ಕೊನೆಯ ಕ್ವಾರ್ಟರ್​ನಲ್ಲೂ ನಿರೀಕ್ಷೆಮೀರಿ ಜಿಡಿಪಿ ವೃದ್ಧಿ; 2023-24ರಲ್ಲಿ ಶೇ. 8.2ರಷ್ಟು ಬೆಳೆದ ಭಾರತದ ಆರ್ಥಿಕತೆ

| Updated By: ರಮೇಶ್ ಬಿ. ಜವಳಗೇರಾ

Updated on: May 31, 2024 | 8:32 PM

India GDP Growth Rate at 7.8pc in March Quarter: ಭಾರತದ ಆರ್ಥಿಕತೆ ಇತ್ತೀಚೆಗೆ ನಿರೀಕ್ಷೆಮೀರಿ ಬೆಳೆಯುತ್ತಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆ, ಅಸ್ಥಿರತೆ ಮಧ್ಯೆ ಜಿಡಿಪಿ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ. ಸರ್ಕಾರ ಮೇ 31ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ 2024ರ ಜನವರಿಯಿಂದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳೆದಿದೆ. ಇಡೀ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 8.2ರಷ್ಟಾಗಿರಬಹುದು ಎಂದು ಅಂದಾಜು ಮಾಡಿದೆ.

ಕೊನೆಯ ಕ್ವಾರ್ಟರ್​ನಲ್ಲೂ ನಿರೀಕ್ಷೆಮೀರಿ ಜಿಡಿಪಿ ವೃದ್ಧಿ; 2023-24ರಲ್ಲಿ ಶೇ. 8.2ರಷ್ಟು ಬೆಳೆದ ಭಾರತದ ಆರ್ಥಿಕತೆ
ಜಿಡಿಪಿ, ಮೋದಿ
Follow us on

ನವದೆಹಲಿ, ಮೇ 31: ಕಳೆದ ನಾಲ್ಕೈದು ತ್ರೈಮಾಸಿಕಗಳಿಂದ ಭಾರತದ ಆರ್ಥಿಕ ಬೆಳವಣಿಗೆ (Indian economic growth) ಅಚ್ಚರಿ ಮೂಡಿಸುವುದು ಮುಂದುವರಿದಿದೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಆರ್ಥಿಕತೆ ಶೇ. 7.8ರಷ್ಟು ಹೆಚ್ಚಾಗಿದೆ. ಇದರೊಂದಿಗೆ 2023-24ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಶೇ. 8.2ರಷ್ಟು ಬೆಳೆದಿದೆ ಜಿಡಿಪಿ. ಆರ್​ಬಿಐ ಸೇರಿದಂತೆ ಬಹುತೇಕ ಎಲ್ಲಾ ಏಜೆನ್ಸಿಗಳು ಎಣಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆರ್ಥಿಕತೆ ವೃದ್ಧಿಯಾಗಿದೆ. ವಿವಿಧ ಆರ್ಥಿಕ ತಜ್ಞರು, ವಿಶ್ಲೇಷಕರು, ಬ್ರೋಕರೇಜ್ ಸಂಸ್ಥೆಗಳು ಭಾರತದ ಜಿಡಿಪಿವೃದ್ಧಿ ಶೇ. 7.5ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜು ಮಾಡಿದ್ದವು. ಉತ್ತಮ ಹಣಕಾಸು ಬುನಾದಿ ಮೂಡಿದಲ್ಲಿ ಶೇ. 8ರ ಬೆಳವಣಿಗೆ ಕಾಣಬಹುದು ಎನ್ನಲಾಗಿತ್ತು. ಐಎಂಎಫ್ ಪ್ರಕಾರ ಶೇ. 6.8ರಷ್ಟು ಮಾತ್ರ ಜಿಡಿಪಿ ಹೆಚ್ಚಬಹುದು ಎಂಬ ಅಂದಾಜಿತ್ತು. ಆದರೆ ಎಲ್ಲರ ಲೆಕ್ಕಾಚಾರ ಮೀರಿಸಿ ಜಿಡಿಪಿ ಹೆಚ್ಚಾಗಿದೆ.

ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 8.4ರಷ್ಟು ಹೆಚ್ಚಾಗಿತ್ತು. ಇದೂ ಕೂಡ ಅನಿರೀಕ್ಷಿತ ಬೆಳವಣಿಗೆಯೇ. ಹಣಕಾಸು ಸಚಿವಾಲಯ ಕೂಡ ಈ ಪರಿ ಏರಿಕೆಯನ್ನು ನಿರೀಕ್ಷಿಸಿರಲಿಲ್ಲ. ನಾಲ್ಕನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7ರಷ್ಟು ಹೆಚ್ಚಬಹುದು ಎಂದು ಆರ್​ಬಿಐ ನಿರೀಕ್ಷಿಸಿತ್ತು. ರಾಯ್ಟರ್ಸ್ ಪೋಲ್ ಮತ್ತು ಇಟಿ ಪೋಲ್​ನಲ್ಲಿ ಪಾಲ್ಗೊಂಡಿದ್ದ ಆರ್ಥಿಕ ತಜ್ಞರು ಜಿಡಿಪಿ ದರ ಶೇ. 6.7ರಿಂದ 6.8ರಷ್ಟು ಇರಬಹುದು ಎಂದು ಭಾವಿಸಿದ್ದರು.

ಇದನ್ನೂ ಓದಿ: ಬ್ರಿಟನ್​ನಿಂದ 100 ಟನ್ ಚಿನ್ನ ಸಾಗಿಸಿ ತಂದ ಭಾರತ; 1991ರ ಬಳಿಕ ಇಷ್ಟೊಂದು ಪ್ರಮಾಣದ ಚಿನ್ನ ಸಾಗಾಣಿಕೆ ಇದೇ ಮೊದಲು

2022-23ರ ಹಣಕಾಸು ವರ್ಷದಲ್ಲಿ ರಿಯಲ್ ಜಿಡಿಪಿ ಹೆಚ್ಚಾಗಿದ್ದು ಶೇ. 7.2ರಷ್ಟು. 2023-24ರಲ್ಲಿ ಶೇ. 8.2ರಷ್ಟು ಹೆಚ್ಚಾಗಿದೆ. ನಾಮಿನಲ್ ಜಿಡಿಪಿ ದರ ಶೇ. 14.2ರಷ್ಟು ಇದ್ದದ್ದು ಶೇ. 9.6ರ ದರಕ್ಕೆ ಇಳಿದಿದೆ. ರಿಯಲ್ ಜಿಡಿಪಿ 2022-23ರಲ್ಲಿ 160.71 ಲಕ್ಷ ಕೋಟಿ ರೂ ಇತ್ತು. 2023-24ರಲ್ಲಿ 173.82 ಲಕ್ಷ ಕೋಟಿ ರೂಗೆ ಏರಿರಬಹುದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆ ಇಂದು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.


2020ರಲ್ಲಿ ಸಂಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗ ಕಾಲಘಟ್ಟದಲ್ಲಿ ಲಾಕ್ ಡೌನ್ ಇತ್ಯಾದಿ ಕಾರಣಕ್ಕೆ ಆರ್ಥಿಕತೆ ಬಂದ್ ಆಗಿತ್ತು. ಪರಿಣಾಮವಾಗಿ ಜಾಗತಿಕವಾಗಿ ಎಲ್ಲಾ ದೇಶಗಳ ಜಿಡಿಪಿ ಮೈನಸ್​ಗೆ ಹೋಗಿತ್ತು. ಲಾಕ್ ಡೌನ್ ಎಲ್ಲವೂ ತೆರವುಗೊಂಡು ಆರ್ಥಿಕ ಚಟುವಟಿಕೆ ಮಾಮೂಲಿಯನಂತೆ ಆದ ಬಳಿಕ ಬೆಳವಣಿಗೆಯ ಓಟ ಬಹುತೇಕ ಸರಾಗವಾಗಿದೆ. ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಯುದ್ಧ ಘಟನೆಗಳ ನಡುವೆಯೂ ಭಾರತದ ಜಿಡಿಪಿ ದರ ಉತ್ತಮವಾಗಿದೆ.

ಜಗತ್ತಿನ ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಅತಿವೇಗವಾಗಿ ಬೆಳೆಯುತ್ತಿರುವ ದೇಶವೆಂದರೆ ಭಾರತವೇ. ಚೀನಾ, ಇಂಡೋನೇಷ್ಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳಿಗಿಂತ ಹೆಚ್ಚು ವೇಗದಲ್ಲಿ ಭಾರತ ಬೆಳವಣಿಗೆ ಹೊಂದುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Fri, 31 May 24