ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 604 ಬಿಲಿಯನ್ ಡಾಲರ್ಗೆ ಏರಿಕೆ; ಆರ್ಬಿಐ ಗವರ್ನರ್ ಮಾಹಿತಿ
India Forex Reserves: ಡಿಸೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 604 ಬಿಲಿಯನ್ ಡಾಲರ್ಗೆ ಏರಿದೆ. ವಿಶ್ವದಲ್ಲಿ ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳಲ್ಲಿ ಭಾರತ 4ನೇ ಸ್ಥಾನ ಹೊಂದಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 642 ಬಿಲಿಯನ್ ಡಾಲರ್ ತಲುಪಿತ್ತು. ಅದು ಈವರೆಗಿನ ಗರಿಷ್ಠ ಮಟ್ಟವಾಗಿದೆ.
ನವದೆಹಲಿ, ಡಿಸೆಂಬರ್ 8: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Foreign Exchange Reserves) ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ 600 ಬಿಲಿಯನ್ ಡಾಲರ್ ಗಡಿ ದಾಟಿದೆ. 2023ರ ಡಿಸೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 604 ಬಿಲಿಯನ್ ಡಾಲರ್ ತಲುಪಿದೆ. ಆರ್ಬಿಐ ಎಂಪಿಸಿ ಸಭೆ ಬಳಿಕ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಆಗಸ್ಟ್ 11ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 600 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮಟ್ಟದಲ್ಲಿತ್ತು. ಆ ಬಳಿಕ ಅಷ್ಟು ಪ್ರಮಾಣದ ಮೀಸಲು ನಿಧಿ ಹೊಂದಿರುವುದು ಇದೇ ಮೊದಲು.
ನವೆಂಬರ್ 24ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 597.935 ಬಿಲಿಯನ್ ಡಾಲರ್ ಇತ್ತು. ಆ ಬಳಿಕ ಒಂದು ವಾರದಲ್ಲಿ 6 ಬಿಲಿಯನ್ಗೂ ಹೆಚ್ಚು ಡಾಲರ್ನಷ್ಟು ಫಾರೆಕ್ಸ್ ನಿಧಿ ಉಬ್ಬಿದೆ.
ಇದನ್ನೂ ಓದಿ: 2023-24ರಲ್ಲಿ ರೀಟೇಲ್ ಹಣದುಬ್ಬರ ಶೇ. 5.4 ಸಾಧ್ಯತೆ; ಹೆಡ್ಲೈನ್ ಇನ್ಫ್ಲೇಶನ್ ಬಗ್ಗೆ ಆರ್ಬಿಐ ಸಮಾಧಾನ
ಹಿಂದಿನ ವಾರದಲ್ಲಿ (ನವೆಂಬರ್ 24) ಭಾರತದ 597.935 ಬಿಲಿಯನ್ ಡಾಲರ್ ಮೊತ್ತದ ಫಾರೆಕ್ಸ್ ರಿಸರ್ವ್ಸ್ ಮೊತ್ತದಲ್ಲಿ ಗೋಲ್ಡ್ ರಿಸರ್ವ್ಸ್ ಪಾಲು 46.338 ಬಿಲಿಯನ್ ಡಾಲರ್ ಇತ್ತು. ಎಸ್ಡಿಆರ್ಗಳು 18.218 ಬಿಲಿಯನ್ ಡಾಲರ್ ಮೊತ್ತದಷ್ಟಿದ್ದವು. ಐಎಂಎಫ್ ಜೊತೆಗಿನ ರಿಸರ್ವ್ ಪೊಸಿಶನ್ (ಐಎಂಎಫ್ನಲ್ಲಿ ಇರಿಸುವ ಹಣ) 4.848 ಬಿಲಿಯನ್ ಡಾಲರ್ಗೆ ಏರಿತ್ತು.
ಈ ವಾರ (ಡಿಸೆಂಬರ್ 1) ಫಾರೆಕ್ಸ್ ನಿಧಿಯಲ್ಲಿ ಯಾವ್ಯಾವುದೆಲ್ಲಾ ಎಷ್ಟೆಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು ಆರ್ಬಿಐ ಗವರ್ನರ್ ನೀಡಿಲ್ಲ. ಸದ್ಯದಲ್ಲೇ ಆರ್ಬಿಐನಿಂದ ಈ ಬಗ್ಗೆ ಮಾಹಿತಿ ಬಿಡುಗಡೆ ಆಗಬಹುದು.
2021ರ ಅಕ್ಟೋಬರ್ ತಿಂಗಳಲ್ಲಿ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ 642 ಬಿಲಿಯನ್ ಡಾಲರ್ಗೆ ಏರಿತ್ತು. ಅದು ಸದ್ಯ ಇದೂವರೆಗಿನ ದಾಖಲೆ ಮಟ್ಟವಾಗಿದೆ. ಅಲ್ಲಿಂದ ಈಚೆ ಆ ಮೊತ್ತ ಸತತವಾಗಿ ಇಳಿಕೆ ಕಾಣುತ್ತಾ ಬಂದಿತ್ತು.
ಆದಾಗ್ಯೂ ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಹಿಂದಿನ ವಾರ ರಷ್ಯಾವನ್ನು ಹಿಂದಿಕ್ಕಿ ಭಾರತ 4ನೇ ಸ್ಥಾನಕ್ಕೆ ಏರಿತ್ತು. ಚೀನಾ 3 ಟ್ರಿಲಿಯನ್ ಡಾಲರ್ನಷ್ಟು ರಿಸರ್ವ್ಸ್ ಮೊತ್ತದೊಂದಿಗೆ ಮೊದಲ ಸ್ಥಾನದಲ್ಲಿದೆ. ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ ಇದೆ. ಸ್ವಿಟ್ಚರ್ಲ್ಯಾಂಡ್ 876 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದ್ದು 3ನೇ ಸ್ಥಾನದಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ