
ನವದೆಹಲಿ, ಜುಲೈ 31: ಯಾವುದೇ ಟ್ರೇಡ್ ಡೀಲ್ ಮಾಡಿಕೊಳ್ಳುವಾಗ ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ಭಾರತ ಕಳೆದ ದಶಕದಲ್ಲಿ ವಿಶ್ವದ ದುರ್ಬಲ ಆರ್ಥಿಕತೆಯಿಂದ ಅತಿವೇಗವಾಗಿ ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಯ ದೇಶವಾಗಿ ಬೆಳೆದಿದೆ ಎಂದಿದ್ದಾರೆ. ಭಾರತ ‘ಸತ್ತ’ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ (Donald Trump) ಕೊಟ್ಟಿದ್ದ ಟಾಂಟ್ಗೆ ಭಾರತ ಪರೋಕ್ಷವಾಗಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಎಂದೆನಿಸಿದೆ.
‘ಜಾಗತಿಕ ಆರ್ಥಿಕತೆಯಲ್ಲಿ ಭಾರತ ಬೆಳಗುತ್ತಿದೆ ಎಂದು ಇವತ್ತು ಜಾಗತಿಕ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ’ ಎಂದು ಭಾರತದ ಶಕ್ತಿ ಬಗ್ಗೆ ಪಿಯೂಶ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ
ಅಮೆರಿಕದಿಂದ ಭಾರತದ ಮೇಲೆ ಟ್ಯಾರಿಫ್ ಹೇರಿಕೆ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಆಮದು ಸುಂಕ ಮತ್ತು ಹೆಚ್ಚುವರಿಯಾಗಿ ಪೆನಾಲ್ಟಿ ಹೇರುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಳ್ಳದಿರುವುದಕ್ಕೆ ಮತ್ತು ರಷ್ಯಾ ಜೊತೆ ವ್ಯಾಪಾರ ಸಂಬಂಧ ಹೊಂದಿರುವುದಕ್ಕೆ ಭಾರತಕ್ಕೆ ಟ್ರಂಪ್ ನೀಡುತ್ತಿರುವ ‘ಶಿಕ್ಷೆ’ ಇದು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಿಯೂಶ್ ಗೋಯಲ್ ಲೋಕಸಭೆಯಲ್ಲಿ ಮಾತನಾಡಿದ್ದಾರೆ.
ಅಮೆರಿಕ ಪ್ರಕಟಿಸಿದ ಟ್ಯಾರಿಫ್ಗಳಿಂದ ಏನು ಪರಿಣಾಮಗಳಾಗಬಹುದು ಎಂದು ಭಾರತ ಅವಲೋಕಿಸುತ್ತಿದೆ ಎಂದು ಹೇಳಿದ ಅವರು, ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಾಗ ದೇಶದ ಹಿತಾಸಕ್ತಿ ರಕ್ಷಣೆಯೇ ಆದ್ಯತೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ರೈತರು ಮತ್ತು ಎಂಎಸ್ಎಂಇಗಳು ನೀಡಿದ ಕೊಡುಗೆಗಳಿಂದಾಗಿ ಭಾರತವು ಕಳೆದ ದಶಕದಲ್ಲಿ 11ನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಸ್ಥಾನಕ್ಕೆ ಏರಿದೆ’ ಎಂದು ಹೇಳುವ ಮೂಲಕ ಗೋಯಲ್ ಅವರು ಕೃಷಿ ಹಾಗೂ ಸಣ್ಣ ಉದ್ದಿಮೆಗಳ ರಕ್ಷಣೆಗೆ ಕಟಿಬದ್ಧವಾಗಿರುವುದನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ತೈಲ ಮಾರುವ ದಿನ ಬರುತ್ತೆ: ಟ್ರಂಪ್ ಹೊಸ ವರಸೆ
ತಜ್ಞರ ಪ್ರಕಾರ ಆಭರಣ ಮತ್ತು ಹರಳು ಉದ್ಯಮ, ಎಲೆಕ್ಟ್ರಾನಿಕ್ಸ್, ಔಷಧ, ಜವಳಿ ಉದ್ಯಮಗಳು ಪ್ರಮುಖವಾಗಿ ಹಿನ್ನಡೆಗೆ ಒಳಗಾಗಬಹುದು. ಸರ್ವಿಸ್ ಸೆಕ್ಟರ್ಗೆ ಸುಂಕ ವಿಧಿಸಿದ್ದೇ ಆದಲ್ಲಿ ಐಟಿ ಉದ್ಯಮಕ್ಕೂ ಹೊಡೆತ ಬೀಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ