Personal Finance: ತುರ್ತು ಸಾಲ ಎಂದರೇನು? ಅರ್ಜೆಂಟಾಗಿ ಪಾಸ್‌ಬುಕ್ ಲೋನ್ ಸಿಗುತ್ತದಾ?
Emergency Loan: ವೈಯಕ್ತಿಕ ಸಾಲದ ವಿರುದ್ಧ ಅಂದರೆ ತುಸು ದುಬಾರಿ ಎನಿಸುವ ಬಡ್ಡಿ ದರದ ಪರ್ಸನಲ್ ಸಾಲಕ್ಕಿಂತ ಇಂತಹ ಕೆಲ ತುರ್ತು ಸಾಲಗಳು ನೆರವಾಗಬಹುದು. ಅಂದರೆ ಕಡಿಮೆ ಬಡ್ಡಿ ದರದಲ್ಲಿ ಈ ಸಾಲ ನೀಡಲಾಗುತ್ತದೆ. ಗಮನಿಸಿ ಇಂತಹ ತುರ್ತು ಸಾಲವನ್ನು ನೀವು ಅಗತ್ಯವಾಗಿ ವ್ಯಾಪಾರಕ್ಕೆ ಬಳಸಬೇಕು ಎಂದೇನೂ ಇಲ್ಲ. ಬದಲಿಗೆ, ಪಡೆದಿರುವ ಸಾಲದ ಮೊತ್ತವನ್ನು ವೈಯಕ್ತಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು.
ತುರ್ತು ಸಾಲಗಳು ( Emergency Loan) ಅನಿರೀಕ್ಷಿತ ಪರಿಸ್ಥಿತಿ ಎದುರಾದಾಗ ಮತ್ತು ತ್ವರಿತವಾಗಿ ನಗದು ಅಗತ್ಯವಿರುವ ಜನರಿಗೆ ವೈಯಕ್ತಿಕ ಸಾಲ ರೂಪದಲ್ಲಿ ಸಿಗುವ ಆರ್ಥಿಕ ಊರುಗೋಲು ಆಗಿದೆ. ಸಾಮಾನ್ಯವಾಗಿ, ಬ್ಯಾಂಕುಗಳು (Bank) ಖಾತೆದಾರರ (ಸಾಲಗಾರರು) ಅಗತ್ಯಕ್ಕೆ ಅನುಗುಣವಾಗಿ ಅಪೇಕ್ಷಿತ ಸಾಲ ಮೊತ್ತವನ್ನು ಒದಗಿಸುತ್ತಾರೆ. ನಂತರ ಸಾಲಗಾರರು ನಿರ್ದಿಷ್ಟ ಅವಧಿಯೊಳಗೆ ನಿಗದಿತ ಬಡ್ಡಿದರದಲ್ಲಿ ಸಾಲವನ್ನು ಮರು ಪಾವತಿಸುತ್ತಾರೆ.
ಬ್ಯಾಂಕುಗಳು, ಸಾಲ ಸಂಸ್ಥೆಗಳು ಮತ್ತು ಆನ್‌ಲೈನ್ ಸಾಲದಾರರು ತುರ್ತು ಸಾಲಗಳನ್ನು ನೀಡಬಹುದು. ಸಾಲಗಾರರಿಗೆ ಇದು ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ. ಅದಕ್ಕೆ ಕ್ರೆಡಿಲ್ ಅರ್ಹತೆಯೇ ಮಾನದಂಡವಾಗುತ್ತದೆ. ಏಕೆಂದರೆ ಕೆಟ್ಟ ಕ್ರೆಡಿಟ್ ರೇಟ್ ಹೊಂದಿರುವ ಸಾಲಗಾರರಿಗೆ ತುರ್ತು ಸಾಲ ಎಂಬುದು ದುರ್ಲಭವೇ ಸರಿ. ಹಾಗಾದ್ರೆ ತುರ್ತಾಗಿ ಬೇಕು ಅಂದಾಗ ಬ್ಯಾಂಕುಗಳಿಂದ ನೇರಾವಾಗಿ ಸಾಲ ಸಿಗುತ್ತದಾ? ಅಂದರೆ ಉಳಿತಾಯ ಖಾತೆದಾರರಿಗೆ ಆಯಾ ಬ್ಯಾಂಕ್‌ನಿಂದ ವೈಯಕ್ತಿಕ ಸಾಲ ಸಿಗುತ್ತದಾ? ಎಂದು ಅನೇಕ ಮಂದಿ ಕಡಿಮೆ ಆದಾಯದ ಜನ ತಮ್ಮ ಬ್ಯಾಂಕುಗಳ ಕದ ತಟ್ಟುವುದು ಆಗಾಗ ಕಂಡುಬರುತ್ತದೆ. ಒಟ್ನಲ್ಲಿ ಹೇಗೋ ನಮಗೆ ಸಾಲ ಕೊಡಿ. ನಮ್ಮ ಪಾಸ್ ಬುಕ್ ಬ್ಯಾಲೆನ್ಸ್ ಇಷ್ಟಿದೆ ಎಂದು ಕೆಲ ಮಂದಿ ಬ್ಯಾಂಕುಗಳಿಗೆ ಎಡತಾಕುವುದುಂಟು.
ಇಲ್ಲೊಂದು ವಾಸ್ತವದ ಚಿತ್ರಣ ಕೊಡುವುದಾದರೆ ಸಾಲ ಕೇಳಿಕೊಂಡು ಬ್ಯಾಂಕ್ ಅಧಿಕಾರಿ ಮುಂದೆ ಕೈಕಟ್ಟಿಕೊಂಡು ನಿಂತಾಗ ಮೇಲ್ನೋಟಕ್ಕೆ ಪಾಸ್ ಬುಕ್ ನೋಡಿ ಅದರ ಪಲ್ಸ್ ಅರಿಯುವ ಅಂದರೆ ಸಾಲ ಕೇಳಿಕೊಂಡು ಬಂದಿರುವ ಗ್ರಾಹಕನ ಆರ್ಥಿಕ ಸಾಮರ್ಥ್ಯ ಅರಿತು ಆತನ ಮುಂದೆ ಪಾಸ್ ಬುಕ್ ಎಸೆಯುವ ಅಧಿಕಾರಿಗಳಿದ್ದಾರೆ. ಅಂದರೆ ಪಾಸ್ ಬುಕ್ ಬ್ಯಾಲೆನ್ಸ್ ನೋಡಿ ಸಾಲ ಕೊಡೋಕ್ಕೆ ಆಗೋಲ್ಲ ಹೋಗ್ರೀ ಅಂತಾರೆ. ಅಂಥಾದ್ದರಲ್ಲಿ ಪಾಸ್ ಬುಕ್ ನಿಂದ ಪಾಸ್ ಬುಕ್ ಸಾಲ (Passbook Loan) ಸಿಗುತ್ತದಾ?
ಇಂತಹ ಕ್ಲಿಷ್ಟ ಆರ್ಥಿಕ ಪರಿಸ್ಥಿತಿಗಳನ್ನು ವಿವರಿಸಿ ಬ್ಯಾಂಕ್ ಅಧಿಕಾರಿಗಳನ್ನು ಈ ಬಗ್ಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂದು ಕೇಳಿದರೆ ಅಸಲಿಗೆ ಪಾಸ್ ಬುಕ್ ಸಾಲ ಎಂಬುದು ಇಲ್ಲ. ಹಾಗೆಲ್ಲಾ ಪಾಸ್ ಬುಕ್ ಆಧಾರದ ಮೇಲೆ ಸೇವಿಂಗ್ಸ್ ಅಕೌಂಟ್ ಮುಂದಿಟ್ಟುಕೊಂಡು ಸಾಲ ಕೊಡಲಾಗುವುದಿಲ್ಲ. ಆದರೂ ಅನೇಕ ಬ್ಯಾಂಕ್ ಗ್ರಾಹಕರು ಪಾಸ್ ಬುಕ್ ಸಾಲ ಕೇಳಿಕೊಂಡು ಬರುವುದು ಉಂಟು. ಆದರೆ ಅದೊಂದು ಮಿಥ್ಯೆ. ಹಾಗೆಲ್ಲಾ ಸಾಲ ಕೊಡಲು ಬರುವುದಿಲ್ಲ ಅಂತಾರೆ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಯೊಬ್ಬರು. ಹೋಗಲೀ ಖಾಸಗಿ ಬ್ಯಾಂಕುಗಳು, ಸಹಕಾರ ಸೊಸೈಟಿಗಳಲ್ಲಿ ಇಂತಹ ವ್ಯವಸ್ಥೆ ಇದೆಯಾ ಅಂದರೆ ಇಲ್ಲಾ ಎಂಬುದೇ ಉತ್ತರವಾಗಿದೆ. ಇನ್ನು ಕೆಲವು ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿವೆ. ಆದರೆ ಭಾರತದಲ್ಲಿ ಅದಕ್ಕೆ ಅವಕಾಶ ಇಲ್ಲವಷ್ಟೆ.
ಆದರೂ ಇಂತಹ ಸಣ್ಣ ಮತ್ತು ಮಧ್ಯಮ ವರ್ಗದ ಜನರ ತುರ್ತನ್ನು ಅರಿತು, ಅವರ ಪರಿಸ್ಥಿತಿಯನ್ನು ಚೆನ್ನಾಗಿ ‘ಅರ್ಥ’ ಮಾಡಿಕೊಂಡು ಅಂತಹವರಿಗಾಗಿಯೇ ಬ್ಯಾಂಕುಗಳು ಬೇರೆಯದ್ದೇ ರೂಪದಲ್ಲಿ ತುರ್ತು ಸಾಲಗಳನ್ನು ನೀಡುವುದು ಉಂಟು. ಅಂದರೆ ಅಂತಹ ಗ್ರಾಹಕರಿಗೆ ನಿರ್ದಿಷ್ಟ ಆದಾಯ ಮೂಲ ಇರಬೇಕು. ಮತ್ತು ಭವಿಷ್ಯದಲ್ಲಿ ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲೆ ಎಂಬ ಆರ್ಥಿಕ ವಿಶ್ವಾಸ ಅವರಿಗೆ ಇರಬೇಕು. ಅದನ್ನು ಬ್ಯಾಂಕ್ ಅಧಿಕಾರಿಗಳ ಮುಂದೆ ಸಾಬೀತುಪಡಿಸಬೇಕು. ಆಗ ಮಾತ್ರ ತುರ್ತು ಸಾಲ ಊರುಗೋಲಾಗಬಹುದು ಅಷ್ಟೇ.
ಸ್ಯಾಲರಿ ಅಕೌಂಟ್, ಸೇವಿಂಗ್ಸ್ ಅಕೌಂಟ್ನಲ್ಲಿರುವ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಖಾತೆಗೆ ವರ್ಗಾಯಿಸಿ ಅದರ ಆಧಾರದಲ್ಲಿ ನೀಡುವ ಸಾಲ, ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆ … ಇವೇ ಮುಂತಾದ ಲೆಕ್ಕದಲ್ಲಿ ತುರ್ತು ಸಾಲ ಪಡೆಯಬಹುದು. ಸೊಸೈಟಿಗಳು ಸಹ ಇಂತಹ ತುರ್ತು ಸಾಲ ನೀಡುತ್ತವೆ. ಮನೆ ದುರಸ್ತಿ, ಕಾರು ದುರಸ್ತಿ ಅಥವಾ ವೈದ್ಯಕೀಯ ಬಿಲ್ ಅಂತಹುದಕ್ಕೆ ಇದನ್ನು ಬಳಸಿಕೊಳ್ಳಬಹುದು. ದುಬಾರಿ ಕ್ರೆಡಿಟ್ ಕಾರ್ಡ್ ಸಾಲಗಳಿಗಿಂತ ಈ ತುರ್ತು ಸಾಲಗಳು ನಿಮ್ಮ ಕೈಹಿಡಿಯಬಹುದು. ಸಾಲ ಮರುಪಾವತಿಸಲು ಈಗಾಗಲೇ ನಿಮಗೆ ನಿರ್ದಿಷ್ಟ ಆದಾಯ ಮೂಲ ಇರುವುದರಿಂದ ಹೆಚ್ಚಿನ ಬಡ್ಡಿ ದರ ಹೇರದೆ ಬ್ಯಾಂಕುಗಳು ಇಂತಹ ಕಿರು ಸಾಲಗಳನ್ನು ಕೊಡುತ್ತವೆ ಎಂಬುದನ್ನು ನೀವು ‘ಅರ್ಥ’ ಮಾಡಿಕೊಳ್ಳಿ. ಹಾಗಾಗಿ ಇಂತಹ ಎರವಲು ಪಡೆಯುವ ಬಗ್ಗೆ ನೀವು ಆಲೋಚಿಸಬಹುದು.
ಆದರೆ ಗಮನಿಸಿ, ಇದು ನಿವೃತ್ತರಿಗೆ ಅನ್ವಯವಾಗುವುದಿಲ್ಲ. ಹಿರಿಯರಿಗೆ ಇಂತಹ ತುರ್ತು ಸಾಲಗಳು ಸಿಗುವುದಿಲ್ಲ. ಇನ್ನು ಗೃಹಿಣಿಯರಿಗೂ ಸಿಗುವುದಿಲ್ಲ. ಬದಲಿಗೆ ಗಂಡನ ಸಂಬಳದ ಆಧಾರದಲ್ಲಿ ಒಂದಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇಂತಹ ತುರ್ತು ಸಾಲಗಳಿಗೆ ದಾಖಲೆಗಳ ಅಗತ್ಯ ಕಡಿಮೆ ಇರುತ್ತದೆ. ನೀವು ಈಗಾಗಲೇ ಅಂತಹ ಬ್ಯಾಂಕಿನ ಗ್ರಾಹಕರಾಗಿದ್ದರೆ ಸಾಮಾನ್ಯವಾಗಿ ಪರ್ಸನಲ್ ಲೋನ್ ವಿಧಾನದಲ್ಲಿ ಇರುವಂತೆ ಪ್ರೋಸಸಿಂಗ್ ಶುಲ್ಕಗಳಾಗಲಿ, ರೆಡ್ ಟೇಪ್ ಹೊರೆಯಾಗಲಿ ಇರುವುದಿಲ್ಲ. ಅಂದರೆ ಸಾಲದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಈ ತುರ್ತು ಸಾಲ ಸಹಾಯ ಮಾಡುತ್ತದೆ. ಕೆಲ ಬ್ಯಾಂಕ್‌ಗಳು ಇಂತಹ ತುರ್ತು ಸಾಲಗಳನ್ನು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡುವುದಿಲ್ಲ, ಆದ್ದರಿಂದ ನೀವು ಈ ಸಾಲವನ್ನು ಪಡೆಯುವುದು ಕ್ಷೇಮ.
ಆದರೆ ಅಂತಹ ತುರ್ತು ಸಾಲಗಳು ಈಗಾಗಲೇ ಚಾಲ್ತಿಯಲ್ಲಿ ಇರುವಂತಹುದ್ದೇ ಆಗಿರುತ್ತವೆ. ಬಹುತೇಕ ಎಲ್ಲ ಬ್ಯಾಂಕುಗಳಲ್ಲಿ ಅಂತಹ ಐದಾರು ಸಾಲಗಳು ರೆಡಿಯಾಗಿ ಲಭ್ಯವಿರುತ್ತವೆ. ಹಾಗಾದರೆ ತುರ್ತು ಸಾಲಗಳು ಹೇಗೆ ಕೆಲಸ ಮಾಡುತ್ತವೆ, ಅದಕ್ಕೆ ಅರ್ಹತೆ ಪಡೆಯುವುದು ಹೇಗೆ (ಕ್ರೆಡಿಟ್ ಸ್ಕೋರ್) ಮತ್ತು ಈ ರೀತಿಯ ಸಾಲವನ್ನು ಬಳಸುವ ಸಾಧಕ-ಬಾಧಕಗಳ ಕುರಿತು ಒಂದಷ್ಟು ತಿಳಿಯೋಣ.
ಮುಖ್ಯವಾಗಿ ಇಂತಹ ತುರ್ತು ಸಾಲಗಳು ಮೇಲಾಧಾರವಿಲ್ಲದೆಯೇ ವೈಯಕ್ತಿಕ ಸಾಲಕ್ಕಿಂತ ಕಡಿಮೆ ಬಡ್ಡಿ ದರಗಳಲ್ಲಿ ಲಭ್ಯವಿರುತ್ತವೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಕೆಲ ಆರ್ಥಿಕ ಯೋಜನೆಗಳ ಆಧಾರದಲ್ಲಿ ಸಣ್ಣಪುಟ್ಟ ವ್ಯಾಪರಿಗಳಿಗೆ ಕಡಿಮೆ ರಿಸ್ಕ್ ವಹಿವಾಟನ್ನು ನೋಡಿಕೊಂಡು ಬ್ಯಾಂಕುಗಳು ಸಾಲ ಕೊಡಲು ಮುಂದಾಗುತ್ತವೆ. ಗಮನಾರ್ಹವೆಂದರೆ ಇಂತಹ ಸಾಲವು ಉಳಿತಾಯದ ವಾಗ್ದಾನದ ಸಾಲದಂತೆಯೇ ಇರುತ್ತದೆ.
ವೈಯಕ್ತಿಕ ಸಾಲದ ವಿರುದ್ಧ ಅಂದರೆ ತುಸು ದುಬಾರಿ ಎನಿಸುವ ಬಡ್ಡಿ ದರದ ಪರ್ಸನಲ್ ಸಾಲಕ್ಕಿಂತ ಇಂತಹ ಕೆಲ ತುರ್ತು ಸಾಲಗಳು ನೆರವಾಗಬಹುದು. ಅಂದರೆ ಕಡಿಮೆ ಬಡ್ಡಿ ದರದಲ್ಲಿ ಈ ಸಾಲ ನೀಡಲಾಗುತ್ತದೆ. ಗಮನಿಸಿ ಇಂತಹ ತುರ್ತು ಸಾಲವನ್ನು ನೀವು ಅಗತ್ಯವಾಗಿ ವ್ಯಾಪಾರಕ್ಕೆ ಬಳಸಬೇಕು ಎಂದೇನೂ ಇಲ್ಲ. ಬದಲಿಗೆ, ಪಡೆದಿರುವ ಸಾಲದ ಮೊತ್ತವನ್ನು ವೈಯಕ್ತಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು. ಹೊಸ ವಾಹನ ಅಥವಾ ಪ್ರವಾಸದಂತಹ ಪ್ರಮುಖ ವೆಚ್ಚಕ್ಕಾಗಿ ಬಳಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ