ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ 14.57 ಲಕ್ಷ ಮೇಡ್ ಇನ್ ಇಂಡಿಯಾ ವಾಹನಗಳ ರಫ್ತು
Exports of automobiles rise by 22pc in June quarter: 2025ರ ಏಪ್ರಿಲ್, ಮೇ ಮತ್ತು ಜೂನ್ ಈ ಮೂರು ತಿಂಗಳಲ್ಲಿ ಭಾರತದಲ್ಲಿ ತಯಾರಾದ 14,57,461 ವಾಹನಗಳು ರಫ್ತಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಾಹನಗಳ ರಫ್ತಿನಲ್ಲಿ ಶೇ. 22ರಷ್ಟು ಹೆಚ್ಚಳ ಆಗಿದೆ. ಈ ಪೈಕಿ ಪ್ಯಾಸೆಂಜರ್ ವಾಹನಗಳ ರಫ್ತು ಎರಡು ಲಕ್ಷ ಗಡಿ ಮುಟ್ಟಿ ಹೊಸ ದಾಖಲೆ ಬರೆದಿದೆ.

ನವದೆಹಲಿ, ಜುಲೈ 20: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದಿಂದ ವಾಹನಗಳ ರಫ್ತು (Auto exports) ಶೇ. 22ರಷ್ಟು ಹೆಚ್ಚಳಗೊಂಡಿದೆ. ವಾಹನೋದ್ಯಮದ ಸಂಘಟನೆಯಾದ ಎಸ್ಐಎಎಂ (SIAM) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ದ್ವಿಚಕ್ರ ವಾಹನಗಳು ಹಾಗೂ ಕಮರ್ಷಿಯಲ್ ವಾಹನಗಳ ರಫ್ತು ಗಣನೀಯವಾಗಿ ಏರಿಕೆಯಾದ ಪರಿಣಾಮ ಒಟ್ಟಾರೆ ವಾಹನ ರಫ್ತು ಶೇ. 22ರಷ್ಟು ಹೆಚ್ಚಾಗಲು ಸಾಧ್ಯವಾಗಿದೆ.
2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ 11,92,566 ಯುನಿಟ್ಗಳು ರಫ್ತಾಗಿದ್ದವು. ಈ ವರ್ಷದ ಇದೇ ಅವಧಿಯಲ್ಲಿ 14,57,461 ಯುನಿಟ್ಗಳು ರಫ್ತಾಗಿವೆ. ಈ ಪೈಕಿ ಪ್ಯಾಸೆಂಜರ್ ವಾಹನಗಳ ರಫ್ತು 2,04,330 ಯುನಿಟ್ ತಲುಪಿದೆ. ಇದು ಯಾವುದೇ ಕ್ವಾರ್ಟರ್ನಲ್ಲಿ ಕಂಡ ಅತಿಹೆಚ್ಚು ಪ್ಯಾಸೆಂಜರ್ ವಾಹನಗಳ ರಫ್ತು. ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕ ಭಾಗಗಳಲ್ಲಿನ ಮಾರುಕಟ್ಟೆಗಳಿಗೆ ಇವು ಹೆಚ್ಚಾಗಿ ರಫ್ತಾಗಿವೆ.
ಇದನ್ನೂ ಓದಿ: ಭಾರತದಿಂದ ಮೊದಲ ಕ್ವಾರ್ಟರ್ನಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತು
ಇವೆರಡು ಭಾಗಗಳು ಮಾತ್ರವಲ್ಲ, ಶ್ರೀಲಂಕಾ, ನೇಪಾಳ, ಜಪಾನ್, ಆಸ್ಟ್ರೇಲಿಯಾ ಇತ್ಯಾದಿ ದೇಶಗಳಿಗೆ ಭಾರತದಿಂದ ಹಲವು ವಾಹನಗಳು ರಫ್ತಾಗಿವೆ.
ಪ್ರಾಬಲ್ಯ ಮುಂದುವರಿಸಿದ ಮಾರುತಿ ಸುಜುಕಿ
ಭಾರತದ ನಂಬರ್ ಒನ್ ವಾಹನ ಕಂಪನಿಯಾದ ಮಾರುತಿ ಸುಜುಕಿ ರಫ್ತು ಮಾರುಕಟ್ಟೆಯಲ್ಲೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಮಾರುತಿ ಸುಜುಕಿಯ 96,181 ಯುನಿಟ್ಗಳು ರಫ್ತಾಗಿವೆ. ಭಾರತದ ಒಟ್ಟಾರೆ ಪ್ಯಾಸೆಂಜರ್ ವಾಹನಗಳ ರಫ್ತಿನಲ್ಲಿ ಈ ಕಂಪನಿ ಪಾಲು ಹತ್ತಿರ ಹತ್ತಿರ ಅರ್ಧದಷ್ಟಿದೆ.
ಹ್ಯೂಂಡಾಯ್ ಮೋಟಾರ್ಸ್ ಕಂಪನಿಯು 48,140 ಪ್ಯಾಸೆಂಜರ್ ವಾಹನಗಳನ್ನು ಭಾರತದಿಂದ ಬೇರೆ ದೇಶಗಳಿಗೆ ರಫ್ತು ಮಾಡಿವೆ.
ಇದನ್ನೂ ಓದಿ: ಕಳೆದ 6 ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತೇ?: ಇದರ ಬೆಲೆ ಕೇವಲ 6 ಲಕ್ಷ ರೂ.
ದ್ವಿಚಕ್ರ ವಾಹನಗಳ ರಫ್ತು…
ಭಾರತದಲ್ಲಿ ತಯಾರಾದ ದ್ವಿಚಕ್ರ ವಾಹನಗಳು ಮೊದಲ ತ್ರೈಮಾಸಿಕದಲ್ಲಿ 11,36,942 ಯುನಿಟ್ಗಳಷ್ಟು ರಫ್ತಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಟೂ ವ್ಹೀಲರ್ಗಳ ರಫ್ತಿನಲ್ಲಿ ಶೇ. 23ರಷ್ಟು ಏರಿಕೆ ಆಗಿದೆ.
ಇನ್ನು, ಕಮರ್ಷಿಯಲ್ ವಾಹನಗಳು ಈ ಅವಧಿಯಲ್ಲಿ 19,427 ಯುನಿಟ್ಗಳು, ತ್ರಿಚಕ್ರ ವಾಹನಗಳು 95,796 ಯುನಿಟ್ಗಳಷ್ಟು ರಫ್ತಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




