ್ತು ನಾಲ್ಕು ಫ್ಯಾಕ್ಟರಿಗಳನ್ನು ಹೊಂದಿದ್ದು ದೇಶಾದ್ಯಂತ ಬ್ಯುಸಿನೆಸ್ ಹೊಂದಿದ್ದಾರೆ.

ಲಕ್ ಎನ್ನುವುದು ಶ್ರಮ ಪಡುವವರಿಗೆ ಹೆಚ್ಚು ಒಲಿಯುತ್ತದಂತೆ. ಮನಸ್ಸು ಮಾಡಿದರೆ ಯಾರು ಬೇಕಾದರೂ, ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಉತ್ತರಪ್ರದೇಶದ ಬುಲಂದಶಹರ್ನ ಗುಪ್ತಾ ಸೋದರರೇ ಸಾಕ್ಷಿಯಾಗಿದ್ದಾರೆ. ಗುಲೋತಿ (Gulaothi) ಎನ್ನುವ ಪುಟ್ಟ ಪಟ್ಟಣದಲ್ಲಿ ಅಪ್ಪ ನಡೆಸುತ್ತಿದ್ದ ದಿನಸಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಸಂಜೀವ್ ಗುಪ್ತಾ ಮತ್ತು ರಾಜೀವ್ ಗುಪ್ತ ಎನ್ನುವ ಸೋದರರು ಇವತ್ತು 300 ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ (business) ಕಟ್ಟಿದ್ಧಾರೆ. ಅವರ ಶ್ರಮದ ಒಂದೊಂದು ಬೆವರು ಹನಿಯೂ ಸಾಮ್ರಾಜ್ಯ ನಿರ್ಮಾಣಕ್ಕೆ ನೆರವಾಗಿದೆ.
ಗುಪ್ತಾ ಸೋದರರು ಊರು ಬಿಟ್ಟ ಹೊತ್ತು…
ದಿನಸಿ ಅಂಗಡಿಯಲ್ಲಿ ಬರುತ್ತಿದ್ದ ಆದಾಯ ದಿನದ ಅಗತ್ಯಕ್ಕೆ ಸರಿಹೋಗುತ್ತಿತ್ತು. ಇಲ್ಲೇ ಇದ್ದರೆ ಬದುಕು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೇ ಇರುತ್ತೆ ಎಂಬುದು ಖಾತ್ರಿಯಾದ ಬಳಿಕ ಸಂಜೀವ್ ಮತ್ತು ರಾಜೀವ್ ಗುಪ್ತಾ ಅವರು ಊರು ಬಿಟ್ಟು ಹೊಸ ಸಂಪಾದನೆಗಾಗಿ ಘಾಜಿಯಾಬಾದ್ ಪಟ್ಟಣಕ್ಕೆ ಹೋಗುತ್ತಾರೆ.
ದೆಹಲಿಗೆ ಸಮೀಪ ಇರುವ ಘಾಜಿಯಾಬಾದ್ನಲ್ಲಿ ಅವರು ಹೋಲ್ಸೇಲ್ ಡೀಲರ್ಗಳಿಂದ ಏರ್ ಕೂಲರ್ಗಳನ್ನು ಖರೀದಿಸಿ ಅಲ್ಪ ಲಾಭಕ್ಕೆ ಮಾರುವ ಕೆಲಸ ಮಾಡುತ್ತಾರೆ. ಕೂಲರ್ಗಳನ್ನು ಮಾರುವ ಕಲೆ ಅವರಿಗೆ ಒಲಿಯುತ್ತದೆ.
ಇದನ್ನೂ ಓದಿ: ಬ್ಲಿಂಕಿಟ್ ಯಶಸ್ಸಿಗೆ ಉದ್ಯೋಗಿಗಳ ‘ಅತೃಪ್ತಿ’ಯೇ ಕಾರಣವಾ? ಎಟರ್ನಲ್ ಸಿಇಒ ಬಿಚ್ಚಿಟ್ಟ ಸತ್ಯ ಇದು
ಹೊಸ ಐಡಿಯಾ ಹುಟ್ಟಿದ ಹೊತ್ತು…
1992, ಸಂಜೀವ್ ಮತ್ತು ರಾಜೀವ್ ಬಹಳ ದೊಡ್ಡ ನಿರ್ಧಾರ ತೆಗೆದುಕೊಂಡ ವರ್ಷ. ಯಾರೋ ನಿರ್ಮಿಸಿದ ಕೂಲರ್ ಅನ್ನು ಮಾರುವ ಬದಲು ತಾವೇ ನಿರ್ಮಿಸಿ ತಾವೆ ಮಾರಬಾರದೇಕೆ ಎಂದು ಅಲೋಚಿಸುತ್ತಾರೆ. ಈ ಐಡಿಯಾ ಜಾರಿಗೆ ತರಲು ತಡ ಮಾಡುವುದಿಲ್ಲ. ತಮ್ಮ ಸ್ನೇಹಿತರಿಂದ 25,000 ರೂ ಸಾಲ ಪಡೆದು ಕೂಲರ್ಗಳನ್ನು ತಾವೇ ತಯಾರಿಸಲು ತೊಡಗುತ್ತಾರೆ.
ಆಗ ಹೊರಬಂದಿದ್ದೇ ‘ಸಮ್ಮರ್ಕೂಲ್’ ಎನ್ನುವ ಬ್ರ್ಯಾಂಡ್. ಅವರ ಮೊದಲ ಕೂಲರ್ ಬೆಲೆ 1,600 ರೂ. ಬೇರೆಲ್ಲಾ ಕಂಪನಿಗಳ ಏರ್ ಕೂಲರ್ಗಿಂತ ಇದರ ಬೆಲೆ ಕಡಿಮೆ ಇತ್ತಾದರೂ ಹೊಸ ಬ್ರ್ಯಾಂಡ್ ಆದ್ದರಿಂದ ಗ್ರಾಹಕರು ಮತ್ತು ರೀಟೇಲ್ ಮಾರಾಟಗಾರರನ್ನು ಒಪ್ಪಿಸುವುದು ಕಷ್ಟವಾಗಿತ್ತು. ಅದರಲ್ಲೂ ದೊಡ್ಡ ಫ್ಯಾಕ್ಟರಿ ಇಲ್ಲದ ವ್ಯಕ್ತಿಗಳು ನಿರ್ಮಿಸಿದ ಕೂಲರ್ ಅನ್ನು ಹೇಗೆ ನಂಬುವುದು ಎನ್ನುವ ಪ್ರಶ್ನೆ.
ಆದರೆ, ರಾಜೀವ್ ಮತ್ತು ಸಂಜೀವ್ ದೃತಿಗೆಡಲಿಲ್ಲ. ಅವರಿಗೆ ತಮ್ಮ ಕೂಲರ್ಗಳ ಗುಣಮಟ್ಟದ ಬಗ್ಗೆ ವಿಶ್ವಾಸ ಇತ್ತು. ಅದು ಮಾರುಕಟ್ಟೆಯಲ್ಲಿ ನೆಲೆಯೂರುತ್ತೆ ಎನ್ನುವ ನಂಬಿಕೆ ಇತ್ತು. ಅವರ ನಂಬಿಕೆ ಹುಸಿಯಾಗಲಿಲ್ಲ. ‘ಸಮ್ಮರ್ಕೂಲ್’ ತನ್ನ ಗುಣಮಟ್ಟ ಮತ್ತು ಅಗ್ಗದ ಬೆಲೆ ದೆಸೆಯಿಂದ ನಿಧಾನವಾಗಿ ಜನಪ್ರಿಯವಾಗತೊಡಗಿತು. 10 ವರ್ಷದಲ್ಲಿ ಕೂಲರ್ ಮಾರುಕಟ್ಟೆಯಲ್ಲಿ ಪ್ರಧಾನ ಬ್ರ್ಯಾಂಡ್ ಎನಿಸಿತು.
ಫ್ಯಾಕ್ಟರಿಗೆ ಬೆಂಕಿ ಬಿದ್ದ ಹೊತ್ತು…
2005ರಲ್ಲಿ ಅವರ ಕೂಲರ್ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿಗೆ ಬೆಂಕಿ ಬಿದ್ದು ಹಾಳಾಗಿ ಹೋಗಿತ್ತು. ಆದರೆ ಗುಪ್ತಾ ಸೋದರರು ಆವರೆಗೂ ಹೊಂದಿದ್ದ ವಿಶ್ವಾಸ ಮತ್ತು ಬಾಂಧವ್ಯವು ಅವರ ಕೈಹಿಡಿಯಿತು. ವಿತರಕರು ಮತ್ತು ಸರಬರಾಜುದಾರರು ನೆರವಿಗೆ ನಿಂತರು. ಸಮ್ಮರ್ಕೂಲರ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿತು.
ಇದನ್ನೂ ಓದಿ: ಫ್ಯೂಚರ್ ಇರುವ ಬ್ಯುಸಿನೆಸ್; ಸೋಲಾರ್ ಏಜೆನ್ಸಿ ಮತ್ತು ಡೀಲರ್ಶಿಪ್, ಯಾವುದು ಬೆಸ್ಟ್? ಇಲ್ಲಿದೆ ಡೀಟೇಲ್ಸ್
ನಾಲ್ಕು ಫ್ಯಾಕ್ಟರಿಗಳನ್ನು ಕಟ್ಟಿರುವ ಸೋದರರು..
ಸಮ್ಮರ್ಕೂಲ್ ಸಂಸ್ಥೆ ಇವತ್ತು ನಾಲ್ಕು ಫ್ಯಾಕ್ಟರಿಗಳನ್ನು ಹೊಂದಿದೆ. 200 ಮಂದಿ ಕೆಲಸ ಮಾಡುತ್ತಾರೆ. 17 ರಾಜ್ಯಗಳಲ್ಲಿ 250 ವಿತರಕರನ್ನು ಹೊಂದಿದೆ. 4,000 ರೀಟೇಲ್ ಸ್ಟೋರ್ಗಳಲ್ಲಿ ಅವರ ಉತ್ಪನ್ನಗಳು ಲಭ್ಯ ಇವೆ. ಸೀಲಿಂಗ್ ಫ್ಯಾನ್, ಎಕ್ಸಾಸ್ಟ್ ಫ್ಯಾನ್, ರೂಮ್ ಹೀಟರ್, ಎಲ್ಇಡಿ ಟಿವಿ, ಅಡುಗೆ ಮನೆ ಉಪಕರಣ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಇವತ್ತು ಸಮ್ಮರ್ಕೂಲ್ ಸಂಸ್ಥೆ ಪ್ರತೀ ತಿಂಗಳು ಒಂದು ಲಕ್ಷ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಅದರ ಉತ್ಪನ್ನಗಳಲ್ಲಿ ಶೇ. 80ರಷ್ಟವು ಅವರೇ ನಿರ್ಮಿಸಿದಂಥವು. ಎಲ್ಇಡಿ ಟಿವಿ, ವಾಷಿಂಗ್ ಮೆಷೀನ್ ಇತ್ಯಾದಿ ಉತ್ಪನ್ನಗಳನ್ನು ಅವರು ಬೇರೆ ಬ್ರ್ಯಾಂಡ್ಗಳಿಂದ ಪಡೆದು ಮಾರಾಟ ಮಾಡುತ್ತಾರೆ. ಅವರ ಶೇ. 90ರಷ್ಟು ಉತ್ಪನ್ನಗಳ ಮಾರಾಟವು ಆಫ್ಲೈನ್ನಲ್ಲಿ ರೀಟೇಲ್ ಮಳಿಗೆಗಳ ಮೂಲಕ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




